ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಯಾವುದೇ ಸರ್ಕಾರವಿರಲಿ ಪ್ರತಿ ಬಜೆಟ್‌ನಲ್ಲೂ ಮಂಡ್ಯ ಜಿಲ್ಲೆಯನ್ನು ಅತ್ಯಂತ ನಿಕೃಷ್ಟ ಮತ್ತು ನಿರ್ಲಕ್ಷ್ಯದಿಂದ ಕಾಣುವುದು ಸರ್ವೇ ಸಾಮಾನ್ಯವಾಗಿದೆ. ರಾಜಕೀಯ ಪ್ರಧಾನವಾಗಿರುವ ಜಿಲ್ಲೆಯನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿರುವರೇ ವಿನಃ ಅಭಿವೃದ್ಧಿ ದೃಷ್ಟಿಯಿಂದ ಯಾರೂ ನೋಡದಿರುವುದು ಜಿಲ್ಲೆಯ ದೊಡ್ಡ ದುರಂತವಾಗಿದೆ.
ಬಜೆಟ್ ಎದುರಾದಾಗಲೆಲ್ಲಾ ಹೊಸ ನಿರೀಕ್ಷೆಗಳು ಗರಿಗೆದರಿ ಮಂಡನೆಯಾದ ಬಳಿಕ ಅವೆಲ್ಲವೂ ಹಾಗೇ ಮುದುಡಿಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಹದಿನಾರನೇ ಬಜೆಟ್‌ನಲ್ಲಿ ಜಿಲ್ಲೆಗೆ ತೃಪ್ತಿದಾಯಕವಾಗಿಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.ಕಳೆದ ಬಜೆಟ್‌ನಲ್ಲಿ ಕೃಷಿ ವಿಶ್ವ ವಿದ್ಯಾಲಯವನ್ನು ಘೋಷಿಸಿದ್ದ ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ತರಗತಿಗಳ ಆರಂಭಕ್ಕೆ ೨೫ ಕೋಟಿ ರು. ನೀಡಿ ಕೈತೊಳೆದುಕೊಂಡಿದೆ. ಹೊಸ ಸಕ್ಕರೆ ಕಾರ್ಖಾನೆ, ಮೈಷುಗರ್ ಪುನಶ್ಚೇತನದ ಬಗ್ಗೆ ಸೊಲ್ಲೆತ್ತಿಲ್ಲ. ಹಣ ಬಿಡುಗಡೆಯನ್ನೂ ಮಾಡಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಬೃಹತ್ ಮಂಡ್ಯ, ರಿಂಗ್ ರಸ್ತೆ, ಶೀತಲೀಕರಣ ಕೇಂದ್ರಗಳ ಸ್ಥಾಪನೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಮೂಲೆಗುಂಪು ಮಾಡಿದೆ.
ಮೈಷುಗರ್ ಕಾರ್ಖಾನೆಗೆ ಸಾಂಪ್ರದಾಯಿಕವಾಗಿ ನೀಡುವ ಹಣವನ್ನೂ ನೀಡಿಲ್ಲ. ಬಾಯ್ಲರ್ ಹೌಸ್ ದುರಸ್ತಿಯಾಗಬೇಕಿದೆ. ಯಂತ್ರೋಪಕರಣಗಳ ದುರಸ್ತಿ ಕಾರ್ಯ ನಡೆದಿಲ್ಲ. ಪ್ರಸ್ತುತ ಕಾರ್ಖಾನೆಯ ಪರಿಸ್ಥಿತಿಯನ್ನು ನೋಡಿದರೆ ಜೂನ್-ಜುಲೈ ತಿಂಗಳಲ್ಲಿ ಆರಂಭವಾಗುವ ಸೂಚನೆಗಳೇ ಕಂಡುಬರುತ್ತಿಲ್ಲ.ಮತ್ತೊಂದು ಕಡೆ ಕಾರ್ಖಾನೆಯನ್ನು ಗುತ್ತಿಗೆ ಪುನರ್ವಸತಿ ಕಾರ್ಯಾಚರಣೆ ಮತ್ತು ವರ್ಗಾವಣೆ (ಎಲ್‌ಆರ್‌ಒಟಿ) ಅಡಿಯಲ್ಲಿ ೪೦ ವರ್ಷಗಳ ಕಾಲ ಖಾಸಗಿಯಾಗಿ ಗುತ್ತಿಗೆ ನೀಡುವುದಕ್ಕೆ ಸರ್ಕಾರ ತರಾತುರಿಯ ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಮೈಷುಗರ್ ಕಬ್ಬು ಅರೆಯುವಿಕೆಯನ್ನು ಎಲ್‌ಆರ್‌ಒಟಿ ಮಾದರಿಯಲ್ಲಿ ನಡೆಸುವುದಕ್ಕೆ ಟೆಂಡರ್ ಕರೆಯುವುದು ಮತ್ತು ಎಥೆನಾಲ್ ಘಟಕವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಸುವುದಕ್ಕೆ ಆರ್ಥಿಕ ಇಲಾಖೆ ಚಿಂತನೆ ನಡೆಸಿದ್ದು, ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಇದಕ್ಕೆ ಅನುಮೋದನೆ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಮೈಷುಗರ್ ಕಾರ್ಖಾನೆಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ನೀಡಿಲ್ಲವೆಂಬ ಅನುಮಾನ ಮೂಡಿದೆ.
