ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ

| Published : Sep 06 2024, 01:02 AM IST

ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ್ದೇನೆ. ಸಾರ್ವಜನಿಕ ಕೆಲಸಗಳಿಗೆ ದಿನದ ೨೪ ಗಂಟೆಯೂ ಕೆಲಸ ಮಾಡುತ್ತೇನೆ. ಎಲ್ಲಾ ೩೫ ಮಂದಿ ನಗರಸಭಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತವಾಗಿ ಮಂಡ್ಯ ನಗರದ ಅಭಿವೃದ್ಧಿಗೆ ಒತ್ತುಕೊಟ್ಟು ಕೆಲಸ ಮಾಡುತ್ತೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಎಂ.ವಿ.ಪ್ರಕಾಶ್ (ನಾಗೇಶ್) ಹಾಗೂ ಉಪಾಧ್ಯಕ್ಷರಾಗಿ ಎಂ.ಪಿ.ಅರುಣ್‌ಕುಮಾರ್ ಅವರು ನಗರಸಭೆಯ ತಮ್ಮ ಕಚೇರಿಯಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ್ದೇನೆ. ಸಾರ್ವಜನಿಕ ಕೆಲಸಗಳಿಗೆ ದಿನದ ೨೪ ಗಂಟೆಯೂ ಕೆಲಸ ಮಾಡುತ್ತೇನೆ. ಎಲ್ಲಾ ೩೫ ಮಂದಿ ನಗರಸಭಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತವಾಗಿ ಮಂಡ್ಯ ನಗರದ ಅಭಿವೃದ್ಧಿಗೆ ಒತ್ತುಕೊಟ್ಟು ಕೆಲಸ ಮಾಡುತ್ತೇನೆ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಮಾತನಾಡಿ, ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಪಕ್ಷ ಅವರನ್ನು ಗುರುತಿಸಿ ಅಧ್ಯಕ್ಷರನ್ನಾಗಿ ಮಾಡಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರೊಡಗೂಡಿ ನಗರದ ಅಭಿವೃದ್ಧಿಗೆ ಕೆಲಸ ಮಾಡಲಿ ಎಂದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಮಾತನಾಡಿ, ಜೆಡಿಎಸ್ ಪಕ್ಷದ ನಿಷ್ಠಾವಂತ, ಪ್ರಾಮಾಣಿಕ ಪಕ್ಷದ ಕಟ್ಟಾಳು ನಾಗೇಶ್ ಅವರಿಗೆ ಸೂಕ್ತವಾದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ೩೫ ಮಂದಿ ನಗರಸಭಾ ಸದಸ್ಯರೊಂದಿಗೆ ಸ್ಥಳೀಯ ನಾಯಕರ ಸಹಕಾರದೊಂದಿಗೆ ನಗರದ ಅಭಿವೃದ್ಧಿಗೆ ನಾಗೇಶ್ ಸೇವೆ ಸಲ್ಲಿಸುವ ಮೂಲಕ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ನಗರಸಭೆ ಉಪಾಧ್ಯಕ್ಷರಾಗಿ ಅರುಣ್‌ಕುಮಾರ್ ಅವರು ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಾಗೇಶ್ ಹಾಗೂ ಅರುಣ್ ಕುಮಾರ್ ಅವರನ್ನು ನಗರಸಭೆ ಸದಸ್ಯರು, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು, ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು ಅಭಿನಂದಿಸಿದರು.

ರಾಜಕೀಯ ದ್ವೇಷ: ಜೆಡಿಎಸ್ ನಾಯಕರ ಫ್ಲೆಕ್ಸ್ ಹರಿದ ಕಿಡಿಗೇಡಿಗಳು

ಮಂಡ್ಯ:ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸ್ವಾಗತಕೋರಿ ಹಾಕಲಾಗಿದ್ದ ಜೆಡಿಎಸ್ ನಾಯಕರ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ಬ್ಲೇಡ್‌ನಿಂದ ಹರಿದು ಹಾಕಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಹಾಗೂ ಕಚೇರಿ ಉದ್ಘಾಟನೆ, ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿ ಜೆಡಿಎಸ್ ನಾಯಕರರಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿ ಸ್ಥಳೀಯ ನಾಯಕರು ಸೇರಿದಂತೆ ಕಾರ್ಯಕರ್ತರ ಭಾವಚಿತ್ರವುಳ್ಳ ಫ್ಲೆಕ್ಸ್‌ಗಳನ್ನು ಹೆದ್ದಾರಿಯಲ್ಲಿ ಹಾಕಲಾಗಿತ್ತು.ಆದರೆ, ಮಂಗಳವಾರ ರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೆಂಗಳೂರು- ಮೈಸೂರು ಹೆದ್ದಾರಿಯ ನಂದ ಸರ್ಕಲ್‌ನಿಂದ ಮಹಾವೀರ ಸರ್ಕಲ್ ವರೆಗೂ ಅಳವಡಿಸಿದ್ದ ಪ್ಲೆಕ್ಸ್‌ಗಳಿಗೆ ಬ್ಲೇಡ ಹಾಕಿ ಕಿಡಿಗೇಡಿಗಳು ಹರಿದು ಹಾಕಿದ್ದಾರೆ.

ರಾಜಕೀಯ ದ್ವೇಷದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.