ಮಧ್ಯ ಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ ದೇಶೀಯ ಒಲೆಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ೨೦ ದಿನಗಳಲ್ಲಿ ೫೦೦ಕ್ಕೂ ಹೆಚ್ಚು ಒಲೆಗಳು ಮಾರಾಟವಾಗಿರುವುದಲ್ಲದೇ, ೨೦೦ ಒಲೆಗಳು ಮುಂಗಡ ಬುಕ್ಕಿಂಗ್ ಆಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಧ್ಯ ಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ ದೇಶೀಯ ಒಲೆಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ೨೦ ದಿನಗಳಲ್ಲಿ ೫೦೦ಕ್ಕೂ ಹೆಚ್ಚು ಒಲೆಗಳು ಮಾರಾಟವಾಗಿರುವುದಲ್ಲದೇ, ೨೦೦ ಒಲೆಗಳು ಮುಂಗಡ ಬುಕ್ಕಿಂಗ್ ಆಗಿದೆ.

ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಮಂಡ್ಯ ರಸ್ತೆಯಲ್ಲಿರುವ ದೇಶೀಯ ಒಲೆಗಳ ಮಾರಾಟ ಅಂಗಡಿ ಇದೀಗ ಜನರಿಂದ ತುಂಬಿಹೋಗಿದೆ. ಕಬ್ಬಿಣ, ಸ್ಟೈನ್‌ಲೆಸ್‌ಸ್ಟೀಲ್, ಕ್ಯಾಸ್ಟೋರಿನ್ (ಎರಕ), ಸಿಮೆಂಟ್ ಹಾಗೂ ಅಡುಗೆ ಒಲೆ ಜೊತೆಗೆ ಬಾಯ್ಲರ್ ವ್ಯವಸ್ಥೆಯುಳ್ಳ ಒಲೆಗಳಿಗೆ ಗ್ರಾಹಕರಿಂದ ಬೇಡಿಕೆ ಸೃಷ್ಟಿಯಾಗಿದೆ.

ಈ ಒಲೆಗಳನ್ನು ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ದೇಶೀಯ ಒಲೆಗಳನ್ನು ಮೊಬೈಲ್ ರೀತಿಯಲ್ಲಿ ಚಾರ್ಜ್ ಮಾಡಿಟ್ಟುಕೊಳ್ಳಬೇಕು. ಗ್ಯಾಸ್ ಒಲೆ ಮಾದರಿಯಲ್ಲೇ ಇದೂ ಸಹ ಇದ್ದು ಕೆಳಭಾಗದಲ್ಲಿ ಸಣ್ಣದೊಂದು ಫ್ಯಾನ್ ಅಳವಡಿಸಲಾಗಿರುತ್ತದೆ. ಅದರ ಒಲೆ ಆನ್ ಮಾಡಿದ ಸಮಯದಲ್ಲಿ ಫ್ಯಾನ್ ಮೂಲಕ ಗಾಳಿ ಸಣ್ಣ ರಂಧ್ರಗಳ ಮೂಲಕ ಹೊರಬರುತ್ತದೆ. ಮೇಲ್ಭಾಗದಲ್ಲಿ ಕಟ್ಟಿಗೆಗಳನ್ನು ಜೋಡಿಸಿ ಬೆಂಕಿ ಹಚ್ಚಿ ಉರಿಸುವುದರಿಂದ ಫ್ಯಾನ್ ಮೂಲಕ ಹೊರಬರುವ ಗಾಳಿಯಿಂದ ಹೊಗೆ ಹರಡುವುದಿಲ್ಲ. ಅಡುಗೆಯೂ ಅತಿ ಶೀಘ್ರವಾಗಿ ಆಗುವುದಲ್ಲದೆ, ಹೆಚ್ಚು ರುಚಿಕರ, ಆರೋಗ್ಯದಾಯಕವೂ ಆಗಿರುತ್ತದೆ.

