ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯ ಹಿರಿಯರಿಂದ ಹಿಡಿದು ಕಿರಿಯ ಸಾಹಿತಿಗಳನ್ನು ಪರಿಚಯಿಸಿರುವ ಜೊತೆಗೆ ಅವರ ಸಾಹಿತ್ಯ ಆಸಕ್ತಿ ಮತ್ತು ಸಾಧನೆಯನ್ನು ಮನಮುಟ್ಟುವಂತೆ ಮಲೆಯೂರು ಗುರುಸ್ವಾಮಿಯವರು ಸಂಶೋಧಾನಾತ್ಮಕವಾಗಿ ರಚಿಸಿದ ಸಾಹಿತ್ಯ ಸುವರ್ಣಾವತಿ ಜಿಲ್ಲೆಯ ಸಾಹಿತ್ಯದ ಶಿರೋಮಣಿ ಇದ್ದ ಹಾಗೆ ಎಂದು ನಿವೃತ್ತ ಪ್ರಾದ್ಯಾಪಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಸಿ.ನಾಗಣ್ಣ ಹೇಳಿದರು.ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಮೈಸೂರು ಮಲೆಯೂರು ಗುರುಸ್ವಾಮಿ ಪ್ರತಿಷ್ಠಾನ, ಚಾಮರಾಜನಗರ ಜೆಎಸ್ಎಸ್ ಮಹಿಳಾ ಕಾಲೇಜು, ರಂಗತರಂಗ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಪ್ರೊ.ಮಲೆಯೂರು ಗುರುಸ್ವಾಮಿ ಅವರ 2ನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ನುಡಿನಮನ ನೆರವೇರಿಸಿ ಮಾತನಾಡಿದರು. ಮಲೆಯೂರರು ನಮ್ಮನ್ನು ಭೌತಿಕವಾಗಿ ಅಗಲಿದ್ದರೂ, ಜಿಲ್ಲೆಯ ಸಾಹಿತ್ಯಲೋಕವನ್ನು ತಮ್ಮ ಸಾಹಿತ್ಯ ಸುವರ್ಣಾವತಿ ಮೂಲಕ ಶ್ರೀಮಂತಗೊಳಿಸಿ. ಇಂದಿನ ಸಾಹಿತಿಗಳು, ಕವಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು. ಮಲೆಯೂರರು ಭಾರತದ ಇತಿಹಾಸವನ್ನು ಬಲ್ಲವರಾಗಿದ್ದರು, ಜಗತ್ತಿನಲ್ಲಿ ನಡೆಯುವ ಆಗುಹೋಗುಗಳ ಸಂಗತಿಗಳನ್ನು ಅರಿತವರಾಗಿದ್ದರು. ಅಲಕ್ಷಿತ ಸಮುದಾಯಗಳ ಬದುಕು ಕುರಿತು ವಿಶಿಷ್ಟ ಬೆಳಕು ಬೀರಿದ ಅವರು ಕೇವಲ ವ್ಯಕ್ತಿಯಾಗಿರಲಿಲ್ಲ ಶಕ್ತಿಯಾಗಿದ್ದರು ಎಂದರು.ದೇಶ ಸೇರಿದಂತೆ ರಾಜ್ಯದ ಯಾವುದೇ ಮೊಹಲ್ಲ, ಕಟ್ಟಡ, ಸ್ಥಳ, ಊರುಕೇರಿ ಬಗ್ಗೆ ಸಾಕಷ್ಟು ಜ್ಞಾನವಿತ್ತು. ಅವರ ಜ್ಞಾನ ಅಸದೃಶ್ಯ, ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಬೆರೆತು, ಇತರರಿಗೆ ಮಾರ್ಗದರ್ಶಕರಾಗಿ ಅವರ ಬೆಳವಣಿಗೆಗೆ ಕಾರಣರಾಗಿದ್ದರು ಎಂದರು. ಅವರ ರಚನೆಯ ಸಾವಿರ ಪುಟದ ಸಾಹಿತ್ಯ ಸುವರ್ಣಾವತಿ, ಮಲೆಮಹದೇಶ್ವರರ ಕುರಿತ ಮಹಾಯಾತ್ರಿಕ, ನಾಟಕಕಾರ ಸಂಸ, ನಂಜನಗೂಡು