ಮಂಡ್ಯ ನಗರಕ್ಕೊಂದು ರಿಂಗ್ ರಸ್ತೆ ಬೇಕೆನ್ನುವುದು ದಶಕಗಳ ಬೇಡಿಕೆಯಾಗಿದೆ. ಮಂಡ್ಯ ನಗರದ ಎಡಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲಾಗಿದ್ದು, ಬಲಭಾಗದಲ್ಲೂ ಅದೇ ಮಾದರಿಯ ರಸ್ತೆ ನಿರ್ಮಾಣವಾದರೆ ನಗರ ಬೆಳವಣಿಗೆ ಕಾಣುತ್ತದೆ ಎಂಬ ಕಾರಣಕ್ಕೆ ೨೦೦೭ರಲ್ಲೇ ಸರ್ವೇ ಕಾರ್ಯ ಮುಗಿದು ನೀಲಿ ನಕ್ಷೆ ತಯಾರಾಗಿದ್ದರೂ ಇದುವರೆಗೂ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಪ್ರತಿ ಬಜೆಟ್‌ನಲ್ಲೂ ಇದನ್ನು ಎದುರುನೊಡುತ್ತಿದ್ದರೂ ಅದು ಹುಸಿಯಾಗುತ್ತಲೇ ಇದೆ.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಡ್ಯ ಪಾಲಿಗೆ ಮರೀಚಿಕೆಯಾಗಿಯೇ ಉಳಿದುಕೊಂಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಿಮ್ಸ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ತುರ್ತು ಅವಶ್ಯಕತೆ ಇದ್ದರೂ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿಯನ್ನು ಸ್ಥಳಾಂತರ ಮಾಡುವುದಕ್ಕೆ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಆಸಕ್ತಿಯನ್ನೇ ತೋರದಿರುವುದರಿಂದ ಆಸ್ಪತ್ರೆ ಮೇಲ್ದರ್ಜೆಗೇರುವ ಅದೃಷ್ಟದಿಂದ ವಂಚಿತವಾಗಿದೆ.
ಮಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ ೩೯ ಕೋಟಿ ರು. ಅಗತ್ಯವಿರುವುದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಣ ಬಿಡುಗಡೆ ಸಂಬಂಧ ಬಜೆಟ್‌ನಲ್ಲಿ ಸರಿಯಾದ ಮಾಹಿತಿ ದೊರಕಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬೆಂಗಳೂರಿನಲ್ಲಿ ಸಭೆ ನಡೆಸಿ ಮಿಮ್ಸ್ ಕಾಲೇಜು ಮತ್ತು ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಎಷ್ಟು ಹಣ ಬಿಡುಗಡೆಯಾಗಲಿದೆ, ಯಾವ ರೀತಿ ಆಸ್ಪತ್ರೆ ಮೇಲ್ದರ್ಜೆಗೇರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.ತೋಟಗಾರಿಕೆ ಬೆಳೆಗಳು ಹಾಳಾಗದಂತೆ ತಡೆಯಲು ಶೀತಲೀಕರಣ ಘಟಕಗಳನ್ನು ಸ್ಥಾಪಿಸಬೇಕೆನ್ನುವುದು ಬಹುದಿನಗಳ ಬೇಡಿಕೆಯಾಗಿದ್ದರೂ ಸರ್ಕಾರದಿಂದ ಸ್ಪಂದನೆಯೇ ಇಲ್ಲ. ದಂತ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಸಕ್ತಿ ಇಲ್ಲ, ನಗರದ ರಸ್ತೆಗಳ ಸೌಂದರ್ಯೀಕರಣಗೊಳಿಸುವ ಪ್ರಸ್ತಾವವಿಲ್ಲ. ಮುಖ್ಯವಾಗಿ ಜಿಲ್ಲೆಯ ಅಭಿವೃದ್ಧಿಗೆ ದೂರದೃಷ್ಟಿಯ ಯಾವೊಂದು ಯೋಜನೆಗಳು ಕಾಣಸಿಗುತ್ತಿಲ್ಲ. ಜನರಿಗೆ ಅಗತ್ಯವಿರುವ ಯೋಜನೆಗಳೂ ಕಾರ್ಯಗತವಾಗುತ್ತಿಲ್ಲ. ಹೀಗಾಗಿ ಮಂಡ್ಯ ಜಿಲ್ಲಾ ಕೇಂದ್ರ ಈಗಲೂ ದೊಡ್ಡ ಹಳ್ಳಿಯಾಗಿಯೇ ಉಳಿದುಕೊಂಡಿದೆ.
ಬಜೆಟ್‌ನಲ್ಲಿ ಮಂಡ್ಯಕ್ಕೆ ಸಿಕ್ಕಿದ್ದೇನು?- ಕೃಷಿ ವಿಶ್ವವಿದ್ಯಾನಿಲಯಕ್ಕೆ ಮೂಲ ಸೌಕರ್ಯ ಕಲ್ಪಿಸಲು 25 ಕೋಟಿ ರು. ಅನುದಾನ, ಪ್ರಸಕ್ತ ಸಾಲಿನಲ್ಲಿ ತರಗತಿ ಆರಂಭ
- ಜಿಲ್ಲೆಯಲ್ಲಿ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ- ಪೋಷಕಾಂಶ ನಿರ್ವಹಣೆಯನ್ನು ಸಕ್ಕರೆ ಕಾರ್ಖಾನೆ ಸಹಯೋಗದೊಂದಿಗೆ ಜಾರಿಗೊಳಿಸುವುದು
- ಶ್ರೀರಂಗಪಟ್ಟಣ ಒಳಚರಂಡಿ ಯೋಜನೆಯನ್ನು ಕಲ್ಪಿಸುವ ಗುರಿ- ಕೆಶಿಪ್-4 ಯೋಜನೆಯಡಿ ಮಳವಳ್ಳಿ-ಬವಲಿ (ಕೇರಳ ಗಡಿ) ರಸ್ತೆ ಅಭಿವೃದ್ಧಿ
- ಮದ್ದೂರು ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಕೆ- ಶ್ರೀರಂಗಪಟ್ಟಣ (ಪಾಂಡವಪುರ ರೈಲ್ವೆ ನಿಲ್ದಾಣ) ಬಿ.ಎಂ ರಸ್ತೆ ಜಂಕ್ಷನ್ ಚನ್ನರಾಯಪಟ್ಟಣ (ಕೆ.ಆರ್.ಪೇಟೆ ಮಾರ್ಗ) ರಸ್ತೆ ಅಭಿವೃದ್ಧಿ
ರಾಜ್ಯ ಸರ್ಕಾರದ ಬಜೆಟ್‌ಗೆ ಪ್ರತಿಕ್ರಿಯೆಯಾವುದೇ ಹೊಸತನವಿಲ್ಲದ ಕಾಟಾಚಾರದ ಬಜೆಟ್ ಇದಾಗಿದೆ. ಸರ್ಕಾರ ಉಳಿಸಿಕೊಳ್ಳುವ ಒಂದೇ ಕಾರಣಕ್ಕೆ ಬಜೆಟ್‌ನಲ್ಲಿ ಸುಳ್ಳು ಆಶ್ವಾಸನೆ ನೀಡಲಾಗಿದೆ. ಒಂದು ಸಮುದಾಯವನ್ನು ಓಲೈಸಿಕೊಂಡು ಜನಸಾಮಾನ್ಯರ ಮೂಗಿಗೆ ತುಪ್ಪ ಸವರುವ ರೀತಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ವರ್ಷದಲ್ಲಿ 1.16 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡುವ ಮೂಲಕ ರಾಜ್ಯದ ಜನರ ತಲೆ ಮೇಲೆ 7.81 ಲಕ್ಷ ಕೋಟಿಗೂ ಹೆಚ್ಚು ಸಾಲ ಹೊರಿಸಿದ್ದಾರೆ.