ಯುದ್ಧ ಆರಂಭವಾದ ನಂತರದಲ್ಲಿ ಅಡುಗೆ ಅನಿಲಕ್ಕೆ ವ್ಯತ್ಯಯ ಕಂಡುಬಂದಿತೋ ಆಗ ದೇಶೀಯ ಒಲೆಗಳನ್ನು ಕೊಳ್ಳುವುದಕ್ಕೆ ಗ್ರಾಹಕರು ಮುಗಿಬಿದ್ದರು. ಒಲೆಗಳಿಗೆ ಮುಂಗಡ ಬುಕ್ಕಿಂಗ್ ಮಾಡಿದರು. ಹಣವನ್ನು ಕೊಟ್ಟು ಖರೀದಿಸಿಕೊಂಡು ಹೋದರು. ೫೦೦ ಕ್ಕೂ ಹೆಚ್ಚು ಒಲೆಗಳನ್ನು ಮಾರಾಟ ಮಾಡಲಾಗಿದೆ. ಇನ್ನೂ ೨೦೦ ಒಲೆಗಳಿಗೆ ಮುಂಗಡ ಬುಕ್ಕಿಂಗ್ ಆಗಿದ್ದು ಬೇಡಿಕೆಗೆ ಅನುಗುಣವಾಗಿ ದೇಶೀಯ ಒಲೆಗಳನ್ನು ತಯಾರಿಸಿ ನೀಡಲಾಗುತ್ತಿಲ್ಲ. ಅಷ್ಟೊಂದು ಬೇಡಿಕೆ ಸೃಷ್ಟಿಯಾಗಿದೆ ಎನ್ನುವುದು ಅಂಗಡಿಯವರು ಹೇಳುವ ಮಾತಾಗಿದೆ.

ದೇಶೀಯ ಒಲೆಗಳನ್ನು ಉಪಯೋಗಿಸುವವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರು ಅಡುಗೆ ಅನಿಲದಿಂದ ನಿಧಾನವಾಗಿ ದೇಶೀಯ ಒಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಗ್ಯಾಸ್ ಸಿಲಿಂಡರ್‌ಗಿಂತಲೂ ಕಡಿಮೆ ಖರ್ಚಿನಲ್ಲಿ ರುಚಿಕರ ಅಡುಗೆಯನ್ನು ತಯಾರಿಸಬಹುದೆಂಬ ನಂಬಿಕೆ ಬಂದಿರುವುದರಿಂದ ಹೆಚ್ಚು ಜನರು ದೇಶೀಯ ಒಲೆಗಳನ್ನು ಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ಎರಕದಿಂದ ತಯಾರಿಸಲಾದ ಸ್ಟೌವ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಶಾಖ ಹೆಚ್ಚು ಬರುವುದಿಲ್ಲ. ದೀರ್ಘಕಾಲ ಬಾಳಿಕೆ ಬರುತ್ತದೆ. ಈ ಒಲೆಗಳಲ್ಲಿ ಅಡುಗೆ ಮಾಡುವ ವಿಧಾನವನ್ನು ಸುಲಭವಾಗಿ ಕಂಡುಕೊಂಡಿರುವುದರಿಂದ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ದೇಶಿಯ ಒಲೆಗಳ ಬಗ್ಗೆ ಅರಿವಿಲ್ಲದವರು ಮಾರಾಟಗಾರರ ಮೂಲಕ ತಿಳಿದುಕೊಂಡು ಕೊಂಡೊಯ್ಯುತ್ತಿದ್ದಾರೆ. ೧೦ ಕೆಜಿಯಿಂದ ೧೫೦ ಕೆಜಿಯವರೆಗೆ ಒಲೆಗಳು ಲಭ್ಯವಿದೆ. ಈ ಒಲೆಗಳು ೨೫೦೦ ರು.ನಿಂದ ಆರಂಭವಾಗಿ ೮೫೦೦ ರು.ವರೆಗೆ ಮಾರಾಟವಾಗುತ್ತಿವೆ. ಕೇವಲ ದೇಶೀಯ ಒಲೆಗಳು ಮಾತ್ರವಲ್ಲದೆ ಬಾಯ್ಲರ್‌ಗಳು ಕೂಡ ದೊರೆಯುತ್ತವೆ.ದೇಶೀಯ ಒಲೆಗಳಿಗೆ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಜನರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಮಧ್ಯಪ್ರಾಚ್ಯ ಯುದ್ಧದ ಬಳಿಕ ಸುಮಾರು ೫೦೦ಕ್ಕೂ ಹೆಚ್ಚು ಒಲೆಗಳು ಮಾರಾಟವಾಗಿದ್ದು, ೨೦೦ಕ್ಕೂ ಹೆಚ್ಚು ಒಲೆಗಳನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಿದ್ದಾರೆ. ಗ್ರಾಹಕರಿಗೆ ಈ ಒಲೆಗಳನ್ನು ಸಕಾಲಕ್ಕೆ ಪೂರೈಸಲಾಗದ ಸ್ಥಿತಿ ಇದೆ.

-ಎಚ್.ಡಿ.ದೇವರಾಜು, ದೇಶಿ ಒಲೆಗಳ ಅಂಗಡಿ ಮಾಲೀಕ, ಕೆ.ಎಂ.ದೊಡ್ಡಿ