ಸಾರಾಂಶ
ಸಾರ್ವಜನಿಕರು ಸಂಚಾರಿ ನಿಯಮಗಳು ಮತ್ತು ಸೂಚನೆಗಳನ್ನು ಪಾಲಿಸಿದಲ್ಲಿ ಬಹಳಷ್ಟು ಅಪಘಾತಗಳನ್ನು ತಡೆಯಬಹುದೆಂದು ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್ ತಿಳಿಸಿದರು. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಳಸಿಕೊಂಡು ತಪ್ಪೆಸಗುವುದೂ ಕೂಡ ಸೈಬರ್ ಕ್ರೈಮ್ ಅನ್ವಯ ಅಪರಾಧವಾಗುತ್ತದೆ. ಈಗ ಪೋಕ್ಸೋ ಕಾಯಿದೆ ಜಾರಿಗೆ ಬಂದಿದ್ದು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಯಾವುದೇ ವ್ಯಕ್ತಿಗೆ ಕಠಿಣ ಸಜೆಗೆ ಗುರಿ ಮಾಡಲಾಗುತ್ತದೆ. ಆದ್ದರಿಂದ ಹದಿಹರೆಯದ ವಯಸ್ಸಿನಲ್ಲಿರುವ ತಾವುಗಳು ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ತಮ್ಮ ಉಜ್ವಲ ಭವಿಷ್ಯ ನಾಶವಾಗುತ್ತದೆಂದು ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಾರ್ವಜನಿಕರು ಸಂಚಾರಿ ನಿಯಮಗಳು ಮತ್ತು ಸೂಚನೆಗಳನ್ನು ಪಾಲಿಸಿದಲ್ಲಿ ಬಹಳಷ್ಟು ಅಪಘಾತಗಳನ್ನು ತಡೆಯಬಹುದೆಂದು ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್ ತಿಳಿಸಿದರು. ತಾಲೂಕಿನ ಕಣಕಟ್ಟೆಯ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು ಹಾಗೂ ಕೈಗಾರಿಕಾ ತರಬೇತಿ ಕೇಂದ್ರಗಳ ರಾಷ್ರೀಯ ಸೇವಾ ಯೋಜನಾ ಘಟಕ ಮತ್ತು ಬಾಣಾವರ ಪೋಲೀಸ್ ಠಾಣೆ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ ಸಮಾರಂಭದಲ್ಲಿ ಉಪನ್ಯಾಸ ನೀಡಿ ಸಂಚಾರಿ ನಿಯಮಗಳನ್ನು ಪಾಲಿಸದೇ ವಾರ್ಷಿಕವಾಗಿ ಸಂಭವಿಸುವ ರಸ್ತೆ ಅಪಘಾತಗಳ ಅಂಕಿ ಅಂಶಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಾಕಷ್ಟು ಆತಂಕಕಾರಿಯಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಬೇಕಿದೆ ಎಂದರು. ವಿದ್ಯಾರ್ಥಿನಿಯರಿಗೆ ಲೈಂಗಿಕವಾಗಿ ತೊಂದರೆ ಕೊಡುವುದು, ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಕುವುದು ಈ ಎಲ್ಲಾ ಅಪರಾಧಗಳು ಭಾರತೀಯ ದಂಡ ಸಂಹಿತೆಯನ್ವಯ ಶಿಕ್ಷಾರ್ಹವಾಗುತ್ತದೆ. ಅದೇ ರೀತಿ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಳಸಿಕೊಂಡು ತಪ್ಪೆಸಗುವುದೂ ಕೂಡ ಸೈಬರ್ ಕ್ರೈಮ್ ಅನ್ವಯ ಅಪರಾಧವಾಗುತ್ತದೆ. ಈಗ ಪೋಕ್ಸೋ ಕಾಯಿದೆ ಜಾರಿಗೆ ಬಂದಿದ್ದು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಯಾವುದೇ ವ್ಯಕ್ತಿಗೆ ಕಠಿಣ ಸಜೆಗೆ ಗುರಿ ಮಾಡಲಾಗುತ್ತದೆ. ಆದ್ದರಿಂದ ಹದಿಹರೆಯದ ವಯಸ್ಸಿನಲ್ಲಿರುವ ತಾವುಗಳು ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದಾಗಲೀ ಅಥವಾ ಸಹಕಾರ ನೀಡುವುದಾಗಲೀ ಮಾಡಿದಲ್ಲಿ ತಮ್ಮ ಉಜ್ವಲ ಭವಿಷ್ಯ ನಾಶವಾಗುತ್ತದೆಂದು ಎಚ್ಚರಿಸಿದರು.ಸಮಾರಂಭ ಉದ್ಘಾಟಿಸಿದ ಶ್ರೀ ವಿದ್ಯಾರಣ್ಯ ವಿದ್ಯಾ ಸಂಸ್ಥೆಯ ಗೌ.ಕಾರ್ಯದರ್ಶಿ ನಾಗೇಶರಾವ್ ಮಾತನಾಡಿ ಪೊಲೀಸ್ ಇಲಾಖೆಯ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹದ ಮುಖ್ಯ ಉದ್ದೇಶ ಜನರಿಗೆ ಸಂಚಾರಿ ನಿಯಮದ ಬಗ್ಗೆ ಅರಿವು ಮೂಡಿಸುವುದು ಮತ್ತು ಅಪಘಾತ ತಡೆಯುವುದಾಗಿದೆ. ಆದ್ದರಿಂದ ತಾವು ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ. ವಾಹನ ಚಲಾಯಿಸುವ ಸಂದರ್ಭದಲ್ಲಿ ಮದ್ಯಪಾನ ಮಾಡಬಾರದೆಂದು ಮತ್ತು ಮೊಬೈಲ್ ಫೋನ್ ಬಳಸಬಾರದೆಂದರು.
ಮುಖ್ಯ ಅತಿಥಿಗಳಾಗಿದ್ದ ಬಾಣಾವರ ಪೋಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕ ಸುರೇಶ್ ಮಾತನಾಡಿ, ೧೮ ವರ್ಷದೊಳಗಿನ ವಿದ್ಯಾರ್ಥಿಗಳು, ಸಾರ್ವಜನಿಕರು ವಾಹನ ಚಾಲಾನಾ ಲೈಸೆನ್ಸ್ ಇಲ್ಲದೇ ದ್ವಿಚಕ್ರ ಅಥವಾ ನಾಲ್ಕು ಚಕ್ರ ವಾಹನ ಓಡಿಸುವುದು ಮೋಟಾರ್ ಕಾಯ್ದೆಯನ್ವಯ ಅಪರಾಧವಾಗುತ್ತದೆ. ಆದ್ದರಿಂದ ವಾಹನ ಚಲಾಯಿಸುವ ಪ್ರತಿಯೊಬ್ಬರೂ ಅಗತ್ಯ ಡಿ.ಎಲ್, ಇನ್ಸ್ಯೂರೆನ್ಸ್ ಪಡೆದು ಗಾಡಿ ಚಲಾವಣೆ ಮಾಡಲು ಕೋರಿದರು. ಇತ್ತೀಚೆಗೆ ಪೋನ್ ಮೂಲಕ ಎ.ಟಿ.ಎಂ. ಪಿನ್, ಪಾಸ್‌ವರ್ಡ್ ಕೇಳುವುದು, ಈ- ಮೇಲ್ ಅಥವಾ ಎಸ್‌ಎಂಎಸ್ ಮೂಲಕ ತಮಗೆ ಲಾಟರಿ ಬಂದಿದೆಯೆಂದು ವಂಚಿಸುವ ಜಾಲಗಳು ಹೆಚ್ಚಾಗಿದ್ದು ಇಂತಹ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎ.ಶಶಿಕುಮಾರ್ ಮಾತನಾಡಿ, ಪೋಲೀಸ್ ಇಲಾಖೆಯ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳು ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿ ಸಂಚಾರಿ ಸಮಸ್ಯೆಗಳನ್ನು ಪರಿಹರಿಸಲು ತೊಡಗಿಸಿಕೊಳ್ಳಬೇಕೆಂದರು.
ಸಮಾರಂಭದಲ್ಲಿ ವಿದ್ಯಾರಣ್ಯ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಪುಟ್ಟರಂಗಪ್ಪ, ಎನ್.ಎಸ್.ಎಸ್ ಅಧಿಕಾರಿ ಮೂರ್ತಿ, ಕಣಕಟ್ಟೆ ಪೊಲೀಸ್ ಠಾಣೆ ಸಿಬ್ಬಂದಿ ಹಾಜರಿದ್ದರು.