ಮಲ್ಪೆ ಬಂದರು ಅಭಿವೃದ್ಧಿ: ಶಾಸಕ ಯಶ್ಪಾಲ್ ಸುವರ್ಣ ಸಭೆ

| Published : Mar 17 2025, 01:31 AM IST

ಸಾರಾಂಶ

ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮೀನುಗಾರಿಕಾ ಬಂದರಿನ ಸಮರ್ಪಕ ನಿರ್ವಹಣೆ ಹಾಗೂ ಪ್ರಸ್ತಾವಿತ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮೀನುಗಾರಿಕಾ ಬಂದರಿನ ಸಮರ್ಪಕ ನಿರ್ವಹಣೆ ಹಾಗೂ ಪ್ರಸ್ತಾವಿತ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು.ಮೀನುಗಾರಿಕಾ ಬಂದರಿನಲ್ಲಿ ಸ್ವಚ್ಛತೆ, ಭದ್ರತೆಯ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸುವಂತೆ ನಿರ್ವಹಣೆ ಗುತ್ತಿಗೆ ಪಡೆದ ಸಂಸ್ಥೆಗೆ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಬೇಕು. ಮಲ್ಪೆ ಬಂದರಿನಲ್ಲಿ ಈಗಾಗಲೇ ಮಂಜೂರುಗೊಂಡಿರುವ ನಮ್ಮ ಕ್ಲಿನಿಕ್ ಕೇಂದ್ರ ತಕ್ಷಣ ಆರಂಭಕ್ಕೆ ಕ್ರಮ ವಹಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.ಭವಿಷ್ಯದ ಮೀನುಗಾರಿಕೆಯ ನಿಟ್ಟಿನಲ್ಲಿ ಬಂದರು ಇಲಾಖೆಯ ಅಧೀನದಲ್ಲಿರುವ ಜಾಗಗಳನ್ನು ಮೀನುಗಾರಿಕಾ ಉದ್ದೇಶಕ್ಕೆ ಮೀಸಲು, ಉದ್ದೇಶಿತ ಔಟರ್ ಹಾರ್ಬರ್ ಯೋಜನೆ, ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಮಗಾರಿ ಶೀಘ್ರ ಆರಂಭ, ಬೋಟ್ ಮರು ನಿರ್ಮಾಣ ಹಾಗೂ ಹೊಸ ಎಂಜಿನ್ ಅಳವಡಿಕೆಗೆ ಅನುಮತಿ, ಡ್ರೆಜ್ಜಿಂಗ್ ಕಾಮಗಾರಿ, ಟೆಂಡರ್ ಹಂತದಲ್ಲಿರುವ ವಾಟರ್ ಟ್ಯಾಂಕ್, ಸಿಸಿ ಕ್ಯಾಮರ ಅಳವಡಿಕೆ, ತ್ಯಾಜ್ಯ ನೀರು ಸಂಸ್ಕರಣ ಘಟಕ ಕಾಮಗಾರಿ ಸಹಿತ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು.ಸಭೆಯಲ್ಲಿ ಮಲ್ಪೆ ಮೀನುಗಾರ ಸಂಘ ಅಧ್ಯಕ್ಷ ದಯಾನಂದ ಸುವರ್ಣ, ಮೀನುಗಾರಿಕೆ ಜಂಟಿ ನಿರ್ದೇಶಕ ವಿವೇಕ್, ಇಲಾಖೆಯ ಅಧಿಕಾರಿಗಳಾದ ಸವಿತಾ ಖಾದ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಮೀನುಗಾರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.