ಸಂತಾನಹರಣ ಶಸ್ತ್ರಚಿಕಿತ್ಸೆಗೆ ಪುರುಷರ ಹಿಂದೇಟು

| Published : Jan 12 2024, 01:46 AM IST

ಸಾರಾಂಶ

ಚಿಕಿತ್ಸೆಯ ಬಳಿಕ ಭಾರದ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ವಯಸ್ಸಾದ ಬಳಿಕ ನಾನಾ ಕಾಯಿಲೆಗಳಿಗೆ ಆಸ್ಪದವಾಗುತ್ತದೆ ಎಂಬಿತ್ಯಾದಿ ಮೂಢನಂಬಿಕೆಗಳಿಂದಾಗಿಯೇ ಮಹತ್ವದ ಎನ್‌ಎಸ್‌ವಿ ಕಾರ್ಯಕ್ಕೆ ಭಾರೀ ಹಿನ್ನಡೆ ಕಂಡುಬಂದಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಸಂತಾನಹರಣ ಚಿಕಿತ್ಸೆಗೆ (ಎನ್‌ಎಸ್‌ವಿ) ಒಳಪಡುವ ಪುರುಷರ ಸಂಖ್ಯೆ ಜಿಲ್ಲೆಯಲ್ಲಿ ತೀವ್ರ ಇಳಿಮುಖವಾಗಿದೆ. ಚಿಕಿತ್ಸೆಗೆ ಒಳಗಾದರೆ ಲೈಂಗಿಕ ಶಕ್ತಿ ಕುಂದುತ್ತದೆ ಎಂಬ ಅಪನಂಬಿಕೆಯಿಂದಾಗಿ ಸಂತಾನಹರಣ ಚಿಕಿತ್ಸೆಗೆ ಪುರುಷರು ಹಿಂದೇಟು ಹಾಕುತ್ತಿದ್ದಾರೆ.

ಈ ಕುರಿತು ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಸುತ್ತಿದ್ದಾಗ್ಯೂ ಚಿಕಿತ್ಸೆಗೆ ಜನರ ನಿರಾಸಕ್ತಿ ಕಂಡುಬಂದಿದೆ.

ಇನ್ನು ಕೆಲವೆಡೆ ಪುರುಷರಿಗೆ ಚಿಕಿತ್ಸೆಗೆ ಆಸಕ್ತಿ ತೋರಿದರೂ ಕುಟುಂಬ ಸದಸ್ಯರೇ ವಿರೋಧ ವ್ಯಕ್ತಪಡಿಸುವ ಪ್ರಕರಣಗಳು ನಡೆದಿವೆ. ಚಿಕಿತ್ಸೆಯ ಬಳಿಕ ಭಾರದ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ವಯಸ್ಸಾದ ಬಳಿಕ ನಾನಾ ಕಾಯಿಲೆಗಳಿಗೆ ಆಸ್ಪದವಾಗುತ್ತದೆ ಎಂಬಿತ್ಯಾದಿ ಮೂಢನಂಬಿಕೆಗಳಿಂದಾಗಿಯೇ ಮಹತ್ವದ ಎನ್‌ಎಸ್‌ವಿ ಕಾರ್ಯಕ್ಕೆ ಭಾರೀ ಹಿನ್ನಡೆ ಕಂಡುಬಂದಿದೆ.

ಎನ್‌ಎಸ್‌ವಿ ಚಿಕಿತ್ಸೆಗೆ ಒಳಪಡುವ ಪುರುಷರಿಗೆ ₹1100 ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಅನೇಕ ವರ್ಷಗಳಿಂದ ಪ್ರೋತ್ಸಾಹಧನ ಹೆಚ್ಚಳ ಕಂಡಿಲ್ಲ. ಚಿಕಿತ್ಸೆ ನಂತರ ಪೌಷ್ಟಿಕ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ, ಪ್ರೋತ್ಸಾಹಧನ ಹೆಚ್ಚಳದತ್ತ ಗಮನ ಹರಿಸದಿರುವುದು ಸಹ ಎನ್‌ಎಸ್‌ವಿ ಯೋಜನೆ ಹಿಮ್ಮುಖಗೊಳ್ಳಲು ಕಾರಣ ಎನ್ನಲಾಗಿದೆ.

