ಮನುಷ್ಯ ಭ್ರೂಣಾವಸ್ಥೆಯಿಂದ ಸಾಯುವವರೆಗೂ ಕಾನೂನಿನ ಅಡಿಯೇ ಬದುಕಬೇಕಾಗಿದೆ, ಕಾನೂನು ಪಾಲಿಸುವವರನ್ನು ಕಾನೂನು ರಕ್ಷಿಸುತ್ತದೆ. ಎಲ್ಲರಿಗೂ ಕಾನೂನಿನ ಕನಿಷ್ಠ ಜ್ಞಾನ ಅಗತ್ಯ

ಕನ್ನಡಪ್ರಭ ವಾರ್ತೆ ಕೋಲಾರಮನುಷ್ಯನ ಜೀವನದಲ್ಲಿ ಇಂದು ಆಹಾರ, ನೀರಿನಷ್ಟೇ ಕಾನೂನು ಅತಿ ಮುಖ್ಯವಾಗಿದ್ದು, ದೈನಂದಿನ ಬದುಕಿಗೆ ಅಗತ್ಯವಾದ ಕನಿಷ್ಠ ಕಾನೂನುಗಳ ಅರಿವು ಅಗತ್ಯ. ನಿಮ್ಮ ಹಕ್ಕುಗಳನ್ನು ಕೇಳುವುದರ ಜತೆಗೆ ಕರ್ತವ್ಯ ಪಾಲನೆಯೂ ಮುಖ್ಯ ಎಂಬುದನ್ನು ಅರಿಯಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಹೇಳಿದರು. ನಗರದ ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅ‍ವರು, ಮನುಷ್ಯ ಭ್ರೂಣಾವಸ್ಥೆಯಿಂದ ಸಾಯುವವರೆಗೂ ಕಾನೂನಿನ ಅಡಿಯೇ ಬದುಕಬೇಕಾಗಿದೆ, ಕಾನೂನು ಪಾಲಿಸುವವರನ್ನು ಕಾನೂನು ರಕ್ಷಿಸುತ್ತದೆ ಎಂದರು.

ಭೂಣ ಲಿಂಗಪತ್ತೆ, ಹತ್ಯೆ ಅಪರಾಧ

ಇತ್ತೀಚೆಗೆ ಭ್ರೂಣಲಿಂಗ ಪತ್ತೆ, ಹೆಣ್ಣುಭ್ರೂಣ ಹತ್ಯೆಯಂತಹ ಅಪರಾಧಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ದ ನೀವು ಧ್ವನಿಯೆತ್ತಬೇಕು, ಪೊಲೀಸರಿಗೆ ಮಾಹಿತಿ ನೀಡಬೇಕು. ಸಮಾಜಕ್ಕೆ ಹಾಗೂ ಯುವಪೀಳಿಗೆಗೆ ಕಂಟಕವಾಗಿರುವ ಮಾದಕ ವ್ಯಸನದಿಂದ ದೂರ ಮಾಡಲು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಕಾಲೇಜಿನ ಆವರಣದಲ್ಲಿ ಅಥವಾ ಎಲ್ಲೇ ಆಗಲಿ ಮಾದಕ ವಸ್ತುಗಳ ಸಾಗಣೆ, ಮಾರಾಟ ಕಂಡು ಬಂದರೆ ಪೊಲೀಸರಿಗೆ ತಿಳಿಸಿ ಎಂದು ಕಿವಿಮಾತು ಹೇಳಿದರು.

ಗಲ್‌ಪೇಟೆ ಪಿಎಸ್‌ಐ ವಿದ್ಯಾಶ್ರೀ ಮಾತನಾಡಿ, ತಂಬಾಕು, ಮಾದಕ ವಸ್ತು ನಿಯಂತ್ರಣಕ್ಕೆ ಕೋಟ್ಟಾ ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳ ಕಾಯಿದೆ ಜಾರಿಯಲ್ಲಿದ್ದು, ೧೮ ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದ ಅಪರಾಧವಾಗಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು. ಬಾಲ್ಯ ವಿವಾಹ ತಡೆಗೆ ಸಹಕರಿಸಿ

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮಾತನಾಡಿ, ಬಾಲ್ಯವಿವಾಹ ಸಮಾಜಕ್ಕೆ ಕಂಟಕವಾಗಿದೆ. ಇದರ ಸಂಪೂರ್ಣ ತಡೆಗೆ ವಿದ್ಯಾರ್ಥಿ ಸಯುದಾಯದ ಸಹಕಾರ ಅಗತ್ಯ ಎಂದರು.

ಭ್ರೂಣ ಲಿಂಗ ಪತ್ತೆ ಮಾಡುವುದು ಸಹಾ ಅಪರಾಧವಾಗಿದ್ದು,ಕಠಿಣ ಶಿಕ್ಷೆ ಇದೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೂ ಸರ್ಕಾರ ಕಾನೂನು ಮಾಡಿದ್ದು, ಇದರ ಕುರಿತು ನೀವು ಅರಿತು ಸಮಾಜಕ್ಕೂ ತಿಳಿಸಿಕೊಡಿ ಎಂದರು.ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ಕುರಿತು ಅರಿವು ನೀಡಿದ್ದು, ಲಿಂಗ ಪತ್ತೆ ನಿಷೇಧ ಕಾಯಿದೆ, ಬಾಲ್ಯವಿವಾಹ ನಿಷೇಧ, ಹೆಣ್ಣು ಭ್ರೂಣ ಹತ್ಯೆ ಕಾಯಿದೆ, ಬಾಲಕಾರ್ಮಿಕ ನಿಷೇಧ, ಹಾಗೂ ಮೋಟಾರ್ ವಾಹನ ಕಾಯಿದೆ, ಎನ್‌ಎಎಲ್‌ಎಸ್‌ಎ ಸಹಾಯವಾಣಿ ೧೫೧೦೦ ಕುರಿತು ಮಾಹಿತಿ ನೀಡಲಾಯಿತು,

ಇದೇ ವೇಳೆ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹಾಸ್ಟೆಲ್ ಮೇಲ್ವಿಚಾರಕಿ ಶೋಭಾ, ವೃತ್ತಿಪರ ತರಬೇತಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಮಾಲಾಶ್ರೀ ಇದ್ದರು.