ಸರ್ಕಾರ ಮಾತಿಗೆ ತಪ್ಪಿ ನಡೆದಿದೆ. ನೀರು ಬಿಡದಿರುವ ನಿರ್ಧಾರಕ್ಕೆ ಬದ್ಧವಾಗಬೇಕಿತ್ತು. ಒಂದು ಕಡೆ ಸರ್ವಪಕ್ಷ ಸಭೆ ಕರೆದು ಮತ್ತೊಂದು ಕಡೆ ಸಭೆ ನಡೆಯುವ ಮುನ್ನವೇ ನೀರು ಹರಿಸುವ ನಿರ್ಧಾರ ಮಾಡಿರುವುದು ಜನರಿಗೆ ಮತ್ತು ರೈತರಿಗೆ ಬಗೆದ ದ್ರೋಹವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಮಿಳುನಾಡಿಗೆ ನೀರು ಹರಿಸಿರುವುದನ್ನು ವಿರೋಧಿಸಿ ಭಾನುವಾರವೂ ಜಿಲ್ಲೆಯಲ್ಲಿ ಕಾವೇರಿ ಹೋರಾಟ ಮುಂದುವರೆದಿದೆ. ಕಾವೇರಿ ಹಿತರಕ್ಷಣಾ ಸಮಿತಿ, ಕನ್ನಡಪರ ಸಂಘಟನೆಗಳು ಹಾಗೂ ಎಂ.ಎಂ.ಫೌಂಡೇಷನ್‌ ಪದಾಧಿಕಾರಿಗಳು ಹೋರಾಟ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೀರು ಬಿಡುವುದಿಲ್ಲವೆಂದು ಮಾತು ಕೊಟ್ಟಿದ್ದ ರಾಜ್ಯ ಸರ್ಕಾರ ಇದೀಗ ಮಾತಿಗೆ ತಪ್ಪಿದೆ. ಸರ್ವಪಕ್ಷ ಸಭೆಗೆ ಮುನ್ನವೇ ತಮಿಳುನಾಡಿಗೆ ನೀರು ಹರಿಸಲಾರಂಭಿಸಿದೆ. ಹಾಗಿದ್ದ ಮೇಲೆ ಸರ್ವಪಕ್ಷ ಸಭೆ ಕರೆಯುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಕಾವೇರಿ ಹಿತರಕ್ಷಣಾ ಸಮಿತಿ ಹೋರಾಟ:

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಪ್ರಾಧಿಕಾರ ಹೊರಡಿಸಿದ ಆದೇಶ ಮತ್ತು ನೀರು ಬಿಟ್ಟ ಸರ್ಕಾರದ ಕ್ರಮವನ್ನು ಖಂಡಿಸಿ ಕಾವೇರಿ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಹೋರಾಟ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು, ಸರ್ಕಾರ ಮಾತಿಗೆ ತಪ್ಪಿ ನಡೆದಿದೆ. ನೀರು ಬಿಡದಿರುವ ನಿರ್ಧಾರಕ್ಕೆ ಬದ್ಧವಾಗಬೇಕಿತ್ತು. ಒಂದು ಕಡೆ ಸರ್ವಪಕ್ಷ ಸಭೆ ಕರೆದು ಮತ್ತೊಂದು ಕಡೆ ಸಭೆ ನಡೆಯುವ ಮುನ್ನವೇ ನೀರು ಹರಿಸುವ ನಿರ್ಧಾರ ಮಾಡಿರುವುದು ಜನರಿಗೆ ಮತ್ತು ರೈತರಿಗೆ ಬಗೆದ ದ್ರೋಹವಾಗಿದೆ. ಈ ಪುರುಷಾರ್ಥಕ್ಕೆ ಸರ್ವಪಕ್ಷ ಸಭೆ ಕರೆಯುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡುವುದಾಗಿ ಪಾದಯಾತ್ರೆ ನಡೆಸಿದ್ದ ಡಿ.ಕೆ.ಶಿವಕುಮಾರ್‌ ಇದೀಗ ಅದನ್ನು ಮರೆತು ಟೌನ್‌ಶಿಪ್‌ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರ್ಕಾರ ಅಣೆಕಟ್ಟು ನಿರ್ಮಾಣಕ್ಕೆ ನೆರೆ ರಾಜ್ಯದ ಅನುಮತಿ ಬೇಕಿಲ್ಲವೆಂದು ಸ್ಪಷ್ಟಪಡಿಸಿದೆ. ಈಗಲಾದರೂ ಅಣೆಕಟ್ಟು ನಿರ್ಮಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಂಕಷ್ಟ ಸೂತ್ರ ರಚನೆಗೆ ಒತ್ತಡ ಹೇರಬೇಕು. ಏನೂ ಮಾಡದೆ ವಿವಾದವನ್ನು ಮುಂದುವರೆಸಿಕೊಂಡು ಹೋಗುವುದು ಎಷ್ಟರಮಟ್ಟಿಗೆ ಸರಿ. ಇದಕ್ಕೊಂದು ತಾರ್ಕಿಕ ಅಂತ್ಯವಾಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಾತನೂರು ವೇಣುಗೋಪಾಲ್‌, ಮಹೇಶ, ನಾಗಮ್ಮ, ಪದ್ಮಾವತಿ, ಕೇಶವಮೂರ್ತಿ, ಎಂ.ಎಲ್‌.ತುಳಸೀಧರ್‌, ನಾಗಪ್ಪ ಹನಕೆರೆ ಇತರರಿದ್ದರು.

ಖಾಲಿ ಮಡಿಕೆ ಪ್ರದರ್ಶನ:

ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡಬೇಕೆಂಬ ಕಾವೇರಿ ಪ್ರಾಧಿಕಾರದ ಆದೇಶವನ್ನು ವಿರೋಧಿಸಿ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಿಸುವಂತೆ ಒತ್ತಾಯಿಸಿ ಕುಂಬಾರರ ಜಾಗೃತಿ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಹಾಗೂ ಕರುನಾಡ ಸೇವಕರು ಸಂಘಟನೆ ಒಗ್ಗೂಡಿ ಖಾಲಿ ಮಡಿಕೆ ಪ್ರದರ್ಶಿಸುವುದರ ಮೂಲಕ ಪ್ರತಿಭಟಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. ಇದೇ ವೇಳೆ ಖಾಗಿ ಮಡಿಕೆಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ರಾಜ್ಯದ ಜಲಾಶಯಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಬರದ ಛಾಯೆ ಎದುರಾಗಿದೆ. ಕೆರೆ-ಕಟ್ಟೆಗಳು ಒಣಗುತ್ತಿವೆ. ಜನ-ಜಾನುವಾರುಗಳು ನೀರಿನ ಭವಣೆಯನ್ನು ಎದುರಿಸುತ್ತಿದ್ದರೂ, ಕಾವೇರಿ ಪ್ರಾಧಿಕಾರ ನೀರು ಬಿಡಬೇಕೆಂಬ ಆದೇಶವನ್ನು ಮಾಡಿರುವುದು ಕಣ್ಣಿದ್ದು, ಕುರುಡಾ ನಡೆಯಂತಾಗಿದೆ ಎಂದರು.

ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ ಮಾತನಾಡಿ, ಕಾವೇರಿ ವಿಚಾರದಲ್ಲಿ ರೈತರು ಮತ್ತು ಜನಸಾಮಾನ್ಯರ ಹಿತವನ್ನು ಕಾಪಾಡಬೇಕಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕಾವೇರಿ ವಿವಾದವನ್ನು ಇತ್ಯರ್ಥಗೊಳಿಸಿ ಕರ್ನಾಟಕಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಶತಮಾನದ ಸವಾಲಾಗಿ ಪರಿಣಮಿಸಿರುವ ಕಾವೇರಿ ವಿವಾದ ನಾಲ್ಕು ರಾಜ್ಯಗಳ ನಡುವಿನ ಸಾಮರಸ್ಯಕ್ಕೆ ಹಾನಿಯುಂಟುಮಾಡುತ್ತಿದ್ದು, ಈಗಲೂ ಪರಿಹರಿಸದಿದ್ದರೆ ಮುಂದಿನ ತಲೆಮಾರಿಗೂ ಕಾವೇರಿ ವಿವಾದ ಸಂಘರ್ಷಕ್ಕೆ ಕಾರಣವಾಗುತ್ತದೆ. ಆದ್ದರಿಂದ ನ್ಯಾಯ ಸಮ್ಮತವಾಗಿ ವಿವಾದವನ್ನು ಇತ್ಯರ್ಥಗೊಳಿಸಬೇಕು. ಕರ್ನಾಟಕಕ್ಕೆ ಅನ್ಯಾಯವಾಗಂತೆ ನೋಡಿಕೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ಎಚ್.ಡಿ.ಜಯರಾಂ, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣ, ಕುಂಬಾರರ ಜಾಗೃತಿ ವೇದಿಕೆ ಪದಾಧಿಕಾರಿಗಳಾದ ಅರಕೆರೆ ದಾಸಪ್ಪ, ಪ್ರದೀಪ್, ಕೆರಗೋಡು ವೆಂಕೇಶ್, ಶಿವಕುಮಾರ್, ಪುಟ್ಟಸ್ವಾಮಿ ಸೇರಿದಂತೆ ಇತರರು ಇದ್ದರು.

