ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಡಾ. ಸಂಜೀವನಾಥ ಐಕಳ ಅವರು ಪುನರೂರು, ಎಸ್. ಕೋಡಿ, ಕೆಂಚನಕೆರೆ ಹಾಗೂ ಪರಿಸರದ ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಪ್ರಾರಂಭಿಸಿದ ಪುನರೂರು ಭಾರತ್ ಮಾತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಆಡಳಿತ ಮಂಡಳಿ ಮುಂದಾಗಿದೆ.ಮಕ್ಕಳಿದ್ದರೂ ಶಾಲೆ ಮುಚ್ಚಲು ನಿರ್ಧಾರ: ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣವಾಗಿ ಮುಚ್ಚಲ್ಪಡುವುದು ಸಾಮಾನ್ಯ. ಆದರೆ ಪುನರೂರು ಭಾರತ್ ಮಾತಾ ಶಾಲೆಯಲ್ಲಿ ಮಕ್ಕಳಿದ್ದರೂ, ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಇಚ್ಛಿಸಿದರೂ ಆಡಳಿತ ಮಂಡಳಿ ಶಾಲೆ ನಡೆಸಲು ನಿರಾಸಕ್ತಿ ತೋರುತ್ತಿದ್ದು, ಶಾಲೆಯನ್ನೇ ಮುಚ್ಚಲು ಮಂದಾಗಿದೆ.
ಕಳೆದ ಬಾರಿ 7 ನೇ ತರಗತಿವರೆಗೆ 64 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಈ ಬಾರಿಯೂ ಸುಮಾರು 20 ಮಕ್ಕಳು ಒಂದನೇ ತರಗತಿಗೆ ಸೇರುವವರಿದ್ದರು. ಆದರೆ ಪ್ರಸ್ತುತ ಕಲಿಯುತ್ತಿದ್ದ ಎಲ್ಲ ಮಕ್ಕಳು, ಪೋಷಕರಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿಯೇ ಕರೆ ಮಾಡಿ ಶಾಲೆ ಮುಚ್ಚುತ್ತಿದ್ದೇವೆ ನಿಮ್ಮ ಮಕ್ಕಳನ್ನು ಬೇರೆ ಕಡೆಗೆ ಸೇರಿಸಿ ಎಂದು ಹೇಳಿದ್ದಾರೆ.ಶಾಲೆಗೆ ಬೀಗ ಹಾಕಿದ ಆಡಳಿತ ಮಂಡಳಿ ಕಾರ್ಯದರ್ಶಿ: ಶಾಲಾ ಪ್ರಾರಂಭೋತ್ಸವದ ದಿನವಾದ ಬುಧವಾರ ಲಾ ಆಡಳಿತ ಮಂಡಳಿ ಕಾರ್ಯದರ್ಶಿಗಳು ಶಾಲೆಗೆ ಬೀಗ ಹಾಕಿ ಮಕ್ಕಳನ್ನು ಶಾಲೆಯ ಜಗಲಿಯಲ್ಲಿ ಕುಳ್ಳಿರಿಸಿದ್ದಾರೆ, ಇಲಾಖಾ ಅಧಿಕಾರಿಗಳು, ಪೊಲೀಸರು, ಮಕ್ಕಳ ಪೊಷಕರು ವಿನಂತಿಸಿದರೂ ಶಾಲೆಯ ಬೀಗ ತೆಗೆಯಲಿಲ್ಲ. ಕೊನೆಗೆ ಪೋಷಕರು ಸದ್ಯದ ಮಟ್ಟಲಿಗೆ ಈಗಿರುವ ಮಕ್ಕಳ ಮತ್ತು ಶಿಕ್ಷಕರ ಜವಾಬ್ದಾರಿ ನಾವೇ ನೋಡಿಕೊಳ್ಳುತ್ತೇನೆ ಎಂದು ಲಿಖಿತವಾಗಿ ನೀಡಿದ ಬಳಿಕ ಮಧ್ಯಾಹ್ನ 12.15ಕ್ಕೆ ಶಾಲೆಯ ಬೀಗ ತೆರೆದು ಮಕ್ಕಳನ್ನು ಒಳ ಬಿಡಲಾಯಿತು. ಪೋಷಕರು ಸಭೆ ನಡೆಸಿದ್ದು, ಶಾಲೆಯನ್ನು ಈ ವರ್ಷ ಮುಚ್ಚದಂತೆ ತೀರ್ಮಾನಿಸಲಾಯಿತು.
ಆಡಳಿತ ಮಂಡಳಿ ಕೇವಲ ಹೆಸರಿಗೆ ಮಾತ್ರ: ಡಾ. ಸಂಜೀವನಾಥ ಐಕಳರು ಹಾಗೂ ಅವರ ಬಳಿಕ ಅವರ ಮಗ ವಿನೋಭನಾಥ ಐಕಳರು ಶಾಲೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ವಿನೋಭನಾಥರು ತೀರಿ ಹೋದ ಬಳಿಕ ಶಾಲಾ ಆಡಳಿತ ಮಂಡಳಿ ಕೇವಲ ಹೆಸರಿಗೆ ಮಾತ್ರ ಇದ್ದು ಶಾಲೆಯಲ್ಲಿ ಓರ್ವ ಸರ್ಕಾರಿ ಶಿಕ್ಷಕಿ ಮತ್ತು ನಾಲ್ಕು ಮಂದಿ ಅತಿಥಿ ಶಿಕ್ಷಕರಿದ್ದಾರೆ. ಅತಿಥಿ ಶಿಕ್ಷಕರಿಗೆ ದಾನಿಗಳು ಮತ್ತು ಹಳೆವಿದ್ಯಾರ್ಥಿಗಳು, ಪೋಷಕರು ಸಂಬಳ ನೀಡುತ್ತಿದ್ದಾರೆ.ಪೋಷಕರ ಸಭೆ ಸಂದರ್ಭ ಪದ್ಮನ್ನೂರು ಕ್ಲಸ್ಟರ್‌ನ ಸಿಆರ್‌ಪಿ ರಾಮ್ ದಾಸ್ ಭಟ್, ಆಡಳಿತ ಮಂಡಳಿ ಕಾರ್ಯದರ್ಶಿ ವೀಣಾ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಅಂಬರೀಶ್, (ಅನುದಾನಿತ), ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಉಪಸ್ಥಿತರಿದ್ದರು.
ಬಾಕ್ಸ್ ಮೂಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಡಾ. ಸಂಜೀವನಾಥ ಐಕಳರು ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಭಾರತ್ ಮಾತ ಶಾಲೆಯನ್ನು ಪ್ರಾರಂಭಿಸಿ, ತನ್ನಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ಶಾಲೆಗೆ ಹಾಕಿದ್ದರು. ಸ್ವಾತಂತ್ಯ ಹೋರಾಟಗಾರರಾಗಿದ್ದ ಸಂಜೀವನಾಥ ಐಕಳರು ತಮಗೆ ಬರುತ್ತಿದ್ದ ವೇತನವನ್ನು ಶಾಲೆಗೆ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಿದ್ದರು, ಈ ಶಾಲೆಯಲ್ಲಿ ಕಲಿತ ಅನೇಕರು ಪ್ರತಿಷ್ಠಿತ ಹುದ್ದೆಯಲ್ಲಿದ್ದಾರೆ.;Resize=(128,128))
;Resize=(128,128))
;Resize=(128,128))