ಲಾಭದಾಯಕ ಉದ್ಯಮವಾಗಿಸುವುದು ಮುಖ್ಯ

| Published : Oct 04 2025, 12:00 AM IST

ಸಾರಾಂಶ

ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ದಿಮೆಯೊಂದನ್ನು ಸ್ಥಾಪಿಸುವುದು ಹಾಗೂ ಅದನ್ನು ಬೆಳೆಸುವುದು ಅಷ್ಟು ಸುಲಭದ ಮಾತಲ್ಲ

ಕೊಪ್ಪಳ: ಕಷ್ಟಪಟ್ಟು ಆರಂಭಿಸುವ ಉದ್ಯಮ ಲಾಭದಾಯಕವನ್ನಾಗಿಸುವುದು ಹಾಗೂ ಅದನ್ನು ಮುನ್ನಡೆಸಿಕೊಂಡು ಹೋಗುವುದು ಬಹಳ ಮುಖ್ಯ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ನಗರದ ಫಾರ್ಚುನ್ ಹೋಟೆಲ್‌ನಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ಹಾಗೂ ಕೆಸಿಟಿಯು ಟೆಕ್ಸಾಕ್, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಎಂಎಸ್ಎಇ ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು( RAMP ) ಯೋಜನೆಯಡಿ TReDS ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸ್ವಂತ ಉದ್ದಿಮೆ ಸ್ಥಾಪಿಸಿ,ಸ್ವಾವಲಂಬಿಯಾಗುವುದು ಹಲವರ ಕನಸು. ಆದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ದಿಮೆಯೊಂದನ್ನು ಸ್ಥಾಪಿಸುವುದು ಹಾಗೂ ಅದನ್ನು ಬೆಳೆಸುವುದು ಅಷ್ಟು ಸುಲಭದ ಮಾತಲ್ಲ.ಶ್ರಮವಹಿಸಿ ಆರಂಭಿಸಿದ ಉದ್ಯಮ ಲಾಭದಾಯಕಗೊಳಿಸುವುದಷ್ಟೇ ಅಲ್ಲ ಅದೇ ಲಾಭ ಕಾಯ್ದುಕೊಳ್ಳುವುದು ಮತ್ತು ಇನ್ನಷ್ಟು ಲಾಭದೆಡೆಗೆ ಕೊಂಡೊಯ್ಯುವುದು ಬಹಳ ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮನ್ಸೂರ್ ಮಾತನಾಡಿ, ಕೃಷಿ ಕ್ಷೇತ್ರದ ನಂತರ ಅತೀ ಹೆಚ್ಚು ಎಂಎಸ್ಎಇ ಕ್ಷೇತ್ರವು ಉದ್ಯಮ ಸೃಷ್ಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ರ‍್ಯಾಂಪ್ ಯೋಜನೆಯನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸುತ್ತಿದೆ. ಇದರ ಭಾಗವಾಗಿ ಈ ದಿನ ಕಾರ್ಯಾಗಾರ ಆಯೋಜಿಸಲಾಗುತ್ತಿದ್ದು, ಜಿಲ್ಲೆಯ ಎಂಎಸ್ಎಇ ಕೈಗಾರಿಕೋದ್ಯಮಿಗಳು ನವ ಉದ್ಯಮ ಆರಂಭಿಸಿ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿ ಮಾಡಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕೊಪ್ಪಳ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಬೆಂಗಳೂರಿನ ಟೆಕ್ಸಾಕ್‌ನ ಸಿಇಒ ಹಾಗೂ ಮುಖ್ಯ ಸಲಹೆಗಾರ ಸಿದ್ದರಾಜು, ರಿಫಾ ಚೇಂಬರ್ ಆಫ್ ಕಾಮರ್ಸ್‌ ಶಾಹಿದ್ ತಹಸೀಲ್ದಾರ, ಜಿಲ್ಲಾ ಎಸ್.ಬಿ.ಐ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಾರುತಿ, ಕೆ.ಎಸ್.ಎಫ್.ಸಿಯ ಶಾಖಾ ವ್ಯವಸ್ಥಾಪಕ ಸೋಮೇಶ ಎಂ.ಚಿಕ್ಕಮಠ, ಸಿಡಾಕ್‌ನ ಜಂಟಿ ನಿರ್ದೇಶಕ ಜಿ.ಯು. ಹುಡೇದ ಸೇರಿದಂತೆ ಕೈಗಾರಿಕೋದ್ಯಮಿಗಳು, ನವೋದ್ಯಮಿಗಳು, ವಿವಿಧ ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.