-ಸುರೇಶ್‌ಗೌಡ, ಮಾಜಿ ಶಾಸಕರು, ನಾಗಮಂಗಲ ಕ್ಷೇತ್ರರೈತರು ಮತ್ತು ಎಲ್ಲ ವರ್ಗಗಳ ಬಡ ಜನರ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಅನೇಕ ಕಾರ್ಯಕ್ರಮಗಳು ಈ ಬಜೆಟ್‌ನಲ್ಲಿ ಮಂಡನೆಯಾಗಿವೆ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟು 7145 ಕೋಟಿ ರು. ಹಣ ಮೀಸಲಿಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಸ್ಥಾಪಿತಗೊಳ್ಳುವ ಕೃಷಿ ವಿವಿಗೆ ಮೂಲ ಸೌಕರ್ಯ ಕಲ್ಪಿಸಲು 25ಕೋಟಿ ರು. ವೆಚ್ಚದಲ್ಲಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಿರುವುದು ಸ್ವಾಗತಾರ್ಹ.- ನೀಲಾ ಶಿವಮೂರ್ತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ. (ನಾಗಮಂಗಲ)
ಶಾಲೆಗಳು ಮಕ್ಕಳ ದಾಖಲಾತಿಯ ಕೊರತೆಯಿಂದಾಗಿ ಮುಚ್ಚುವ ಹಂತದಲ್ಲಿವೆ. ರಾಜ್ಯದ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಮತ್ತು 50 ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಶ್ಲಾಘನೀಯ. ಇರುವ ಸರ್ಕಾರಿ ಶಾಲಾ ಕಾಲೇಜುಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕ್ರಮವಹಿಸಬಹುದಿತ್ತು.
-ಸಂಧ್ಯಾ ಕುಮಾರ್, ಕರಡಹಳ್ಳಿ, ನಾಗಮಂಗಲ ತಾಲೂಕುಇಂದಿನ ಬಜೆಟ್ ಸಂಪೂರ್ಣ ಕಾಂಗ್ರೆಸ್ ಬಜೆಟ್ ನಂತಿದೆ. ಯಾರನ್ನೋ ಓಲೈಸಿಕೊಳ್ಳಲು ಅಂಕಿ-ಅಂಶ ತೋರಿದ್ದಾರೆ ವಿನಃ ಸಾರ್ವಜನಿಕರ ಪರವಾಗಿಲ್ಲ. ಗ್ಯಾರಂಟಿ ಯೋಜನೆಗಳ ಮುಂದೆ ಈ ಅಂಕಿ-ಅಂಶಗಳು ಅನುಷ್ಠಾನಗೊಳ್ಳುವುದು ಕಷ್ಟಸಾಧ್ಯ. ಕಳೆದ ಬಾರಿ ಬಜೆಟ್‌ನಲ್ಲಿ ಕೃಷಿ, ಆರೋಗ್ಯ, ಶಿಕ್ಷಣಕ್ಕೆ ಮೀಸಲಿಟ್ಟ ಹಣ ಎಷ್ಟರ ಮಟ್ಟಿಗೆ ಬಳಕೆಯಾಗಿದೆ ಎಂಬುದು ಗೊತ್ತಾದಲ್ಲಿ ಇಂದಿನ ಬಜೆಟ್ ಸಹ ಅರ್ಥವಾಗಲಿದೆ.- ಕೆ.ಎಸ್.