ಸಾರಾಂಶ
ಕಾರ್ಖಾನೆ ಆಡಳಿತ ಮಂಡಳಿಯವರು ಪ್ರತಿಭಟನೆ ಹಾಗೂ ನೌಕರರ ಮನವಿಗೆ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ನೌಕರನೊಬ್ಬ ಏಕಾಏಕಿ ಕಾರ್ಖಾನೆ ಚಿಮಣಿ ಏರಿ ಪ್ರತಿಭಟಿಸಿ, ಅಧಿಕಾರಗಳ ನಡೆ ಖಂಡಿಸಿದ್ದಾನೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಹಾಗೂ ಹಂಗಾಮಿ ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವ ನಿರಾಣಿ ಷುಗರ್ಸ್ ಮಾಲೀಕರ ನಡೆ ಖಂಡಿಸಿ, ನೌಕರನೊಬ್ಬ ಕಾರ್ಖಾನೆ ಚಿಮಣಿ ಏರಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.ಕಾರ್ಖಾನೆ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ನೌಕರರ ಪೈಕಿ ರಾಮಕೃಷ್ಣ ಎಂಬ ನೌಕರ ಮುಂಜಾನೆ ಕಾರ್ಖಾನೆ ಚಿಮಣಿ ಏರಿ ಆಡಳಿತ ಮಂಡಳಿ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.
ಪಿಎಸ್ ಎಸ್ ಕೆ ಕಾರ್ಖಾನೆಯನ್ನು 40 ವರ್ಷ ನಿರಾಣಿ ಷುಗರ್ಸ್ ಕಂಪನಿಗೆ ಗುತ್ತಿಗೆ ನೀಡಿದೆ. ಗುತ್ತಿಗೆ ನೀಡುವ ವೇಳೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 109 ನೌಕರರನ್ನು ಯಥಾವತ್ತಾಗಿ ಮುಂದುವರಿಸಬೇಕು, ನೌಕರರು ಕೆಲಸ ಮಾಡುವುದಿಲ್ಲ ಎಂದರೆ ಅವರಿಗೆ ವಿಆರ್ ಎಸ್ ನೀಡಲು ಅವಕಾಶ ನೀಡಬೇಕು ಎಂದು ಕರಾರು ಮಾಡಿಕೊಳ್ಳಲಾಗಿದೆ.ಆದರೆ, ನಿರಾಣಿ ಷುಗರ್ಸ್ ಆಡಳಿತ ಮಂಡಳಿ ಅಧಿಕಾರಿಗಳು ಕರಾರು ನಿಯಮವನ್ನು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ 21 ನೌಕರರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಾರೆ. ಆ ಖಾಲಿ ಜಾಗಕ್ಕೆ ಉತ್ತರ ಭಾರತದ ನೌಕರರನ್ನು ಸೇರಿಸಿಕೊಳ್ಳುವ ಹುನ್ನಾರ ಮಾಡುತ್ತಿದ್ದಾರೆ ಎಂದು ದೂರಿದರು.
ಕೋರ್ಟ್ ಗುತ್ತಿಗೆ ಕರಾರಿನಂತೆ ನೌಕರರನ್ನು ಯಥಾವತ್ತಾಗಿ ಮುಂದುವರಿಸುವಂತೆ ಆದೇಶಿಸಿದರೂ ಆಡಳಿತ ಮಂಡಳಿಯವರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು. ಕಾರ್ಖಾನೆ ಆಡಳಿತ ಮಂಡಳಿಯವರು ಪ್ರತಿಭಟನೆ ಹಾಗೂ ನೌಕರರ ಮನವಿಗೆ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ನೌಕರನೊಬ್ಬ ಏಕಾಏಕಿ ಕಾರ್ಖಾನೆ ಚಿಮಣಿ ಏರಿ ಪ್ರತಿಭಟಿಸಿ, ಅಧಿಕಾರಗಳ ನಡೆ ಖಂಡಿಸಿದ್ದಾನೆ.ನೌಕರ ಚಿಮಣಿ ಏರಿ ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದ ಪೊಲೀಸರು, ತಹಸೀಲ್ದಾರ್ ಹಾಗೂ ಕಾರ್ಮಿಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿಮಣಿ ಏರಿರುವ ವ್ಯಕ್ತಿಯನ್ನು ಕೆಳಗೆ ಇಳಿಯುವಂತೆ ಸಾಕಷ್ಟು ಬಾರಿ ಮನವೊಲಿಸಿದ ನಂತರ ನೌಕರನು ಚಿಮಣಿ ಮೇಲಿಂದ ಇಳಿದನು.
ರೈತ ಮುಖಂಡರಾದ ಸುನೀತ ಪುಟ್ಟಣ್ಣಯ್ಯ ಸ್ಥಳಕ್ಕೆ ಆಗಮಿಸಿ ಕಾರ್ಖಾನೆ ನೌಕರರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರೂ ನೌಕರರು ಮಾತ್ರ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.