ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾರ್ಜನೆ ಪೂರ್ಣಗೊಂಡ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆಯದೇ ಇಂತಹ ಉದ್ಯೋಗ ಮೇಳದಲ್ಲಿ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ನವನಗರದ ಕಲಾಭವನದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉದ್ಯೋಗ ವಿನಿಮಯ ಕಚೇರಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ತಂದೆ ತಾಯಿಯರಿಗೆ ಮಕ್ಕಳ ವಿದ್ಯಾಬ್ಯಾಸ ಪೂರ್ಣಗೊಳಿಸಿ ಮನೆಯಲ್ಲಿ ಕುಳಿತಾಗ ಸಹಜವಾಗಿ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡುವುದಲ್ಲದೇ ಕಾಳಿ ಕುಳಿತದ್ದು, ಆತಂಕಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಸರಕಾರ ಯುವನಿಧಿ ಯೋಜನೆ ಜಾರಿಗೆ ತಂದಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿ ನೌಕರಿ ಅರಿಸಿ ಪಡೆಯಬೇಕಾದರೆ ಕೆಲ ಸಮಯ ಬೇಕಾಗುತ್ತದೆ. ಅಂತಹ ಸಮಯದಲ್ಲಿ ವಿದ್ಯಾರ್ಥಿಗಳ ಆತಂಕ ದೂರು ಮಾಡಲು ಸರಕಾರಿ ಯುವನಿಧಿ ಯೋಜನೆಯಡಿ ಪದವೀಧರರಿಗೆ ₹3 ಸಾವಿರ ಹಾಗೂ ಡಿಪ್ಲೊಮಾದವರಿಗೆ ₹1500 ನೀಡಲಾಗುತ್ತಿದೆ. ಇಂತಹ ಉದ್ಯೋಗ ಮೇಳದಲ್ಲಿ ದೊರೆತ ಉದ್ಯೋಗ ಪಡೆದು ನಿಷ್ಠೆ ಹಾಗೂ ವಿಶೇಷ ಕೌಶಲ್ಯದಿಂದ ಮುಂದೆ ಬಂದಲ್ಲಿ ನೀವು ದುಡಿಯುವುದಲ್ಲದೇ ಇನ್ನು ಹತ್ತು ಹಲವಾರು ಜನರಿಗೆ ನೀಡುವಂತರಾಗಬೇಕು. ಜಿಲ್ಲೆಯಲ್ಲಿ ಉದ್ದಿಮೆ ಸ್ಥಾಪಿಸಲು ಎಲ್ಲ ರೀತಿಯ ಸಂಪನ್ಮೂಲ ಇದ್ದು, ಇದರ ಸದುಪಯೋಗ ಯುವಕರು ಪಡೆದು ಜಿಲ್ಲೆಯ ಪ್ರತಿಭೆಗಳು ಜಿಲ್ಲೆಯಲ್ಲಿಯೇ ಬೆಳೆದಲ್ಲಿ ನಾಡಿಗೆ ಕೀರ್ತಿ ತಂದತ್ತಾಗುತ್ತದೆ ಎಂದರು.ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಮಾತನಾಡಿ, ಭಾರತೀಯ ಯುವ ಉದ್ಯೋಗಿಗಳು ಅಮೇರಿಕಾದಂತ ದೊಡ್ಡ ರಾಷ್ಟ್ರದಲ್ಲಿ ಹೆಸರ ಮಾಡಿದ್ದು, ಅಂತಹ ಪ್ರತಿಭೆಗಳು ಬಾಗಲಕೋಟೆ ಜಿಲ್ಲೆಯಲ್ಲಿ ಇದ್ದು, ಇಂತಹ ಮೇಳದಲ್ಲಿ ತಮ್ಮ ಪ್ರತಿಭೆ ಹಾಗೂ ಕೌಶಲ್ಯದೊಂದಿಗೆ ಉದ್ಯೋಗ ಪಡೆದು ಮುಂದೆ ಬರಬೇಕು ಎಂದರು. ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಹುಟ್ಟಿದ ಪ್ರತಿಯೊಬ್ಬರಲ್ಲೂ ಒಂದು ವಿಶೇಷ ಶಕ್ತಿ ಹಾಗೂ ಕೌಲಶ್ಯವಿದ್ದು, ಸರಿಯಾದ ಮಾರ್ಗದರ್ಶನ ತೋರಿದಲ್ಲಿ ಮುಂದೆ ಬರಲು ಸಾದ್ಯವೆಂದರು.
ತೇರದಾಳದ ಶಾಸಕ ಸಿದ್ದು ಸವದಿ ಮಾತನಾಡಿ, ಉದ್ಯೋಗ ಅರಿಸಿ ಬಂದ ವಿದ್ಯಾರ್ಥಿಗಳಿಗೆ ಇಂತ ಮೇಳಗಳಲ್ಲಿ ಕಾಟಾಚಾರಕ್ಕೆ ಉದ್ಯೋಗ ನೀಡಿ ಕೆಲವು ತಿಂಗಳ ಬಳಿಕ ಅವರನ್ನು ತೆಗೆದುಹಾಕುವ ಕಾರ್ಯವಾಗಬಾರದು. ಉದ್ಯೋಗದಲ್ಲಿ ಬೇದಭಾವ ತೋರದೇ ದೊರೆತ ಕೆಲಸವನ್ನು ದಕ್ಷತೆ ಹಾಗೂ ನಿಷ್ಠೆಯಿಂದ ಮಾಡಲು ತಿಳಿಸಿದರು. ಯುವಕರು ನೌಕರಿಗೆ ಬೆನ್ನು ಹತ್ತದೇ ಕೃಷಿಯತ್ತ ಒಲವು ತೋರಬೇಕು ಎಂದರು.ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹಿರೇಮಠ, ಉದ್ಯೊಗ ಮೇಳದ 51 ಕಂಪನಿಗಳು ಭಾಗವಹಿಸಿದ್ದು, 3500 ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ಕಳೆದ ಬಾರಿ 206 ಜನರಿಗೆ ಉದ್ಯೋಗ ದೊರಕಿಸಿ ಕೊಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಉಮಾಶ್ರೀ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಓ ಶಶಿಧರ ಕುರೇರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಕೌಸರ್ ಹೊನ್ಯಾಳ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.