ಕುಣಿಕೆ ಎಳೆಯುವ ಅಣಕು ಪ್ರದರ್ಶನ:

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಷನ್ ವತಿಯಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ನೀಡಿರುವ ಆದೇಶವನ್ನು ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ವೇಳೆ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರ ನಾಲ್ಕೂ ದಿಕ್ಕುಗಳಿಂದ ರೈತರಿಗೆ ಕುಣಿಕೆಯಾಗಿ ಎಳೆಯುವ ವಿಡಂಬನಾತ್ಮಕ ಅಣಕು ಪ್ರದರ್ಶನ ಮಾಡಿ ಮಂಡ್ಯ ಜಿಲ್ಲೆಯ ರೈತರ ಪರಿಸ್ಥಿತಿಯನ್ನು ಬಿಂಬಿಸಿದರು.

ಫೌಂಡೇಷನ್‌ನ ಅಧ್ಯಕ್ಷ ಮಹಾಲಿಂಗೇಗೌಡ ಮಾತನಾಡಿ, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಇದು ಮಂಡ್ಯ ರೈತರ ಬದುಕನ್ನು ಕಾಪಾಡುವ ಹೋರಾಟ. ರೈತ ಉಳಿದರೆ ದೇಶ ಉಳಿಯುತ್ತದೆ. ರೈತನ ಹೊಲದಲ್ಲಿ ನೀರು ಇದ್ದರೆ ಮಾತ್ರ ನಮ್ಮ ಮನೆಯ ಊಟದ ತಟ್ಟೆಯಲ್ಲಿ ಅನ್ನ ಇರುತ್ತದೆ. ಆದ್ದರಿಂದ ಸರ್ಕಾರದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಮ್ಮ ಸ್ಪಷ್ಟವಾದ ಆಗ್ರಹ ಎಂದರು.

ಮಂಡ್ಯ ಜಿಲ್ಲೆಯ ರೈತರ ಹಿತವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ರಾಜ್ಯದ ನೀರಿನ ಪರಿಸ್ಥಿತಿ ಮತ್ತು ಬೆಳೆಗಳ ಅವಶ್ಯಕತೆಯನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರೈತಪರ ಸಂಘಟನೆಗಳ ಹೋರಾಟಗಾರರ ಅಭಿಪ್ರಾಯವನ್ನು ಆಲಿಸಿ ನ್ಯಾಯಸಮ್ಮತ ಕ್ರಮ ಕೈಗೊಳ್ಳಬೇಕು. ಕಾವೇರಿ ವಿಚಾರದಲ್ಲಿ ಕರ್ನಾಟಕದ ರೈತರ ಹಿತಾಸಕ್ತಿಯನ್ನು ದೃಢವಾಗಿ ಪ್ರತಿಪಾದಿಸಬೇಕು. ಪ್ರಸ್ತುತ ಸಂದರ್ಭದಲ್ಲಿ ಆಗಲಿ, ಮುಂದೆಯೂ ಆಗಲಿ ಕಾವೇರಿ ವಿಷಯದಲ್ಲಿ ತಮಿಳುನಾಡಿಗೆ ನೀರು ಬಿಡುವ ಸಂದರ್ಭ ಬಂದರೆ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕೆಂದು ಒತ್ತಾಯಿಸಿದರು.

ಫೌಂಡೇಷನ್‌ನ ಪದಾಧಿಕಾರಿಗಳಾದ ವಿವೇಕ್, ರವಿಕುಮಾರ್, ಅಮಿತ್‌ಗೌಡ, ತೇಜಸ್‌ಗೌಡ, ಮೋಹನ್, ರವಿಗೌಡ, ಗೌತಮ್‌, ಅನಿಲ್‌ಕುಮಾರ್ ಇತರರು ಭಾಗವಹಿಸಿದ್ದರು.