ಗ್ರಾಪಂ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ದೇವರಹಟ್ಟಿಯಲ್ಲಿ ಸರ್ಕಾರಿ ಬೋರ್‌ವೆಲ್‌ನಿಂದ ಬರುವ ಪೈಪ್‌ಲೈನ್ ಮಧ್ಯದಲ್ಲಿಯೇ ಒಡೆದು ಶೇ. 80 ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಸ್ವಚ್ಛತೆ ಹಾಗೂ ನೈರ್ಮಲ್ಯ ಶುಚಿತ್ವ ಕಾಪಾಡುವಲ್ಲಿ ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಪರಿಣಾಮ ತಾಲೂಕಿನ ದೇವರಹಟ್ಟಿ ಗ್ರಾಮದಲ್ಲಿ ಜನಸಾಮಾನ್ಯರಲ್ಲಿ ರೋಗರುಜಿನ ವ್ಯಾಪಕವಾಗಿ ಹರಡುತ್ತಿರುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಅಕ್ರೋಶ ಹೊರಹಾಕಿದ್ದಾರೆ.

ತಾಲೂಕಿನ ಸಿ.ಕೆ.ಪುರ ಗ್ರಾಪಂ ವ್ಯಾಪ್ತಿಯ ದೇವರಹಟ್ಟಿ ಗ್ರಾಮದಲ್ಲಿ 300ಕ್ಕಿಂತ ಹೆಚ್ಚು ಕುಟುಂಬಗಳು ವಾಸವಾಗಿದ್ದು ಚರಂಡಿ ಹಾಗೂ ಗ್ರಾಮ ನೈರ್ಮಲ್ಯ ಸ್ವಚ್ಛತೆ ಕಾಪಾಡುವಲ್ಲಿ ಗ್ರಾಪಂ ನಿರ್ಲಕ್ಷ್ಯವಹಿಸಿದ ಪರಿಣಾಮ ಅನೇಕ ಮಂದಿಗೆ ಚಳಿ ಜ್ವರದ ಲಕ್ಷಣ ಕಂಡು ಬರುತ್ತಿದ್ದು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದೆ. ಪರಿಣಾಮ ಡೆಂಘೀ ಹಾಗೂ ಮಲೇರಿಯಾ, ಟೈಫಾಯ್ಡ್ ರೋಗಗಳ ವ್ಯಾಪಿಸುವ ಭೀತಿ ಉಂಟುಮಾಡಿರುವುದಾಗಿ ದೂರಿದ್ದಾರೆ.

ಈ ಅನೈರ್ಮಲ್ಯದ ನಡುವೆ ಬದುಕುವ ಜನರ ಪಾಡು ಅತ್ಯಂತ ಶೋಚನೀಯ ಸ್ಥಿತಿಗೆ ತಪುಪಿದ್ದು, ಗ್ರಾಮದ ಅಂಗನವಾಡಿ ಕೇಂದ್ರದ ಸಮೀಪದಲ್ಲಿಯೇ ಕಸ ಹಾಗೂ ಗಿಡ ಗಂಟೆಗಳ ರಾಶಿ ಕೊಳಚೆ ನೀರು ಸಂಗ್ರಹದಿಂದ, ಸೊಳ್ಳೆಗಳ ಸದ್ದು ಮತ್ತು ದುರ್ವಾಸನೆ ಬರುತ್ತಿದೆ.ಇದರ ಮಧ್ಯೆ ಸರ್ಕಾರಿ ಶಾಲೆಗೆ ಹೋಗಿ ಬರುವ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈಗಾಗಲೇ ಅನೇಕ ಮಂದಿಗೆ ಜ್ವರ ಹರಡಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಗ್ರಾಮದ ಮುಖಂಡ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಪಂ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ದೇವರಹಟ್ಟಿಯಲ್ಲಿ ಸರ್ಕಾರಿ ಬೋರ್‌ವೆಲ್‌ನಿಂದ ಬರುವ ಪೈಪ್‌ಲೈನ್ ಮಧ್ಯದಲ್ಲಿಯೇ ಒಡೆದು ಶೇ. 80 ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದು ಉಳಿದ ಶೇ. 20 ಕಲುಷಿತ ನೀರನ್ನು ಜನರು ಉಪಯೋಗಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ದುಸ್ಥಿತಿಯನ್ನು ಅಧಿಕಾರಿಗಳಿಗೆ ಹಲವಾರು ಬಾರಿ ತಿಳಿಸಿದ್ದರೂ, ಅವರು ಕಿವಿ ಗೊಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದಾಗಿ ಬಹುತೇಕ ಗ್ರಾಮಸ್ಥರ ಆರೋಪವಾಗಿದೆ.

