ಸಾರಾಂಶ
ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಬೆಳಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಮೇಲೇರಿ (ಕೆಂಡಸೇವೆ) ಗಮನ ಸೆಳೆದವು. ಈ ಸಂದರ್ಭ ಊರ ಹಾಗೂ ಪರ ಊರ ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು, ದೇವರಿಗೆ ವಿವಿಧ ರೀತಿಯ ಹರಕೆ, ಸೇವೆಗಳನ್ನು ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವ ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಮಂಗಳವಾರ ದೇವಾಲಯದ ಆವರಣದಲ್ಲಿ ನಡೆದ ಎರಡು ಪ್ರಮುಖ ಕೋಲಗಳೊಂದಿಗೆ ಉತ್ಸವ ಸಂಪನ್ನಗೊಂಡಿತು. ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಬೆಳಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಮೇಲೇರಿ (ಕೆಂಡಸೇವೆ) ಗಮನ ಸೆಳೆದವು. ಈ ಸಂದರ್ಭ ಊರ ಹಾಗೂ ಪರ ಊರ ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು, ದೇವರಿಗೆ ವಿವಿಧ ರೀತಿಯ ಹರಕೆ, ಸೇವೆಗಳನ್ನು ನೆರವೇರಿಸಿದರು. ದೇವಾಲಯದ ವತಿಯಿಂದ ಅನ್ನದಾನ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಜರುಗಿದ ವಿಷ್ಣುಮೂರ್ತಿ ಕೋಲವನ್ನು ಭಕ್ತರು ವೀಕ್ಷಿಸಿದರು. ದೇವಾಲಯದ ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯವರು ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಉತ್ಸವದಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕಎ.ಎಸ್. ಪೊನ್ನಣ್ಣ ಭಾಗವಹಿಸಿದ್ದರು. ಈ ಸಂದರ್ಭ ದೇವರ ಅಭಯ ಕಾರ್ಣಿಕ ನುಡಿಯ ಮೂಲಕ ಆಶೀರ್ವಾದ ಪಡೆದು
ಪ್ರಸಾದ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು ಈ ಶ್ರೀ ಕ್ಷೇತ್ರ ಅತ್ಯಂತ ಪುರಾತನ ಇತಿಹಾಸ ಹೊಂದಿರುವ ಶ್ರದ್ಧಾ ಕೇಂದ್ರವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಇಲ್ಲಿ ಭಾಗವಹಿಸುತ್ತಾರೆ. ಇಲ್ಲಿಯ ವ್ಯವಸ್ಥೆ ಕೂಡ ಉತ್ತಮವಾಗಿದೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.