ಸಾರಾಂಶ
ಚುನಾವಣಾ ಸೆಕ್ಟರ್ ಅಧಿಕಾರಿ ಗುಡಿಮನಿ ಮಾಹಿತಿ
ಡಂಬಳ: ಜಿಲ್ಲಾ ಚುನಾವಣಾ ಅಧಿಕಾರಿಗಳ ಸಲಹೆ ಸೂಚನೆಯ ಮೇರೆಗೆ ವಿವಿ ಪ್ಯಾಟ್ ಮತದಾನದ ಪ್ರಾತ್ಯಕ್ಷಿಕೆಯನ್ನು ಪ್ರಮುಖ ಸ್ಥಳಗಳಲ್ಲಿ ಸಮರೋಪಾದಿಯಲ್ಲಿ ಮಾಡಲಾಗುತ್ತಿದೆ ಎಂದು ಚುನಾವಣಾ ಸೆಕ್ಟರ್ ಅಧಿಕಾರಿ ಸಹಾಯಕ ಅಭಿಯಂತರ ಸಂತೋಷ ಗುಡಿಮನಿ ಹೇಳಿದರು.ಡಂಬಳ ಗ್ರಾಮದ ಉಪತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಮತ ಚಲಾಯಿಸುವ ಕುರಿತು ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೀವು ಯಾವ ಅಭ್ಯರ್ಥಿಗೆ ಮತ ಚಲಾಯಿಸುತ್ತೀರೋ ಅವರ ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆ ವಿವಿ ಪ್ಯಾಟ್ (ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರದಲ್ಲಿ ಒಂದು ಚೀಟಿಯ ಮೇಲೆ ಮುದ್ರಿತವಾಗುವುದರ ಮೂಲಕ ಮತ ಖಾತ್ರಿಯಾಗುತ್ತದೆ. ಮತ ಚಲಾಯಿಸಿದ ರಶೀದಿಯನ್ನು 7 ಸೆಕೆಂಡುಗಳ ಕಾಲ ಡ್ರಾಸ್ ಪ್ಲೆ ಸೆಕ್ಷನ್‌ದಲ್ಲಿ ನೋಡಬಹುದಾಗಿದೆ. ನಂತರ ಆ ರಶೀದಿ ಡ್ರಾರ್ಪ್ ಬಾಕ್ಸ್‌ನಲ್ಲಿ ಬೀಳುವುದು. ಈ ಹಿಂದೆ ವಿದ್ಯುನ್ಮಾನ ಮತಯಂತ್ರ ಮಾತ್ರ ಇದ್ದು ಕಂಟ್ರೋಲ್ ಯುನಿಟ್ ಹಾಗೂ ಬ್ಯಾಲೆಟ್ ಯುನಿಟ್ ಇರುತ್ತಿತ್ತು. ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕವಾಗಿ ಮತದಾರರಲ್ಲಿ ಇನ್ನಷ್ಟು ಖಾತರಿ ತರಲು ಚುನಾವಣೆಯಲ್ಲಿ ವಿವಿ ಪ್ಯಾಟ್ ಅಳವಡಿಸಲಾಗಿದೆ. ಇದರಿಂದ ಮತದಾರರಲ್ಲಿ ಹೆಚ್ಚು ಆತ್ಮ ವಿಶ್ವಾಸ ಮೂಡಿಸಲಿದೆ ಎಂದು ಹೇಳಿದರು. ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಪ್ರಜೆ ಆತ್ಮವಿಶ್ವಾಸದಿಂದ ಮತ ಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ಮಂಡಾಗಣಿ ಮಾತನಾಡಿ, ವಿವಿ ಪ್ಯಾಟ್ ಪ್ರಾತ್ಯಕ್ಷಿಯನ್ನು ಜನನಿಬೀಡ ಪ್ರದೇಶಗಳಲ್ಲಿ, ಪ್ರಮುಖ ಬಡಾವಣೆಗಳಲ್ಲಿ, ಪದವಿ ಕಾಲೇಜುಗಳಲ್ಲಿ ಮಾಡುವುದರ ಮೂಲಕ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮತದಾರರನ್ನು ಪ್ರೇರೇಪಿಸಲಾಗುತ್ತಿದೆ ಎಂದರು.ದ್ವಿತೀಯ ದರ್ಜೆ ಸಹಾಯಕ ಮೃತ್ಯುಂಜಯ ವಿಭೂತಿ ಮಾತನಾಡಿ, ಪ್ರತಿಯೊಬ್ಬ ಪ್ರಜೆ ಮತದಾನ ಮಾಡಲು ಮುಂದಾಗಬೇಕು, ಪ್ರಜಾಪ್ರಭುತ್ವದಲ್ಲಿ ಮತದಾನ ಜನಸಾಮಾನ್ಯರ ಶಕ್ತಿ. ಹಾಗಾಗಿ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳುವ ಹಿನ್ನೆಲೆ ವಿವಿ ಪ್ಯಾಟ್ ಪ್ರಾತ್ಯಕ್ಷಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.ಈ ವಿವಿ ಪ್ಯಾಟ್ ಪ್ರಾತ್ಯಕ್ಷಿಕೆಯಲ್ಲಿ ಜನರು ಪಾಲ್ಗೊಂಡು ಮತದಾನ ಮಾಡುವುದರ ಮೂಲಕ ತಮ್ಮ ಮತವನ್ನು ಖಾತ್ರಿ ಪಡಿಸಿಕೊಂಡರೂ ಕೆಲವರು ವಿವಿಪ್ಯಾಟ್‌ನಲ್ಲಿ ತೋರಿಸುವ ಭಾವಚಿತ್ರವನ್ನು ಎಣಿಸುತ್ತಾರೆ ಅಥವಾ ಈ ಮಿಷನ್ ಮೂಲಕ ಮತವನ್ನು ಎಣಿಕೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಚುಣಾವಣಾ ಸೆಕ್ಟರ್ ಅಧಿಕಾರಿ ಸಂತೋಷ ಗುಡಿಮನಿ ಅದರ ಕುರಿತು ಸೂಕ್ತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಿಎಲ್‍ಒಗಳು ಮತ್ತು ಕಂದಾಯ ಸಿಬ್ಬಂದಿ ವರ್ಗ, ಗ್ರಾಮಸ್ಥರು ಇದ್ದರು.