ನಂಜುಂಡೇಗೌಡ, ರೈತ ಹೋರಾಟಗಾರಸರಳ ವಿವಾಹ ಕಾರ್ಯಮದಲ್ಲಿ ವಿವಾಹವಾಗುವ ಮುಸ್ಲಿಂ ಜೋಡಿಗಳಿಗೆ ಸರ್ಕಾರ 50 ಸಾವಿರ ರು. ಪ್ರೋತ್ಸಾಹ ಹಣ ನೀಡುವುದಾಗಿ ಪ್ರಕಟಿಸಿದೆ. ಆದರೆ, ಗ್ರಾಮೀಣ ಪ್ರದೇಶದ ರೈತ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಎಷ್ಟೇ ಸ್ಥಿತಿವಂತರಾಗಿದ್ದರೂ ಅವರಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಪ್ರತಿ ಗ್ರಾಮದಲ್ಲೂ ಹೆಣ್ಣು ಸಿಗದೆ ಅವಿವಾಹಿತರಾಗಿಯೇ ಉಳಿಯುತ್ತಿರುವ ರೈತ ಯುವಕರ ದಂಡು ಹೆಚ್ಚುತ್ತಲೇ ಇದೆ. ರೈತ ಮಕ್ಕಳನ್ನು ವಿವಾಹವಾಗುವವರಿಗೆ ಕನಿಷ್ಠ 2 ಲಕ್ಷ ರು. ಪ್ರೋತ್ಸಾಹಕ ಹಣ ನೀಡುವತ್ತ ಸರ್ಕಾರ ಚಿಂತಿಸಬೇಕಿತ್ತು.
- ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ, ಕೆ.ಆರ್.ಪೇಟೆರಾಜ್ಯ ಬಜೆಟ್ ಗ್ರಾಮೀಣ ಪ್ರದೇಶದ ಯುವಕರಿಗೆ ಸಂಪೂರ್ಣ ನಿರಾಶಾದಾಯಕವಾಗಿದೆ. ಯುವಕರಿಗೆ ಉದ್ಯೋಗ ಕಲ್ಪಿಸಲು ಯಾವುದೇ ಯೋಜನೆಗಳಿಲ್ಲ. ವಿಶೇಷ ಕೌಶಲ್ಯಭಿವೃದ್ದಿ ತರಬೇತಿ ಕೇಂದ್ರಗಳು ಮತ್ತು ಹಣಕಾಸಿನ ನೆರವಿನ ವಿಶೇಷ ಯೋಜನೆ ರೂಪಿಸಿದ್ದರೆ ರೈತರ ಮಕ್ಕಳು ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗುತ್ತಿತ್ತು.- ಎಸ್.ಜೆ.ಆನಂದ್, ಬಿಜೆಪಿ ಮುಖಂಡರು, ಸಬ್ಬನಕುಪ್ಪೆಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್ ರೈತ, ಕಾರ್ಮಿಕ ಸೇರಿದಂತೆ ಎಲ್ಲ ವರ್ಗದವರ ಹಿತ ಕಾಪಾಡುವ ಆಶಾದಾಯಕ ಬಜೆಟ್ ಆಗಿದೆ. ಕೃಷಿ ವಿವಿ ಆರಂಭಕ್ಕೆ 25 ಕೋಟಿ ರು. ಅನುದಾನ ಸ್ವಾಗತಾರ್ಹವಾಗಿದೆ. ಅಲ್ಲದೇ, ರಾಜ್ಯದ 37 ಲಕ್ಷ ರೈತರಿಗೆ 28 ಸಾವಿರ ಕೋಟಿ ಸಾಲ ವಿತರಣೆ ಮಾಡಲು ನಿರ್ಧರಿಸಿದ್ದು, ಆಕಸ್ಮಿಕವಾಗಿ ಮೃತಪಡುವ ರಾಸುಗಳಿಗೆ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿದ್ದಾರೆ. ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸುವವರಿಗೆ ಈ ಬಜೆಟ್ ಉತ್ತರ ನೀಡಿದೆ.