ಈ ಸಂಬಂಧ ಗ್ರಾಪಂ ವ್ಯಾಪ್ತಿಯ ಬೇವಿನಮರ, ಕೇರಿ ರಸ್ತೆಯ ಎಸ್‌.ಡಿ. ನಾಗರಾಜ ಪ್ರತಿಕ್ರಿಯಿಸಿ ಅಧುನಿಕ ವ್ಯವಸ್ಥೆಯಲ್ಲಿದ್ದರೂ ಸಹ ಇದುವರೆವಿಗೂ ದೇವರಹಟ್ಟಿ ಗ್ರಾಮದಲ್ಲಿ ಸರಿಯಾದ ಸಿಸಿ ರಸ್ತೆ ರಸ್ತೆ ವ್ಯವಸ್ಥೆಯಿಲ್ಲ. ಚರಂಡಿ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯಿತಿ ಕಚೇರಿಗೆ ಮಾಹಿತಿ ನೀಡಿದರೆ ಗ್ರಾಪಂ ಅಧಿಕಾರಿಗಳು ಉಡಾಫೆ ಉತ್ತರ ನೀಡಿ ವಾಪಸ್ಸು ಕಳುಹಿಸುತ್ತಾರೆ. ಗ್ರಾಪಂ ಜನಪ್ರತಿನಿಧಿಗಳಿಂದ ತಿರಸ್ಕಾರದ ಉತ್ತರ ನೀಡುತ್ತಿದ್ದು, ಗ್ರಾಮದಲ್ಲಿ ನಿಲ್ಲದ ಜಗಳ, ಕಸದರಾಶಿ ಕಲುಷಿತ ವಾತಾವರಣ ವ್ಯಾಪಕವಾಗಿರುವುದಾಗಿ ಆರೋಪಿಸಿದ್ದಾರೆ.

ಸಮಸ್ಯೆ ಕುರಿತು ಗ್ರಾಪಂ ಪಿಡಿಒ ರಂಗಸ್ವಾಮಿ ಹಾಗೂ ಸ್ಥಳೀಯ ಸದಸ್ಯರು ಗಂಭೀರವಾಗಿ ಪರಿಗಣಿಸದೇ ಲಘುವಾಗಿ ತೆಗೆದುಕೊಳ್ಳುವ ಪರಿಣಾಮ ದೇವರಹಟ್ಟಿ ಅಭಿವೃದ್ಧಿ ಮಾರೀಚಿಕೆಯಾಗಿದ್ದು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರು ಸಮಸ್ಯೆ ಕುರಿತು ವರದಿ ಪಡೆಯುವ ಮೂಲಕ ಗ್ರಾಮದಲ್ಲಿ ಚರಂಡಿ, ಸಿಸಿರಸ್ತೆ ಹಾಗೂ ನೈರ್ಮಲ್ಯ ಶುಚಿತ್ವಕ್ಕೆ ಒತ್ತು ನೀಡುವಂತೆ ನಾಗರಾಜು, ರಾಮಾಂಜಿನಪ್ಪ, ಪರಮೇಶ್‌ ಇತರೆ ಅನೇಕ ಮಂದಿ ಮನವಿ ಮಾಡಿ ಒತ್ತಾಯಿಸಿದ್ದಾರೆ.

ಫೋಟೋ 3ಪಿವಿಡಿ2

ತಾಲೂಕಿನ ಸಿ.ಕೆ.ಪುರ ಗ್ರಾಪಂ ದೇವರಹಟ್ಟಿ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವ.

ಫೋಟೋ 3ಪಿವಿಡಿ3

ದೇವರಹಟ್ಟಿಯ ಅಂಗನವಾಡಿ ಗ್ರಾಪಂ ಬಳಿ ಗಿಡಗಂಟೆ ಹಾಗೂ ಕಸದ ರಾಶಿಗಳಿಂದ ಸೊಳ್ಳೆ ಹಾಗೂ ಇತರೆ ಕ್ರೀಮಿಕೀಟದ ಹಾವಳಿಗೆ ಗ್ರಾಮಸ್ಥರು ತತ್ತರ.ಫೋಟೋ 3ಪಿವಿಡಿ4

ತಾಲೂಕಿನ ಸಿ.ಕೆ.ಪುರ ಗ್ರಾಪಂ ಕಚೇರಿ.