ಮಲ್ಪೆ-ಹೆಬ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಸಂಚಾರ ದುಸ್ತರ

| Published : Nov 17 2023, 06:45 PM IST

ಮಲ್ಪೆ-ಹೆಬ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಸಂಚಾರ ದುಸ್ತರ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ರಿಯಿಂದ-ಹಿರಿಯಡ್ಕ- ಅತ್ರಾಡಿ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಣ್ಣು ಹಾಕಿ ರಸ್ತೆಯನ್ನು ಏರಿಸಲಾಗುತಿದ್ದು, ಅಕಾಲಿಕ ಮಳೆಗೆ ರಸ್ತೆಯು ಕೆಸರು ಗದ್ದೆಯಂತಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆ ಸಮೀಪ, ಪೆರ್ಡೂರು ಸೇರಿದಂತೆ ಒಟ್ಟು 5ಕ್ಕೂ ಹೆಚ್ಚು ಕಡೆಗಳಲ್ಲಿ ವಾಹನಗಳು ಸಾಗಲು ಪ್ರಯಾಸದಾಯಕವಾಗಿದೆ.

ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳ

ಮಲ್ಪೆ-ಉಡುಪಿ-ಹಿರಿಯಡ್ಕ- ಪೆರ್ಡೂರು -ಹೆಬ್ರಿ ಮೂಲಕ ಮೊಣಕಾಲ್ಮೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಎ ಹೆದ್ದಾರಿ ಕಾಮಗಾರಿಯು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯು ಹೆದ್ದಾರಿ ಕಾಮಗಾರಿಗೆ ತೊಡಕಾಗಿದೆ.ಕೆಸರು ಗದ್ದೆಯಂತಾದ ರಾಷ್ಟ್ರೀಯ ಹೆದ್ದಾರಿ: ಹೆಬ್ರಿಯಿಂದ-ಹಿರಿಯಡ್ಕ- ಅತ್ರಾಡಿ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಣ್ಣು ಹಾಕಿ ರಸ್ತೆಯನ್ನು ಏರಿಸಲಾಗುತಿದ್ದು, ಅಕಾಲಿಕ ಮಳೆಗೆ ರಸ್ತೆಯು ಕೆಸರು ಗದ್ದೆಯಂತಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆ ಸಮೀಪ, ಪೆರ್ಡೂರು ಸೇರಿದಂತೆ ಒಟ್ಟು 5ಕ್ಕೂ ಹೆಚ್ಚು ಕಡೆಗಳಲ್ಲಿ ವಾಹನಗಳು ಸಾಗಲು ಪ್ರಯಾಸದಾಯಕವಾಗಿದೆ.

ವಾಹನ ಸವಾರರೆ ನಿಧಾನ ಚಲಿಸಿ

ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಗಳ ಮೇಲೆ ಅಲ್ಲಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿ ವಾಹನಗಳು ಸಾಗಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ಧಾರಕಾರ ಮಳೆಯಿಂದ ರಸ್ತೆಗಳಲ್ಲಿ ಒಂದು ಅಡಿಯಷ್ಟು ಮಣ್ಣು ನಿಂತಿದ್ದು, ವಾಹನ ಸವಾರರು ನಿಧಾನವಾಗಿ ಸಾಗಬೇಕು. ಘನವಾಹನಗಳು ಸಾಗುವಾಗ ಕೆಸರು ನೀರು ದ್ವಿಚಕ್ರ ವಾಹನಗಳಲ್ಲಿ ಸಾಗುವ ಸವಾರರಿಗೆ ಎರಚಿದಂತಾಗುತ್ತದೆ. ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಓಂತಿಬೆಟ್ಟು-ಹಿರಿಯಡ್ಕ ನಡುವೆ ನಾಲ್ಕು ದ್ವಿಚಕ್ರ ವಾಹನ ಸವಾರರು ಅಪಫಾತಕ್ಕಿಡಾಗಿದ್ದಾರೆ.* ಮಳೆಯಿಂದ ಕಾಮಗಾರಿಗೆ ಹಿನ್ನಡೆ

ಕಳೆದ ನಾಲ್ಕು ದಿನಗಳಿಂದ ಭಾರಿ ಗುಡುಗು ಗಾಳಿ ಮಳೆ ಸುರಿಯುತ್ತಿರುವುದರಿಂದ ಹೆದ್ದಾರಿ ಕಾಮಗಾರಿಗೆ ಅಡಚಣೆಯುಂಟಾಗುತ್ತಿದೆ. ರಸ್ತೆಗಳಲ್ಲಿ ಕೆಸರು ತುಂಬಿಕೊಂಡಿದ್ದ ಕಾರಣ ತೆರವು ಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ವಾಹನಗಳ ಚಕ್ರಗಳು ಹೂತು ಹೋಗುವ ಸ್ಥಳಗಳಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸುವ ಕಾರ್ಯವನ್ನು ಗುತ್ತಿಗೆ ವಹಿಸಿಕೊಂಡಿರುವ ಖಾಸಗಿ ಕಂಪನಿ ಮಾಡುತ್ತಿದೆ.ಬದಲಿ ರಸ್ತೆ ಬಳಸಿ

ಉಡುಪಿಯಿಂದ ಕಾರ್ಕಳ ಸಾಗುವ ವಾಹನಗಳು ಮಣಿಪಾಲದ ಮೂಲಕ ಅಲೆವೂರು, ಮೂಡುಬೆಳ್ಳೆ, ಪಳ್ಳಿ ಕುಂಟಾಡಿಯಾಗಿ ಕಾರ್ಕಳ ತಲುಪಬಹುದು. ಉಡುಪಿಯಿಂದ ಹೆಬ್ರಿ ಸಾಗುವವರು ಉಪ್ಪೂರು, ಕುಕ್ಕೆಹಳ್ಳಿ, ಪೆರ್ಡೂರು ಮೂಲಕ ಹೆಬ್ರಿ ಅಥವಾ ಮಣಿಪಾಲ, ಪೆರಂಪಳ್ಳಿ, ಶಿಂಭ್ರ, ಕುಕ್ಕೆಹಳ್ಳಿ, ಪೆರ್ಡೂರು, ಹೆಬ್ರಿ, ಅಥವಾ ಬ್ರಹ್ಮಾವರ, ಪೇತ್ರಿ, ಸಂತೆಕಟ್ಟೆ, ಹೆಬ್ರಿ ಮೂಲಕ ಸಾಗಬಹುದು.

ಕೆಸರುಮಯವಾದ ರಸ್ತೆಯಲ್ಲಿ ಸಾಗುವುದೇ ಕಷ್ಟ. ನಿತ್ಯ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಆಂಬುಲೆನ್ಸ್‌ಗಳಲ್ಲಿ ರೋಗಿಗಳನ್ನು ಕರೆತರುವುದು ಕೂಡ ಸಾಹಸಮಯವಾಗಿದೆ.। ಪ್ರಶಾಂತ್ ನಾಯಕ್, ಆಂಬುಲೆನ್ಸ್ ಚಾಲಕ ಮಣಿಪಾಲ