ಸಂಗೀತ ವಿದುಷಿ ನಾಗರತ್ಮಮ್ಮ ಕುರಿತು ಕಪಿಲೆ ಹರಿದಳು ಕಡಲಿಗೆ, ಹೊನ್ನುಹೊಳೆ ಸೇರಿದಂತೆ ನಾನಾ ಕೃತಿಗಳು ಜಿಲ್ಲೆಯ ಸಾಹಿತ್ಯ ಶ್ರೀಮಂತಿಕೆಯನ್ನು ಇಮ್ಮಡಿಗೊಳಿಸಿವೆ. ಅವರ ಅಕಾಲಿಕ ನಿಧನ ಸಾಹಿತ್ಯ ಸಾಂಸ್ಕೃತಿಕ, ಸಮಾಜಕ್ಕೆ ದೊಡ್ಡ ನಷ್ಟ ಉಂಟುಮಾಡಿದೆ ಎಂದು ವಿಷಾದಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಅವರು ಸಾರ್ಥಕವಾದ ಬದುಕನ್ನು ಸಾಧಿಸಿದವರು ಎಂದರು. ಬದುಕು ಎಷ್ಟು ಸೂಕ್ಷ್ಮ ಮತ್ತು ವೈರುಧ್ಯ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ನಮ್ಮ ಸಾವಿನ ನಂತರವೂ ಜನ ನಮ್ಮನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದರೆ ಅದು ನಮ್ಮ ಗುಣದಿಂದ ಮಾತ್ರ. ಅಂತಹ ಗುಣವನ್ನು ಹೊಂದಿದ್ದವರು ಪ್ರೊ.ಮಲೆಯೂರು ಗುರುಸ್ವಾಮಿ ಎಂದರು.
ಹುಟ್ಟು ಸಾವು ಬದುಕಿನಲ್ಲಿ ಅನಿವಾರ್ಯ, ಸಾವಿನ ನಂತರವೂ ಆ ವ್ಯಕ್ತಿಯನ್ನು ಸ್ಮರಿಸುತ್ತಾರೆ, ಅವರ ಗುಣಗಳನ್ನು ಮೆಲುಕು ಹಾಕುತ್ತಾರೆ ಎಂದರೆ ಅಂತಹವರ ಸಾಲಿನಲ್ಲಿ ಪ್ರೊ.ಮಲೆಯೂರರು ಒಬ್ಬರು ಎಂದರು. ಗುರುಸ್ಚಾಮಿಯವರ ಬದುಕು ಸದವಕಾಶದ ಬದುಕು, ವರ್ತಮಾನದಲ್ಲಿ ಹೇಗೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಅರಿವು ಮೂಡಿಸಿದರು. ಇಲ್ಲಿ ಏನಿದೆ, ಏನಿಲ್ಲ ಹೇಳಿ, ಏನಿದೆ ನೋಡಿ, ಎಂದು ಇಡೀ ಚಾಮರಾಜನಗರ ಜಿಲ್ಲೆಯ ನೋಟವನ್ನು ತಮ್ಮ ಸಾಹಿತ್ಯ ಸುವರ್ಣಾವತಿ ಕೃತಿಯ ಮೂಲಕ ತೋರಿಸಿಕೊಟ್ಟವರು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸೋಮಶೇಖರ್ ಬಿಸಲ್ವಾಡಿ, ಗುರುಸ್ವಾಮಿ ಅವರು ನಿವೃತ್ತರಾದ ಬಳಿಕವು ಅಪಾರ ಶಿಷ್ಯ ಬಳಗವನ್ನು ಹೊಂದಿದ್ದರು. ದೊಡ್ಡ ವ್ಯಕ್ತಿತ್ವವುಳ್ಳ ಅವರು ಸೂರ್ಯನಂತೆ ಪ್ರಕಾಶಮಾನವವಾಗಿ ಹೊಳೆಯುತ್ತಿದ್ದರು ಎಂದರು. ಪ್ರಾಂಶುಪಾಲ ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ರೇಚಂಬಳ್ಳಿ ದುಂಡು ಮಾದಯ್ಯ, ಮಗು ಅಭಿಮಾನಿಗಳು, ಅಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿನಿಯರು ಇದ್ದರು.