ಇಳಿಮುಖದತ್ತ ಶಸ್ತ್ರಚಿಕಿತ್ಸೆ: ಸಂತಾನಹರಣ ಶಸ್ತ್ರಚಿಕಿತ್ಸೆ ಮಹಿಳೆಗೆ ಮೀಸಲು ಎಂಬ ಸಮಾಜದ ದೃಷ್ಟಿಕೋನ ಬದಲಾಗಿಲ್ಲ. ಮೂರು ಬಾರಿ ಸಿಜೇರಿಯನ್ ಆದ ಮಹಿಳೆಯೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸ್ಥಿತಿಯಿದೆ. ಇಂತಹ ವೇಳೆಯಲ್ಲಿ ಪುರುಷರು ಮುಂದೆ ಬರಬೇಕು ಎನ್ನುವ ವೈದ್ಯಾಧಿಕಾರಿಗಳು, ಎನ್‌ಎಸ್‌ವಿ ಅತ್ಯಂತ ಸರಳ ಆಪರೇಷನ್ ಆಗಿದ್ದು, ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆಯ ಪ್ರಮಾಣದಲ್ಲಿ ಇಳಿಮುಖ ಕಂಡಿದೆ ಎನ್ನುತ್ತಾರೆ.

2018- 19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 30 ಜನರು ಎನ್‌ಎಸ್‌ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2019- 20ನೇ ಸಾಲಿನಲ್ಲಿ 25 ಜನರು, 2020- 21ರಲ್ಲಿ 6 ಜನರು, 2021- 22 ರಲ್ಲಿ 0 ಹಾಗೂ 2022- 2023ನೇ ಸಾಲಿನಲ್ಲಿ ಐವರು ಶಸ್ತ್ರಚಿಕಿತ್ಸೆ ಒಳಗಾಗಿದ್ದು, ಬಳ್ಳಾರಿ ತಾಲೂಕಿನಲ್ಲಿ ಮೂವರು ಹಾಗೂ ಸಿರುಗುಪ್ಪ ತಾಲೂಕಿನಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆಯಾಗಿದೆ.

ಎನ್‌ಎಸ್‌ವಿ ಎಂದರೇನು?: ನೋ ಸ್ಕಾಲ್‌ಪೆಲ್ ವ್ಯಾಸಕ್ಟಮಿ ಚಿಕಿತ್ಸೆಯು ಅತ್ಯಂತ ಸರಳ ಚಿಕಿತ್ಸೆಯಾಗಿದ್ದು, ಈ ಚಿಕಿತ್ಸಾ ಪದ್ಧತಿಯಿಂದ ವೃಷಣದಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳು ಸಂಭೋಗ ಕ್ರಿಯೆ ವೇಳೆ ಮಹಿಳೆಯ ಗರ್ಭಾಶಯ ತಲುಪದಂತೆ ಮಾಡುತ್ತದೆ. ಚಿಕಿತ್ಸೆಯಲ್ಲಿ ವೃಷಣದಿಂದ ವೀರ್ಯಾಣು ಸಾಗಿಸುವ ನಾಳ ಕತ್ತರಿಸಿ, ಅದರ ಎರಡು ಕೊನೆಯ ಭಾಗಗಳನ್ನು ಗಂಟು ಹಾಕಲಾಗುವುದು. ಇದರಿಂದ ವೀರ್ಯಾಣುಗಳು ವೃಷಣದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಇದು ಗಾಯ ಮತ್ತು ಹೊಲಿಗೆ ಇಲ್ಲದ ಚಿಕಿತ್ಸೆಯಾಗಿದ್ದು ಬರೀ 10ರಿಂದ 15 ನಿಮಿಷದಲ್ಲಿ ಚಿಕಿತ್ಸೆ ಮುಗಿದು, ಅರ್ಧಗಂಟೆಯಲ್ಲಿ ಮನೆಗೆ ತೆರಳಬಹುದು ಎನ್ನುತ್ತಾರೆ ವೈದ್ಯರು. ಮನವೊಲಿಸುವ ಕೆಲಸ: ಸಂತಾನಹರಣ ಶಸ್ತ್ರಚಿಕಿತ್ಸೆ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಈ ಕುರಿತು ಜನರಲ್ಲಿ ಕೆಲವು ಅಪನಂಬಿಕೆಗಳಿವೆ. ಅವುಗಳನ್ನು ಹೋಗಲಾಡಿಸಿ, ಶಸ್ತ್ರಚಿಕಿತ್ಸೆಗೆ ಮನವೊಲಿಸುವ ಕೆಲಸವಾಗುತ್ತಿದೆ ಎಂದು ಡಿಎಚ್‌ಒ ಡಾ. ವೈ. ರಮೇಶ್ ಬಾಬು ತಿಳಿಸಿದರು.

ಅರಿವಿನ ಕೊರತೆ: ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ಯಾವುದೇ ಸಮಸ್ಯೆಯಿಲ್ಲ. ಆರೋಗ್ಯವಾಗಿದ್ದೇನೆ. ಎಂದಿನಂತೆ ಎಲ್ಲ ದೈಹಿಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದೇನೆ. ಜನರಿಗೆ ಈ ಬಗ್ಗೆ ಅರಿವಿನ ಕೊರತೆಯಿದೆ ಎಂದು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವಿಜಯ್ ಕುಮಾರ್ ತಿಳಿಸಿದರು.