ಸಾರಾಂಶ
ನರಗುಂದ ಪಟ್ಟಣದ ಸರ್ಕಾರಿ ಬಾಲಕರ ವಸತಿ ನಿಯಲದಲ್ಲಿ ಡೆಂಘೀ ವಿರೋಧಿ ಮಾಸಾಚರಣೆ ಅಂಗವಾಗಿ ಅವರು ಬುಧವಾರ ವಸತಿ ಶಾಲಾ ವಾರ್ಡನ್ ಹಾಗೂ ಸಿಬ್ಬಂದಿಗೆ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ನರಗುಂದ: ಮಳೆಗಾಲದಲ್ಲಿ ಜನರು ಮಳೆ ನೀರು ನಿಲ್ಲದಂತೆ ನೋಡಿಕೊಂಡರೆ ಸೊಳ್ಳೆಗಳ ಉತ್ಪಾದನೆ ನಿಯಂತ್ರಣ ಮಾಡಲು ಸಾಧ್ಯ ಎಂದು ಜಗಾಪುರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್. ಗಂಜಿ ಹೇಳಿದರು.
ಅವರು ಬುಧವಾರ ಪಟ್ಟಣದ ಸರ್ಕಾರಿ ಬಾಲಕರ ವಸತಿ ನಿಯಲದಲ್ಲಿ ಡೆಂಘೀ ವಿರೋಧಿ ಮಾಸಾಚರಣೆ ಅಂಗವಾಗಿ ವಸತಿ ಶಾಲಾ ವಾರ್ಡನ್ ಹಾಗೂ ಸಿಬ್ಬಂದಿಗೆ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಮತ್ತು ನಂತರ ಮಳೆ ನೀರು ಅಲ್ಲಲ್ಲಿ ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ಅಧಿಕವಾಗಿ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾ ಹರಡುತ್ತದೆ. ಆದ್ದರಿಂದ ಇಲಾಖೆಯಿಂದ ಕೆರೆ, ಕಟ್ಟೆ ಮುಂತಾದ ನಿಂತ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡಲಾಗುತ್ತದೆ. ಯಾವುದೇ ಜ್ವರವಿದ್ದಲ್ಲಿ ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಬೇಕು. ಸರ್ಕಾರಿ ಆಸ್ಪತ್ರೆ ಮತ್ತು ಕ್ಷೇತ್ರಗಳಲ್ಲಿ ಆಶಾ ಮತ್ತು ಕ್ಷೇತ್ರ ಸಿಬ್ಬಂದಿ ರಕ್ತ ಸಂಗ್ರಹಿಸುತ್ತಾರೆ. ಮಲೇರಿಯಾ ಕಂಡು ಬಂದಲ್ಲಿ ಉಚಿತವಾಗಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದರು.ಸಂಪನ್ಮೂಲ ವ್ಯಕ್ತಿ ಎಸ್.ಆರ್. ದೇಸಾಯಿ ಮಾತನಾಡಿ, ಈಡಿಸ್ ಇಜಿಪ್ಟೈ ಸೊಳ್ಳೆ ಕಡಿತದಿಂದ ಡೆಂಘೀ ಬರುತ್ತದೆ. ಈ ರೋಗಪೀಡಿತ ವ್ಯಕ್ತಿಗೆ ಸುಮಾರು 1 ವಾರದೊಳಗೆ ತೀವ್ರವಾದ ಜ್ವರ, ತಲೆನೋವು ಕಣ್ಣುಗಳ ಹಿಂಭಾಗದಲ್ಲಿ ತೀವ್ರವಾದ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಂಡುಬರುತ್ತದೆ. ಅಂತಹ ಲಕ್ಷಣ ಇದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಬೇಕು. ಸಕಾಲಕ್ಕೆ ಚಿಕಿತ್ಸ ಪಡೆದರೆ ಸಾವು ಸಂಭವಿಸುವುದನ್ನು ತಪ್ಪಿಸಲು ಸಾಧ್ಯ ಎಂದರು.
ಈರಣ್ಣ ಚಿಲಿಮಿ ಮಾತನಾಡಿ, ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಸ್ವಯಂ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ಸಾಯಂಕಾಲ ಮನೆಗಳಲ್ಲಿ ಬೇವಿನಸೊಪ್ಪಿನ ಹೊಗೆ ಹಾಕುವುದು, ಕಿಟಕಿ, ಬಾಗಿಲುಗಳಿಗೆ ಜಾಳಿಗೆ ಅಳವಡಿಸುವುದು, ಮೈ ತುಂಬಾ ಬಟ್ಟೆ ಸರಿಸುವುದು, ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಬ್ಯಾಟ್, ದ್ರಾವಣಗಳನ್ನು ಉಪಯೋಗಿಸುವುದರ ಬಗ್ಗೆ ತಿಳಿಸಿದರು.ಸಿ.ಎಫ್. ಕುಂಬಾರ, ಮಂಜುನಾಥ ಕುದರಿ, ಶಿವಾನಂದ ಕುರಹಟ್ಟಿ, ವಿ.ಎಫ್. ಭೀಮಣ್ಣವರ, ವಿ.ವಿ. ಅಡಕಿ ಇದ್ದರು.