ಸಾರಾಂಶ
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿರುವುದು ಅಥವಾ ಅಕಾಲಿಕ ಮರಣ ಹೊಂದುವುದು ಬೇಸರ ಸಂಗತಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಹೇಳಿದ್ದಾರೆ.
ಬ್ಯಾಡಗಿ:
ಪ್ರಪಂಚದಾದ್ಯಂತ ಅರ್ಧದಷ್ಟು ಮಕ್ಕಳ ಸಾವಿಗೆ ಅಪೌಷ್ಟಿಕತೆಯೇ ಕಾರಣವಾಗಿದೆ ಎಂಬ ಮಾಹಿತಿ ಇದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅಪೌಷ್ಟಿಕತೆ ಸಾಮಾನ್ಯವಾಗಿದ್ದು, ಇಷ್ಟೊಂದು ಮುಂದುವರಿದ ಪ್ರಪಂಚದಲ್ಲಿ ಅಪೌಷ್ಟಿಕತೆಯಿಂದ ಇಂದಿಗೂ ಮಕ್ಕಳು ಬಳಲುತ್ತಿದ್ದಾರೆ ಅಥವಾ ಅಕಾಲಿಕ ಮರಣ ಹೊಂದುತ್ತಿದ್ದಾರೆ ಎಂದರೆ ಅದಕ್ಕಿಂತ ಅಗೌರವದ ವಿಷಯ ಇನ್ನೊಂದಿಲ್ಲ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕು ಕಾನೂನು ಸೇವೆಗಳ ಸಮಿತಿ ಬ್ಯಾಡಗಿ ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಮತ್ತು ಆರೋಗ್ಯ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ದಿನಾಚರಣೆ ಅಂಗವಾಗಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅಪೌಷ್ಟಿಕತೆ ತೊಡೆದು ಹಾಕುವುದು ತಾಯಿ ಗರ್ಭಾವಸ್ಥೆಯಿಂದಲೇ ಆರಂಭಿಸಬೇಕು. ಹೀಗಾಗಿ ಗರ್ಭಿಣಿಯರಿಗೆ ಮೊದಲು ಪೌಷ್ಟಿಕವಾದ ಆಹಾರ ನೀಡುವ ಮೂಲಕ ಆರೋಗ್ಯವಂತ ಮಕ್ಕಳು ಜನಿಸುವಂತೆ ನೋಡಿಕೊಳ್ಳಬೇಕಾಗುತ್ತದೆ, ವಯಸ್ಸಿಗೆ ತಕ್ಕಂತೆ ಮಗುವಿನ ದೈಹಿಕ ಬೆಳವಣಿಗೆಯಾಗದಿದ್ದಲ್ಲಿ ಅಥವಾ ಮಗುವಿನ ಆರೋಗ್ಯ ಸದೃಢವಾಗಿರದಿದ್ದಲ್ಲಿ ಅಪೌಷ್ಟಿಕತೆ ಎಂದು ಪರಿಗಣಿಸಬೇಕಾಗುತ್ತದೆ ಎಂದರು.ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಅಪೌಷ್ಟಿಕತೆ ಅಥವಾ ಅಸ್ವಸ್ಥತೆ ಮಗುವಿನ ದೇಹದ ಮೇಲೆ ದುಷ್ಪರಿಣಾಮ ಬೀರಬಹುದು. ಇಂತಹ ಮಕ್ಕಳು ರುಚಿ, ದೃಷ್ಟಿ, ನಿಶಕ್ತಿ ಅಥವಾ ವಾಸನೆಯ ಅರ್ಥವನ್ನು ಸಹ ಕಳೆದುಕೊಳ್ಳಬಹುದು. ಇನ್ನೂ ಕೆಲವರು ಮನೋ ವೈಕಲ್ಯತೆಯಿಂದ ಬಳಲಬಹುದಾಗಿದೆ. ಇಂತಹ ವೈದ್ಯಕೀಯ ಲಕ್ಷಣಗಳು ಪಾಲಕರಲ್ಲಿ ಆತಂಕ ಮೂಡಿಸಬಹುದು. ಹೀಗಾಗಿ ಸಂಬಂಧಿಸಿದ ಇಲಾಖೆಗಳು ಯಾವುದೇ ಕಾರಣಕ್ಕೂ ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್. ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೈ.ಟಿ. ಪೂಜಾರ, ಸ್ತ್ರೀರೋಗ ತಜ್ಞ ಸಂತೋಷ ಹಾಲುಂಡಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಜಿ. ಹಿರೇಮಠ, ಕಾರ್ಯದರ್ಶಿ ಮಂಜುನಾಥ ಹಂಜಗಿ, ಸಹ ಕಾರ್ಯದರ್ಶಿ ಎನ್ ಬಿ. ಬಳಿಗಾರ, ವಕೀಲರಾದ ಎಂ.ಎಫ್. ಮುಳಗುಂದ, ಭಾರತಿ ಕುಲಕರ್ಣಿ, ಎಸ್.ಎಚ್. ಕಾಟೇನಹಳ್ಳಿ, ಎಸ್.ಎಸ್. ಕೊಣ್ಣೂರ, ಎಂ.ಜೆ. ಪಾಟೀಲ, ನಾಗರಾಜ ಬಣಕಾರ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.