ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜಾತಿ ಜನಗಣತಿ ವರದಿಗೆ ವಿರೋಧವಿಲ್ಲ ಆದರೆ, ವೈಜ್ಞಾನಿಕವಾಗಿ ಹಾಗೂ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿ ಅಂಕಿ ಅಂಶ ಬಹಿರಂಗಪಡಿಸಿ. ಯಾವುದೋ ಒಂದು ದುರುದ್ದೇಶ ಇಟ್ಟುಕೊಂಡು ಜಾತಿ ಜನಗಣತಿಯಲ್ಲಿ ಅಂಕಿಸಂಖ್ಯೆ ಕಡಿಮೆ ತೋರಿಸಲು ಹೊರಟಿರುವ ಸರ್ಕಾರದ ನಡೆ ಸರಿಯಲ್ಲ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಾಸೋಹ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆಯನ್ನು ವೀರಶೈವ ಲಿಂಗಾಯತ ಸಮುದಾಯ ನೀಡಿದೆ. ಪ್ರಗತಿಗೆ ಇನ್ನೊಂದು ಹೆಸರೇ ವೀರಶೈವ ಲಿಂಗಾಯತ ಸಮುದಾಯ ಎಂದರು. ಸರ್ಕಾರದ ಸೌಲಭ್ಯ ಕೊಡುವ ಸಲುವಾಗಿ ಕರ್ನಾಟಕ ಏಕೀಕರಣದಿಂದ ಹಿಡಿದು ಇಲ್ಲಿಯವರೆಗೆ ಮುಖ್ಯಮಂತ್ರಿಯಾದವರು ಜನಸಂಖ್ಯೆ ತೋರಿಸುವುದು, ಜಾತಿ ಒಡೆಯುವ ಕೆಲಸ ಯಾರೂ ಮಾಡಿಲ್ಲ. ಆದರೆ, ಈಗಿನ ರಾಜ್ಯ ಸರ್ಕಾರದವರು ಮಾತ್ರ ಜಾತಿ ಹಾಗೂ ಒಳಪಂಗಡಗಳನ್ನು ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ವೀರಶೈವ, ಲಿಂಗಾಯತ ಎಂದು ನಮ್ಮಲ್ಲಿ ಬೇಧ ಇಲ್ಲ. ಹಿಂದೆ ಜಾತಿ ಒಡೆಯಲು ಹೋದವರು ಏನು ಪರಿಣಾಮ ಎದುರಿಸಿದ್ದಾರೆ ಎಂಬುದನ್ನು ಎಲ್ಲರಿಗೂ ತಿಳಿದ ವಿಷಯ. ಮತ್ತೆ ರಾಜ್ಯ ಸರ್ಕಾರ ಸೌಲಭ್ಯ ಕೊಡಲು ಜಾತಿಗಳನ್ನು ವಿಂಗಡನೆ ಮಾಡುವುದಕ್ಕೆ ಕೈಹಾಕಿದೆ. ಡಿ.23 ರಿಂದ 24 ರವರೆಗೆ ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ 24ನೇ ಮಹಾ ಅಧಿವೇಶನ ನಡೆಯಲಿದೆ ಎಂದರು.