ಸಾರಾಂಶ
ಸಚಿವರು ಭೇಟಿ ಕೊಟ್ಟ ಸಮಯದಲ್ಲಿ ಕೆಲ ಅಂಗಡಿ ಮಾಲೀಕರು ಸಾಲ ಮಾಡಿ ಬಂಡವಾಳ ಹಾಕಿದ್ದೇವೆ. ಕಿಡಿಗೇಡಿಗಳು ನಡೆಸಿರುವ ಈ ಕೃತ್ಯದಿಂದಾಗಿ ಅಪಾರ ನಷ್ಟ ಉಂಟಾಗಿದೆ. ಅಲ್ಲದೆ ನಮ್ಮ ಕುಟುಂಬ ಬೀದಿಗೆ ಬೀಳುವಂತಾಗಿದೆ ಎಂದು ಕಣ್ಣೀರು ಹಾಕಿದರು.
ಕನ್ನಡಪ್ರಭವಾರ್ತೆ ನಾಗಮಂಗಲ
ಗಣೇಶ ಮೆರವಣಿಗೆ ಸಮಯದಲ್ಲಿ ಎರಡು ಕೋಮಿನ ನಡುವೆ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಗುರುವಾರ ಬೆಳಿಗ್ಗೆ ಪಟ್ಟಣಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು.ಪಟ್ಟಣದ ಹೊರವಲಯದಲ್ಲಿರುವ ಎಪಿಎಂಸಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಾಂಡವಪುರ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ನಂತರ ಹಾನಿಗೊಳಗಾದ ಸ್ಥಳಗಳಿಗೆ ಖುದ್ದು ಭೇಟಿಕೊಟ್ಟು ಪರಿಶೀಲಿಸಿ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಸಾಂತ್ವನ ಹೇಳಿದರಲ್ಲದೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಪರಿಹಾರ ನೀಡುವ ಭರವಸೆ ನೀಡಿದರು.
ಸಚಿವರು ಭೇಟಿ ಕೊಟ್ಟ ಸಮಯದಲ್ಲಿ ಕೆಲ ಅಂಗಡಿ ಮಾಲೀಕರು ಸಾಲ ಮಾಡಿ ಬಂಡವಾಳ ಹಾಕಿದ್ದೇವೆ. ಕಿಡಿಗೇಡಿಗಳು ನಡೆಸಿರುವ ಈ ಕೃತ್ಯದಿಂದಾಗಿ ಅಪಾರ ನಷ್ಟ ಉಂಟಾಗಿದೆ. ಅಲ್ಲದೆ ನಮ್ಮ ಕುಟುಂಬ ಬೀದಿಗೆ ಬೀಳುವಂತಾಗಿದೆ ಎಂದು ಕಣ್ಣೀರು ಹಾಕಿದರು.ಇದಕ್ಕೂ ಮುನ್ನ ಮಾಜಿ ಶಾಸಕ ಸುರೇಶ್‌ಗೌಡ ಪಟ್ಟಣದ ಕೆಲ ಸ್ಥಳಗಳಿಗೆ ಭೇಟಿಕೊಟ್ಟು ಪರಿಶೀಲಿಸಿ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಧೈರ್ಯ ಹೇಳಿ ನಷ್ಟಕ್ಕೊಳಗಾಗಿರುವವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಗಲಭೆಕೋರರಿಗೆ ಸರ್ಕಾರದಿಂದ ಬೆಂಬಲ: ವಿಜಯೇಂದ್ರ ಆರೋಪಕನ್ನಡಪ್ರಭ ವಾರ್ತೆ ನಾಗಮಂಗಲಕಾಂಗ್ರೆಸ್ ಸರ್ಕಾರ ಗಲಭೆಕೋರರಿಗೆ ಬೆಂಬಲವಾಗಿ ನಿಂತಿರುವುದರಿಂದಲೇ ರಾಜ್ಯದ ಅಲ್ಲಲ್ಲಿ ಗಲಭೆಗಳು ನಡೆಯುತ್ತಲೇ ಇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಗಲಭೆ ನಡೆದ ಪಟ್ಟಣಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾಗಮಂಗಲದಲ್ಲಿ ಶಾಂತಿಯುವಾಗಿ ಗಣಪತಿ ಮೆರಣಿಗೆ ನಡೆಯುತ್ತಿತ್ತು. ಪೂರ್ವನಿಯೋಜಿತವಾಗಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಅಂಗಡಿಗಳಿಗೆ ಬೆಂಕಿ ಹಾಕಿ ನಾಶ ಮಾಡಿದ್ದಾರೆ. ದೇಶ ದ್ರೋಹಿಗಳು ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಮಂಡ್ಯ ಜಿಲ್ಲೆ ರೈತರ ಹೋರಾಟಕ್ಕೆ ಹೆಸರಾಗಿತ್ತು. ಇದೀಗ ಕೋಮುಗಲಭೆಯ ಮೂಲಕ ಹೆಸರಾಗುತ್ತಿದೆ. ಪೊಲೀಸರು ಮೂಕಪ್ರೇಕ್ಷಕರಾಗಿದ್ದಾರೆ. ಕಾಂಗ್ರೆಸ್ ಶಾಸಕರೇ ಮುಂದಿನ ದಿನಗಳಲ್ಲಿ ನಿಮ್ಮ ಮನೆಗಳಿಗೂ ಈ ದೇಶದ್ರೋಹಿಗಳು ನುಗ್ಗುತ್ತಾರೆ ಎಂದು ಎಚ್ಚರಿಸಿದರಲ್ಲದೆ, ಬಂಧಿತ ಹಿಂದೂಗಳನ್ನು ಬಿಡುಗಡೆ ಮಾಡಬೇಕು. ದೇಶ ದ್ರೋಹಿಗಳಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.