ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ, ಸಂಗಾವಿ-ಟಿ (ಸೇಡಂ)ನಿರಂತರ ಮಳೆ ಹಲವು ಕಣ್ಣೀರ ಕಥೆಗಳಿಗೆ ಕಾರಣವಾಗಿದೆ. ಸೇಡಂ ತಾಲೂಕಿನಲ್ಲಿ ಮಳೆ ಸುರಿದ ಪರಿಣಾಮವಾಗಿ ಅಲ್ಲಿನ ಜೀವನದಿ ಕಾಗಿಣಾಕ್ಕೆ ಏಕಾಏಕಿ ಪ್ರವಾಹ ಬಂದು ಮೀನು ಹಿಡಿಯಲು ಹೋಗಿದ್ದ ರಾಜು ನಾಮವಾರ ಎಂಬಾತ ನೀರಲ್ಲಿ ಕೊಚ್ಚ ಹೋಗಿದ್ದಾನೆ.
ಕಳೆದ ಕಳೆದ ಶನಿವಾರ (ಆ.31) ಸಂಜೆ ಈ ದುರಂತ ಘಟನೆ ನಡೆದಿದೆ, ನಾಲ್ಕು ದಿನವಾದರೂ ಕೂಲಿ ಕಾರ್ಮಿಕ ರಾಜು ನಾಮವಾರ ಈತನ ಶವ ಪತ್ತೆಯಾಗಿಲ್ಲ. ಪಾತಾಲ ಗರಡಿ ಹಾಕಿ ಶವ ಶೋಧ ನಡೆಸಲಾಗುತ್ತಿದ್ದರೂ ಸುಳಿವಿಲ್ಲ.ಇತ್ತ ಮನೆ ಮಂದಿ ಎಲ್ಲರು ಬರಡಿಸಿಡಿಲು ಬಡಿದಂತೆ ಕಣ್ಣೀರು ಹಾಕುತ್ತಿದ್ದಾರೆ. ಮನೆಗೆ ರಾಜು ಆಧಾರವಾಗಿದ್ದ, ಅವನೇ ಸಾವನ್ನಪ್ಪಿದ್ದಾನೆಂಬ ನೋವು ಒಂದೆಡೆಯಾದರೆ, ಸಾವಾಗಿರುವ ರಾಜುವಿನ ಶವವೂ ದೊರಕದೆ ದಿನಗಳು ಉರುಳುತ್ತಿರೋದು ಕೂಡಾ ಕುಟುಂಬದ ನೋವು ಹೆಚ್ಚಿಸಿದೆ.
ಕುರುಕುಂಟಾದ ಅಮೇರಿಕಾ ಕಾಲೋನಿ ವಾಸವಾಗಿರುವ ರಾಜು ಸಂಗಾವಿ ಬಳಿ ಮೀನು ಹಿಡಿಯಲು ಧಾವಿಸಿ ಬುಟ್ಟಿಯಲ್ಲಿ ಮೀನು ಹಿಡಿಯುವಾಗ ಆಯತಪ್ಪಿ ನದಿಗೆ ಬಿದ್ದು ಕೊಚ್ಚಿ ಹೋದಾತ. ಪಕ್ಕದಲ್ಲಿದ್ದ ರಾಜು ಜೊತೆಗಾರರು ಆತ ನೀರಲ್ಲಿ ರಭಸದಿಂದ ಕೊಚ್ಚಿ ಹೋಗಿರೋದನ್ನ ಕಂಡಿದ್ದಾಗಿ ಹೇಳಿದ್ದಾರೆ. ಆದರೆ ಆತನ ಶವ ಇನ್ನೂ ಸಿಗುತ್ತಿಲ್ಲ. ಇಂದು ನದಿಯಲ್ಲಿ ನೀರಿನ ಹರಿವು 3 ಅಡಿ ತಗ್ಗಿದೆ. ಮಂಗಳವಾರವೂ ಶೋಧ ಕಾರ್ಯ ಸಾಗಿದ್ದರೂ ಶವದ ಸುಳಿವು ಸಿಕ್ಕಿಲ್ಲ.ಸೇಡಂ ಶಾಸಕರು, ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಂಗಳವಾರ ಸಂಗಾವಿ ಟಿ. ಹಾಗೂ ಕುರಿಕುಂಟಾಕ್ಕೆ ಭೇಟಿ ನೀಡಿ ರಾಜು ನೀರಲ್ಲಿ ಕೊಚ್ಚಿ ಹೋಗಿ ಸಂಭವಿಸಿರುವ ಸಾವಿನ ಮಾಹಿತಿ ಪಡೆದು ಶೋಧಕಾರ್ಯವನ್ನು ಪರಿಶೀಲಿಸಿದರು. ದುಃತಪ್ತ ಕುಟುಬಂಕ್ಕೆ ವೈಯಕ್ತಿಕ ನೆರವು ನೀಡಿ ಸಾಂತ್ವನ ಹೇಳಿದರು.