-ಮಧು ಜಿ.ಮಾದೇಗೌಡರು, ವಿಧಾನ ಪರಿಷತ್ ಸದಸ್ಯರುಕೇಂದ್ರ ಸರ್ಕಾರ ತೆರಿಗೆ ಹಣವನ್ನು ನಮಗೆ ಸರಿಯಾಗಿ ನೀಡುತ್ತಿಲ್ಲ ಎಂದು ಸದಾ ದೂರುವ ಸಿಎಂ ಸಿದ್ದರಾಮಯ್ಯ ರೈತರ ವಿಚಾರದಲ್ಲಿ ತಾವು ಕೂಡಾ ದ್ರೋಹ ಬಗೆದಿದ್ದಾರೆ. ರೈತರಿಗೆ ಬಜೆಟ್‌ನಲ್ಲಿ ಸಿಎಂ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ರೈತರಿಗೆ ರಾಜ್ಯ ಬಜೆಟ್‌ನಿಂದ ಯಾವುದೇ ಪ್ರಯೋಜನಗಳಿಲ್ಲ.- ನಾಗೇಂದ್ರ, ರೈತರು. ಕೆ.ಎಂ.ದೊಡ್ಡಿಕೃಷಿ ವಿವಿಗೆ 25 ಕೋಟಿ ರು. ನೀಡುವ ಮೂಲಕ ಮಂಡ್ಯಕ್ಕೆ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಕೊಡುಗೆ ನೀಡಿದ್ದಾರೆ. ಕಳೆದ ಬಜೆಟ್ ನಲ್ಲಿ ಮೈಷುಗರ್ ಹಣ ಕೊಟ್ಟಿದ್ದರು. ಈಗ ಬಿಡುಗಡೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪರ ವಿರೋಧ ಟೀಕೆಗಳು ಸಹಜ. ವಿಪಕ್ಷದವರು ಏನಾದರೂ ಹೇಳಲಿ. ಪಲ್ಟಿಫ್ಲೆಕ್ಸ್ ಗೆ ಕಡಿವಾಣ ಸರಿಯಾಗಿದೆ. ಯಾರೇ ಟಾರ್ಗೆಟ್ ಅಂತ ಹೇಳಿದರೂ ಕನ್ನಡ ನೆಲ, ಜಲ, ಭಾಷೆ ಹೋರಾಟಗಳಿಗೆ ಚಲನಚಿತ್ರ ನಟರು ಭಾಗವಹಿಸಬೇಕು ಅಷ್ಟೆ.
- ಪಿ.ರವಿಕುಮಾರ್ , ಶಾಸಕರು, ಮಂಡ್ಯಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ 7 ಕೋಟಿ ಜನರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ. ಕೃಷಿ, ಶಿಕ್ಷಣಕ್ಕೆ ಆದ್ಯತೆ, ಮೈಸೂರು ಭಾಗಕ್ಕೆ ಒತ್ತು, ಉತ್ತರ ಕರ್ನಾಟಕ ಭಾಗಕ್ಕೆ ಕೈಗಾರಿಕೆಗಳನ್ನು ನೀಡಿದ್ದಾರೆ. ಎಲ್ಲಾ ಸಮುದಾಯಗಳ ಹಿತವನ್ನು ಬಯಸಿ ಬಜೆಟ್ ಮಂಡಿಸಿದ್ದಾರೆ.-ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಸದಸ್ಯರು
ಜನಪರ, ಸಮತೋಲಿತ ಬಜೆಟ್
ಇದು ಅತ್ಯಂತ ಜನಪರ ಬಜೆಟ್. ಸಮತೋಲಿತ ಬಜೆಟ್ ಆಗಿದ್ದು, ಕೃಷಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ರೈತರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕೃಷಿ ಮತ್ತು ತೋಟಗಾರಿಕೆಗೆ 7145 ಕೋಟಿ ರು. ಮೀಸಲಿಟ್ಟಿದೆ. ಬಡವರು ಜನ ಸಾಮಾನ್ಯರಿಗೆ ಇನ್ನಷ್ಟು ಶಕ್ತಿ ತುಂಬುವಂತಹ ಅತ್ಯಂತ ಕಡಿಮೆ ತೆರಿಗೆಯ ಬಜೆಟ್ ಇದಾಗಿದೆ. ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಮೂಲಭೂತ ಸೌಕರ್ಯ ಕಲ್ಪಿಸಲು 25 ಕೋಟಿ ರು. ಅನುದಾನ ನೀಡಿ ಪ್ರಸಕ್ತ ಸಾಲಿನಲ್ಲೇ ತರಗತಿ ಪ್ರಾರಂಭವಾಗುವುದು ಉತ್ತಮ ಬೆಳವಣಿಗೆಯಾಗಿದೆ.- ಎನ್.ಚಲುವರಾಯಸ್ವಾಮಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವಜಿಲ್ಲೆಗೆ ದೊಡ್ಡ ಕೊಡುಗೆ
ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯಕ್ಕೆ 25 ಕೋಟಿ ರು. ಅನುದಾನ ನೀಡುವುದರ ಜತೆಗೆ ಪ್ರಸಕ್ತ ಸಾಲಿನಲ್ಲಿಯೇ ತರಗತಿ ಪ್ರಾರಂಭಕ್ಕೆ ಅನುಮತಿ ನೀಡಿರುವುದು ಜಿಲ್ಲೆಗೆ ಸಿಕ್ಕಂತಹ ದೊಡ್ಡ ಕೊಡುಗೆ. ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಇದಕ್ಕಾಗಿ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ. ಒಟ್ಟಾರೆ ಬಜೆಟ್‌ನಲ್ಲಿ ಕೃಷಿ, ಶಿಕ್ಷಣ, ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ, ನೀರಾವರಿ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಕ್ಕೆ ಆದ್ಯತೆ ನೀಡಿ ಅನುದಾನ ಮೀಸಲಿರಿಸುವುದು ಸ್ವಾಗತಾರ್ಹ.- ಸಿ.ತ್ಯಾಗರಾಜು, ತಾಪಂ ಮಾಜಿ ಅಧ್ಯಕ್ಷರೈತ ಕುಲವನ್ನು ಕಡೆಗಣಿಸಿದ ಬಜೆಟ್
4 ಲಕ್ಷ ಕೋಟಿಗೂ ಹೆಚ್ಚು ಹಣದ ಬಜೆಟ್‌ನಲ್ಲಿ ಕೃಷಿ ಇಲಾಖೆಗೆ ನೀಡಿರುವುದು 7145 ಕೋಟಿ ರು. ಮಾತ್ರ. ಈ ಹಣದಲ್ಲಿ ಸಂಪೂರ್ಣವಾಗಿ ಕೃಷಿ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳ ಸಂಬಳ, ಕಚೇರಿ ನಿರ್ವಹಣೆ, ವಾಹನಗಳ ಓಡಾಟದ ಖರ್ಚು. ಕಟ್ಟಡಗಳ ದುರಸ್ತಿ ಎಲ್ಲವೂ ಇದರಲ್ಲೇ ಸೇರಿದೆ. ಶೇಕಡ 60 ಕ್ಕಿಂತಲೂ ಹೆಚ್ಚು ಕೃಷಿಕರೇ ಇರುವ ಈ ರಾಜ್ಯದಲ್ಲಿ ರೈತರನ್ನು ಅಪಮಾನಕ್ಕೀಡು ಮಾಡಿದೆ. ಕೃಷಿ ರಂಗವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೊಟ್ಟಿರುವ ಹಣವು ಕೂಡ ನೇರವಾಗಿ ರೈತರಿಗೆ ಆರ್ಥಿಕ ಸಬಲೀಕರಣ ಆಗದ ರೀತಿಯಲ್ಲಿದೆ.- ಹಾಡ್ಯ ರಮೇಶ್ ರಾಜು, ಅಧ್ಯಕ್ಷರು, ದಕ್ಷಿಣ ಪ್ರಾಂತ ಭಾರತೀಯ ಕಿಸಾನ್ ಸಂಘ
