ಸಾರಾಂಶ
ಸಾರ್ವಜನಿಕರಿಗೆ ಪೌಷ್ಠಿಕ ಆಹಾರದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಆಡುವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸಗೌಡ ಕರೆ ನೀಡಿದರು.
ನರಸಿಂಹಾಜಪುರ: ಸಾರ್ವಜನಿಕರಿಗೆ ಪೌಷ್ಠಿಕ ಆಹಾರದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಆಡುವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸಗೌಡ ಕರೆ ನೀಡಿದರು.
ತಾಲೂಕಿನ ಗಡಿಗೇಶ್ವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಡುವಳ್ಳಿ ಗ್ರಾಮ ಪಂಚಾಯತಿ, ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಪ್ರಾಚೀನ ಆಹಾರ ಪದ್ಧತಿಗಳಿಗೆ ಬದಲಾಗಿ ಜಂಕ್‌ಫುಡ್ ಕಡೆಗೆ ಆಸಕ್ತಿ ಹೊಂದುವ ಪರಿಣಾಮವಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಸ್ವಸಹಾಯ ಸಂಘದ ಸದಸ್ಯರಿಗೆ ಸಮತೋಲನ ಪೌಷ್ಠಿಕ ಆಹಾರದ ಬಗ್ಗೆ ಹಾಗೂ ಅದರ ಮಹತ್ವ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಪೌಷ್ಠಿಕ ಆಹಾರ ಸಪ್ತಾಹದ ಕುರಿತು ಮಾಹಿತಿ ನೀಡಿ, ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಆಹಾರದ ಸೇವನೆಯನ್ನು ಸರಿಯಾದ ಕ್ರಮದಲ್ಲಿ ಮಾಡದಿದ್ದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಪ್ರತಿದಿನ ಸೇವಿಸುವ ಆಹಾರದಲ್ಲಿ ಕಾರ್ಬೋ ಹೈಡ್ರೇಟ್, ಪ್ರೋಟೀನ್, ವಿಟಮಿನ್ ಮತ್ತು ಮಿನರಲ್ ಕೊಬ್ಬು, ನೀರು ಮತ್ತು ನಾರಿನ ಅಂಶಗಳು ಇರಬೇಕು. ಪ್ರತಿನಿತ್ಯದ ಆಹಾರದಲ್ಲಿ ಹಸಿರು ಸೊಪ್ಪು, ತರಕಾರಿಗಳು, ಮೊಳಕೆ ಕಾಳುಗಳು, ಏಕದಳ ಧಾನ್ಯ, ದ್ವಿದಳ ಧಾನ್ಯ ಸ್ಥಳಿಯವಾಗಿ ದೊರಕುವ ಹಣ್ಣುಗಳಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದರು.ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ಮಾತನಾಡಿದರು.
ಬಾಂಧವ್ಯ ನೆಟ್ವರ್ಕ್ ಸಿಬ್ಬಂದಿ ರಾಗಿಣಿ ಎಚ್‌ಐವಿ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆ ಮುಖ್ಯೋಪಾಧ್ಯಾಯ ಡಿ.ಎನ್.ಮಂಜುನಾಥ್, ಗ್ರಾಪಂ ಪಿಡಿಒ ಮಂಜುಳ ಮಾತನಾಡಿದರು. ಸಂಜೀವಿನಿ ಒಕ್ಕೂಟದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.ಇದೇ ವೇಳೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸ್ಥಳೀಯವಾಗಿ ದೊರಕುವ ಪದಾರ್ಥಗಳಿಂದ ಹಾಗೂ ಅಂಗನವಾಡಿ ಕೇಂದ್ರದಲ್ಲಿ ದೊರೆಯುವ ಪೌಷ್ಠಿಕಾಂಶದ ಪುಡಿಯಿಂದ ವಿವಿಧ ಬಗೆಯ ಪೌಷ್ಠಿಕ ಆಹಾರವನ್ನು ತಯಾರಿಸುವ ಬಗೆ ಮತ್ತು ಅದರಲ್ಲಿರುವ ಪೋಷಕಾಂಶಗಳ ಕುರಿತು ಪ್ರದರ್ಶನ ನಡೆಸಿದರು.