ನಾಮವಾರ ಕುಟುಂಬದ ದುರಂತಗಳ ಸರಮಾಲೆ: ಕುರುಕುಂಟಾದ ಅಮೇರಿಕಾ ಕಾಲೋನಿಯಲ್ಲಿರ ವಾಸವಿರುವ ನಾಮಧಾರ ಕುಟುಂಬದ್ದು ಕಣ್ಣೀರ ಕಥೆ ಎನ್ನಬೇಕು. ರಾಮಮ್ಮ ಬದುಕಿನ ದುರಂತಗಳ ಸರಮಾಲೆ ಕಂಡವರು, ಕೇಳಿದವರು ಎಂತಹ ಕಲ್ಲು ಹೃದಯದವರಾದರೂ ಅವರು ನರುಗಬೇಕು, ಕಣ್ಣುಗಳು ತೇವವಾಗಬೇಕು ಹಾಗಿದೆ.ಈ ಪರಿವಾರದ ಯಜಮಾನಿ ರಾಮಮ್ಮಗೆ 6 ಜನ ಪುತ್ರರು, ಇವರಲ್ಲಿ 5 ಮಂದಿ ಹಿಗೆಯೇ ಅಸಹಜ, ಅಕಾಲಿಕ ಸಾವನ್ನಪ್ಪಿದ್ದಾರೆ. 5 ಮಕ್ಕಳ ಸಾವಾಯ್ತು, ಉಳಿದವ ರಾಜು ಒಬ್ಬನೆ ಎಂದು ಈತನ ಮೇಲೆಯೇ ಸಂಸಾರದ ಭಾರವನ್ನೆಲ್ಲ ಹಾಕಿದ್ದ ರಾಮಮ್ಮಗೆ ಈಗ ರಾಜು ಕೂಡಾ ನದಿ ನೀರಿನ ಸೆಳವಿಗೆ ಸಿಲುಕಿ ಸಾವನ್ನಪ್ಪಿರೋದು ನುಂಗಲಾರದ ತುತ್ತಾಗಿದೆ.
ನನ್ನ 6 ಮಕ್ಕಳು ಕೂಡಾ ಹೀಗೆಯೇ ಅವಘಡದ, ದುರಂತದ ಸಾವಲ್ಲೇ ಕೊನೆಯಾದರು ಎಂದು ಮರಗುತ್ತಿದ್ದಾಳೆ. ರಾಜುಗೆ ಪತ್ನಿ ನರಸಮ್ಮ, ಅರುಣ (10 ನೇ ತರಗತಿ), ಅಕ್ಷಯಾ (9 ನೇ ತರಗತಿ) ಎಂಬ ಇಬ್ಬರು ಮಕ್ಕಳಿದ್ದಾರೆ. ಕುಟುಂಬದ ಹೊಣೆಗಾರಿಕೆ ರಾಜುವಿನ ಮೇಲೆಯೇ ಇತ್ತು. ಈತ ಕುರಕುಂಟಾ ಸುತ್ತ ಧಾರಳವಾಗಿ ಸಿಗುವ ಫರಸಿ ಕಲ್ಲುಗಳ ಕುಶಲ ಕರ್ಮಿ.ದಿನಗೂಲಿ ಕೆಲಸದ ಮೇಲೆ ರಾಜು ದುಡದು ಬಂದರಷ್ಟೇ ಸಂಸಾರದ ಹೊಟ್ಟೆ ತುಂಬೋದು, ಇಲ್ಲದಿದ್ರೆ ಎಲ್ಲರೂ ಉಪವಾಸ ವನವಾಸ, ಇದೀಗ ಕಳೆದ 4 ದಿನದಿಂದ ಈ ಕುಟುಂಬ ಉಪವಾಸ ಮರಗುತ್ತಿದೆ. ಗಳಿಸಿ ಹಾಕುವ ವ್ಯಕ್ತಿ ಇಲ್ಲ. ಜೊತೆಗೇ ಮನೆ ಯಜಮಾನನೇ ಸಾವನ್ನಪ್ಪಿದ್ದಾನೆ. ಶವ ಕೂಡ ಸಿಕ್ಕಿಲ್ಲ. ಹೀಗಾಗಿ ಎಲ್ಲರೂ ಕಣ್ಣೀರು ಹಾಕುತ್ತ ದಿನಗಳೆಯುತ್ತಿದ್ದಾರೆ,
ಕುಟುಂಬಕ್ಕೆ ಸಚಿವ ಶರಣಪ್ರಕಾಶ ಪಾಟೀಲ ಸಾಂತ್ವನಸುರಿದ ಮಳೆಯಲ್ಲೇ ಊರ ಮುಂದಿನ ಕಾಗಿಣೆ ತುಂಬಿ ತುಳುಕುತ್ತಿದ್ದಾಳೆಂದು ಮೀನು ಹಿಡಿಯಲು ಹೋಗಿ ಕೊಚ್ಚಿ ಹೋದ ಸೇಡಂ ತಾಲೂಕಿನ ಕುರಕುಂಟಾ ಗ್ರಾಮದ ರಾಜು ನಾಮವಾರ್ ಮನೆಗೆ ಮಂಗಳವಾರ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ರಾಜು ಶವ ಶೋಧ ಕೆಲಸಕ್ಕೆ ವೇಗಕಳೆದ ನಾಲ್ಕು ದಿನದಿಂದ ಎಸ್.ಡಿ.ಆರ್.ಎಫ್, ಅಗ್ನಿಶಾಮಕ, ಪೊಲೀಸ್ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪತ್ತೆಗೆ ಶೋಧ ಕಾರ್ಯ ನಡೆದಿದೆ. ನಿನ್ನೆ ಮಳೆ ಕಡಿಮೆಯಾಗಿದ್ದರಿಂದ ಶೋಧ ಕಾರ್ಯಚರಣೆ ಚುರುಕುಗೊಂಡಿದೆ. ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ಪರಿಹಾರವನ್ನು ಕುಟುಂಬಕ್ಕೆ ಪ್ರಮಾಣಿಕವಾಗಿ ಒದಗಿಸಲಾಗುವುದು ಎಂದು ಡಾ. ಶರಣಪ್ರಕಾಶ ಹೇಳಿದ್ದಾರೆ. ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ತಾಪಂ ಇಒ ಚಿನ್ನಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.