ಮೈಷುಗರ್ ಸ್ಥಿತಿ ಅತಂತ್ರಮೈಷುಗರ್ ಕಾರ್ಖಾನೆ ಪುನಶ್ಚೇತನದ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಭರವಸೆ ಸಿಕ್ಕಿಲ್ಲ. ಪುನಶ್ಚೇತನ ಹೇಗೆ ಮಾಡಲಾಗುತ್ತದೆ ಎಂಬ ವಿವರಣೆ ಇಲ್ಲ. ಮಾರ್ಚ್ ತಿಂಗಳು ಬಂದರೂ ಕಾರ್ಖಾನೆ ದುರಸ್ತಿ ಕಾರ್ಯ ನಡೆದಿಲ್ಲ. ಬಾಯ್ಲರ್ ಹೌಸ್ ರಿಪೇರಿ ಆಗಿಲ್ಲ. ಹಾಗಾದರೆ ಜೂನ್‌ನಲ್ಲಿ ಕಾರ್ಖಾನೆ ಆರಂಭಿಸುವುದು ಹೇಗೆ?, ಈ ಬಜೆಟ್‌ನಲ್ಲೇ ಕಾರ್ಖಾನೆ ಬಗ್ಗೆ ಸೊಲ್ಲೆತ್ತದವರು ಪೂರಕ ಬಜೆಟ್‌ನಲ್ಲಿ ಕೊಡುವರೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
- ಸಾತನೂರು ವೇಣುಗೋಪಾಲ್, ಅಧ್ಯಕ್ಷರು, ಕಬ್ಬು ಬೆಳೆಗಾರರ ಸಂಘದೂರದೃಷ್ಟಿಯೇ ಇಲ್ಲದ ಬಜೆಟ್ಅಭಿವೃದ್ಧಿಯ ದೂರದೃಷ್ಟಿಯೇ ಇಲ್ಲದ ಬಜೆಟ್. ಕೃಷಿ ವಿವಿಗೆ ನೀಡಿರುವ 25 ಕೋಟಿ ರು. ಹಣ ಯಾವುದಕ್ಕೂ ಸಾಲದು. ಮಂಡ್ಯ ವಿವಿಗೆ ಆದ ಗತಿಯೇ ಅದಕ್ಕೂ ಆಗಲಿದೆ. ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ಮಾಡಿ ಪುರಾಣ ಪ್ರಸಿದ್ಧ ಕ್ಷೇತ್ರವನ್ನು ವಿಶ್ವ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡುವ ಉದ್ದೇಶವಿತ್ತು. ಅದನ್ನು ನಿಷ್ಕ್ರೀಯಗೊಳಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲೊಂದು ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ, ಮೈಷುಗರ್ ಪುನಶ್ಚೇತನ ಬಾಯಿಮಾತಿನಲ್ಲಷ್ಟೇ ಉಳಿದಿದೆ. ಬಜೆಟ್‌ನಿಂದ ಯಾವುದೇ ಲಾಭವಿಲ್ಲ.
- ಸಿ.ಎಸ್.ಪುಟ್ಟರಾಜು, ಮಾಜಿ ಸಚಿವರುಶಿಕ್ಷಣ ಕ್ಷೇತ್ರಕ್ಕೆ ಒತ್ತುಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 45,286 ಕೋಟಿ ರು. ಅನುದಾನ ಮೀಸಲಿಟ್ಟು, 500 ಪಬ್ಲಿಕ್ ಶಾಲೆಗಳನ್ನು ತೆರೆಯುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲಿಷ್ ಕಲಿಯಲು ಅನುಕೂಲವಾಗಲಿದೆ. ತಾಯಂದಿರ ಮರಣ ಸಂಖ್ಯೆಯನ್ನು ಕಡಿಮೆ ಮಾಡಲು 320 ಕೋಟಿ ರು. ಮೀಸಲು, ಅಕ್ಕ ಕೆಫೆಗಳ ಸ್ಥಾಪನೆ, ಆಶಾ ಕಾರ್ಯಕರ್ತೆಯರ ಸಂಬಳನ್ನು ಹೆಚ್ಚಳ ಮಾಡಿರುವುದು ಸ್ವಾಗತಾರ್ಹ.
- ಡಾ.ಮೀರಾ ಶಿವಲಿಂಗಯ್ಯ, ಕಾರ್ಯದರ್ಶಿ, ಎಸ್‌ಬಿಇಟಿ, ಮಂಡ್ಯ