ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಹೊರವಲಯದ ಮಳಲಿ ಮಸೀದಿ ವಿವಾದದಲ್ಲಿ ಉತ್ಖನನ ಮಾಡಿ ಸರ್ವೇಗೆ ಆದೇಶಿಸುವಂತೆ ಕೋರಿ ವಿಶ್ವಹಿಂದು ಪರಿಷತ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮಂಗಳೂರು ನ್ಯಾಯಾಲಯ, ವಿಚಾರಣೆಯನ್ನು ಸೋಮವಾರಕ್ಕೆ ಮತ್ತೆ ಮುಂದೂಡಿದೆ.ಶನಿವಾರ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ ವಿಹಿಂಪ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಲಾಯಿತು. ವಿವಾದಿತ ಮಳಲಿ ಮಸೀದಿಯ ಉತ್ಖನನ ಮಾಡಿ ಸರ್ವೇ ನಡೆಸಲು ವಿಹಿಂಪ ಮಾಡಿದ ಮನವಿಗೆ ಮಸೀದಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಹೈಕೋರ್ಟ್ ತೀರ್ಪಿನ ಪ್ರತಿ ತಲುಪಿದ ಬಳಿಕ ವಾದ ಮಂಡನೆ ಮಾಡುವುದಾಗಿ ಹೇಳಿಕೆ ನೀಡಿದರು.
ಈಗಾಗಲೇ ಹೈಕೋರ್ಟ್‌ನಿಂದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟಿಗೆ ನಿರ್ದೇಶನ ನೀಡಲಾಗಿದೆ.ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿ ಹೌದಾ ಅಲ್ಲವೇ ಎಂದು ನಿರ್ಧರಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ಹೈಕೋರ್ಟ್ ಆದೇಶ ಪ್ರತಿ ತಲುಪದ ಹಿನ್ನೆಲೆಯಲ್ಲಿ ಮಸೀದಿ ಪರ ವಕೀಲರು ವಾದ ಮಂಡನೆಗೆ ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು.
ಹೀಗಾಗಿ ವಿಚಾರಣೆಯನ್ನು ಮತ್ತೆ ಸೋಮವಾರಕ್ಕೆ ಕೋರ್ಟ್ ಮುಂದೂಡಿತು. ಸೋಮವಾರ ಮಸೀದಿ ಪರ ವಾದ ಮಂಡಿಸದೇ ಇದ್ದರೆ ಆದೇಶ ಮಾಡುವುದಾಗಿ ನ್ಯಾಯಾಧೀಶರು ಸೂಚನೆ ನೀಡಿದರು.ಏಪ್ರಿಲ್ 22, 2022ರಂದು ಮಳಲಿ ಮಸೀದಿ ವಿವಾದ ಸಂಬಂಧ ವಿಹಿಂಪ ಕೋರ್ಟ್ ಮೆಟ್ಟಿಲೇರಿತ್ತು. ವಿಹಿಂಪ ಪರವಾಗಿ ಧನಂಜಯ್ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮೇ.25, 2022ರಂದು ವಿವಾದ ಸಂಬಂಧ ವಿಹಿಂಪ ತಾಂಬೂಲ ಪ್ರಶ್ನೆ ಇರಿಸಿತ್ತು. ತಾಂಬೂಲ ಪ್ರಶ್ನೆಯಲ್ಲಿ ಮಸೀದಿಯಲ್ಲಿ ದೇವ ಸಾನಿಧ್ಯ ಕುರುಹು ಪತ್ತೆಯಾಗಿತ್ತು. ಆ ಬಳಿಕ ಕಾನೂನು ಹೋರಾಟ ಆರಂಭಗೊಂಡಿತ್ತು.