ಜಲ್‌ ಜೀವನ್‌ ಮಿಷನ್‌ ಕಾಮಗಾರಿಯಲ್ಲಿ ಅವ್ಯವಹಾರ: ಆರೋಪ

| Published : Mar 22 2024, 01:06 AM IST

ಸಾರಾಂಶ

ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದಲ್ಲಿ ಜೆಜೆಎಂ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೂಡಲೇ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರವೇ ಗ್ರಾಮ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದಲ್ಲಿ ಜೆಜೆಎಂ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೂಡಲೇ ತನಿಖೆ ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕ್ಯಾತನಾಳ ಗ್ರಾಮ ಘಟಕ ಆಗ್ರಹಿಸಿದೆ.

ಈ ಕುರಿತು ಕರವೇ ಗ್ರಾಮ ಘಟಕದ ಮುಖಂಡರು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಜೆಜೆಎಂ ಯೋಜನೆಯಡಿ ಕಾಮಗಾರಿಯನ್ನು ಅಂದಾಜು ಪತ್ರಿಕೆ ಪ್ರಕಾರ ಮಾಡದೆ, ಕಳಪೆ ಮಟ್ಟದ ಸಾಮಗ್ರಿ ಹಾಕಲಾಗಿದ್ದು, ಇದಕ್ಕೆ ಮಣ್ಣು ಮಿಶ್ರಿತ ಮರಳು ಉಪಯೋಗಿಸುತ್ತಿದ್ದು, ಅಂದಾಜು ಪತ್ರಿಕೆ ಹಾಗೂ ಮ್ಯಾಪ್ ಪ್ರಕಾರ ಕಾಮಗಾರಿ ಆಗದೆ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು.

ಕಾಮಗಾರಿಗೆ ಕಬ್ಬಿಣ ಕಡಿಮೆ ಪ್ರಮಾಣ ಹಾಕಿದ್ದು, ಪೈಪುಗಳು 3 ಫೀಟ್ ತೋಡದೇ ಮೇಲುಗಡೆ ಹಾಕಿದ್ದು, ಪೈಪ್ ಹಾಕಿದ 2-3 ದಿನದಲ್ಲಿಯೇ ಪೈಪುಗಳು ಒಡೆದು ಹೋಗಿರುತ್ತವೆ. ಮತ್ತು ಸ್ಟ್ಯಾಂಡ್ ಪೋಸ್ಟ್‌ಗಳು ಸುಮಾರು ಅಲ್ಪ-ಸ್ವಲ್ಪ ಮಾತ್ರ ಹಾಕಲಾಗಿದ್ದು, ಸರಿಯಾಗಿ ಪ್ಲಾಸ್ಟರಿಂಗ್ ಮಾಡಿಲ್ಲ. ಆಳ ಅಗೆದಿಲ್ಲ, ಅವು ಸಹ ಅಲ್ಲಲ್ಲಿ ಬಿಚ್ಚಿ ನಿಂತಿರುತ್ತವೆ. ಜೆಸಿಬಿಯಿಂದ ಸಿಸಿ ರಸ್ತೆಗಳು ತೋಡಿದ್ದು, ಎಲ್ಲೆಂದರಲ್ಲಿ ಗುಂಡಿ ಬಿದ್ದಿದ್ದು, ಚರಂಡಿಯೊಳಗೆ ಪೈಪ್ ಹಾಕಲಾಗಿದೆ. ಮನೆ ಮನೆಗೆ ಸಮರ್ಪಕವಾದ ನಳಗಳು ಕೂಡಿಸಿರುವುದಿಲ್ಲ. ಬೇಕಾಬಿಟ್ಟಿಯಾಗಿ ಹಾಕಿದ್ದು, ಜೆಇ ಅವರು ಸ್ಥಳಕ್ಕೆ ಬಂದು ಪರಿಶೀಲಿಸದೆ ಸೆಕ್ಷನ್ ಆಫೀಸರ್ ಮತ್ತು ಜೆಇ ಸೇರಿಕೊಂಡು ಬಿಲ್ ಬರೆದಿರುತ್ತಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಕಳಪೆ ಕಾಮಗಾರಿಗೆ ಕಾರಣರಾದ ಜೆಇ ಗುತ್ತಿಗೆದಾರರು, ಸೆಕ್ಷನ್ ಆಫೀಸರ್ ಮೇಲೆ ಕಾನೂನು ಕ್ರಮ ಜರುಗಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಕಾಮಗಾರಿ ಬಿಲ್ ತಡೆಹಿಡಿಯಬೇಕು. ಒಂದು ವೇಳೆ ಕ್ರಮಕ್ಕೆ ಮುಂದಾಗದಿದ್ದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮ ಘಟಕದ ಅಧ್ಯಕ್ಷ ಭೀಮರಾಯ ಕವಡಿಮಟ್ಟಿ ಮನವಿ ಸಲ್ಲಿಸಿದರು. ಗನಿಸಾಬ್ ನಾಯ್ಕೋಡಿ, ದಾವುದ್ ಮಾಸ್ತರ್, ತಾಯಪ್ಪ, ರವಿ ಭಾಣಕಾರ, ಕರಿಗೂಳಿ, ಚಂದ್ರಯ್ಯ ದೊರೆ ಇತರರಿದ್ದರು.