ಅಳಗವಾಡಿ ಕೃಷಿ ಸಹಕಾರಿ ಸಂಘದಲ್ಲಿ ಅವ್ಯವಹಾರ: ದೂರು

| Published : Aug 31 2024, 01:36 AM IST

ಅಳಗವಾಡಿ ಕೃಷಿ ಸಹಕಾರಿ ಸಂಘದಲ್ಲಿ ಅವ್ಯವಹಾರ: ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಸಂಘದ ಮಾಜಿ ಕಾರ್ಯದರ್ಶಿ ಸಣ್ಣಮಕ್ತುಮಸಾಬ್‌ ನದಾಫ ಹಾಗೂ ಶಿವನಗೌಡ ಗದಿಗೆಪ್ಪಗೌಡ್ರ, ಎಸ್.ಜಿ. ಬಳಗಾನೂರ ಅವರು ₹ 3 ಕೋಟಿಗೂ ಅಧಿಕ ಅವ್ಯವಹಾರ ನಡೆಸಿದ್ದಾರೆ. ಅಡಿಟರ್ ಲೆಕ್ಕ ಮಾಡಿದಾಗ ₹ 2.25 ಕೋಟಿ ವ್ಯತ್ಯಾಸ ಬಂದಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ನವಲಗುಂದ:

ತಾಲೂಕಿನ ಅಳಗವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ₹ 3 ಕೋಟಿಗೂ ಅಧಿಕ ಅವ್ಯವಹಾರ ಆಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಅಳಗವಾಡಿ ಹಿತರಕ್ಷಣಾ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ವಿವಿಧ ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಗ್ರಾಮದ ರೈತ ಹೋರಾಟಗಾರ ರಘುನಾಥ ನಡುವಿನಮನಿ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿರುದ್ಧ ಸತತವಾಗಿ 9 ವರ್ಷಗಳಿಂದ ಹೋರಾಟ ನಡೆಸಲಾಗಿದೆ. ಅಧಿಕಾರಿಗಳಿಗೆ, ಸಚಿವರಿಗೆ ಮತ್ತು ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಸಂಘದ ಮಾಜಿ ಕಾರ್ಯದರ್ಶಿ ಸಣ್ಣಮಕ್ತುಮಸಾಬ್‌ ನದಾಫ ಹಾಗೂ ಶಿವನಗೌಡ ಗದಿಗೆಪ್ಪಗೌಡ್ರ, ಎಸ್.ಜಿ. ಬಳಗಾನೂರ ಅವರು ₹ 3 ಕೋಟಿಗೂ ಅಧಿಕ ಅವ್ಯವಹಾರ ನಡೆಸಿದ್ದಾರೆ. ಅಡಿಟರ್ ಲೆಕ್ಕ ಮಾಡಿದಾಗ ₹ 2.25 ಕೋಟಿ ವ್ಯತ್ಯಾಸ ಬಂದಿದೆ. ಆನಂತರ ಬಳಗಾನೂರ ಕಾರ್ಯದರ್ಶಿಯಾಗಿ ಬಂದ ಒಂದೇ ವರ್ಷದಲ್ಲಿ ₹ 25 ಲಕ್ಷ ಅವ್ಯವಹಾರವಾಗಿದೆ ಎಂದು ಲೆಕ್ಕ ಪರಿಶೋಧಕರು ವರದಿ ಕೊಟ್ಟಿದ್ದರು. ಆನಂತರ ರಾಜಕೀಯ ಪ್ರಭಾವ ಬಳಸಿ, ಯಾವುದೇ ತರಹದ ಲೆಕ್ಕ ಪರಿಶೋಧನೆ ಆಗದ ಹಾಗೆ ನೋಡಿಕೊಂಡು ಬರುತ್ತಿದ್ದಾರೆ ಎಂದು ದೂರಿದರು.

ಆದಷ್ಟು ಬೇಗನೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇನ್ನು ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲಾತಿಗಳು ಮತ್ತು ಷೇರ್ ಹೋಲ್ಡರ್‌ಗಳ ದೂರುಗಳೂ ನಮ್ಮಲ್ಲಿ ಇವೆ. ಕೂಡಲೇ ತನಿಖೆ ಕೈಗೊಳ್ಳಬೇಕು. ಇನ್ನು 15 ದಿನಗಳೊಳಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಮಸ್ಯೆಯನ್ನು ಬಗೆಹರಿಸದೆ ಇದ್ದರೆ ಗ್ರಾಮದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮಿತಿ ಅಧ್ಯಕ್ಷ ಫಕ್ಕೀರಗೌಡ ಬಮ್ಮನಗೌಡರ, ಶಂಕ್ರಪ್ಪ ಕುರಹಟ್ಟಿ, ಶಿವಪ್ಪ ನಾಯ್ಕರ, ವಿಠ್ಠಲ ತಿರ್ಲಾಪುರ, ಡಿ.ಎನ್. ಪಾಟೀಲ, ಎಂ.ಎಸ್. ಪಾಟೀಲ, ಪ್ರಸನ್ನ ಕುರಹಟ್ಟಿ, ಸೋಮಶೇಖರ ಈರೇಶನವರ, ಕಲ್ಲಪ್ಪ ಶಿರಕೋಳ, ಮಂಜು ಹ. ನಾಗಮ್ಮನವರ ಇದ್ದರು.