ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುರುಡೆ ಹೂತಿಟ್ಟ ಕುರಿತು ದೂರು ನೀಡಿದ್ದ ಮಾಸ್ಕ್ ಮ್ಯಾನ್ ಬಗ್ಗೆ ದಿನಕ್ಕೊಂದು ಮಾಹಿತಿಗಳು ಹೊರಬೀಳುತ್ತಿದ್ದು, ಅನಾಮಿಕನ ಸ್ವಂತ ಊರು ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಎಂಬುದು ಗೊತ್ತಾಗಿದೆ.
ಮಂಡ್ಯ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುರುಡೆ ಹೂತಿಟ್ಟ ಕುರಿತು ದೂರು ನೀಡಿದ್ದ ಮಾಸ್ಕ್ ಮ್ಯಾನ್ ಬಗ್ಗೆ ದಿನಕ್ಕೊಂದು ಮಾಹಿತಿಗಳು ಹೊರಬೀಳುತ್ತಿದ್ದು, ಅನಾಮಿಕನ ಸ್ವಂತ ಊರು ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಎಂಬುದು ಗೊತ್ತಾಗಿದೆ.
ಅನಾಮಿಕ ಹುಟ್ಟಿ ಬೆಳೆದಿದ್ದು ಮಂಡ್ಯ ತಾಲೂಕು ಕೆರಗೋಡು ಹೋಬಳಿಯ ಚಿಕ್ಕಬಳ್ಳಿ ಗ್ರಾಮವೊಂದರಲ್ಲಿ. ಈತನ ತಂದೆ, ತಾಯಿಗಳಿಗೆ ನಮ್ಮ ಗ್ರಾಮದಲ್ಲಿ ಒಳ್ಳೆಯ ಹೆಸರು ಇತ್ತು. ತಂದೆ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ತಂದೆ-ತಾಯಿ ಮೃತಪಟ್ಟ ನಂತರ ಇಡೀ ಕುಟುಂಬವೇ ಧರ್ಮಸ್ಥಳಕ್ಕೆ ತೆರಳಿತ್ತು. ಅಲ್ಲಿ ಅನಾಮಿಕ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಎಂದು ಅನಾಮಿಕ ಹುಟ್ಟಿದ ಊರಿನ ಗ್ರಾಮಸ್ಥರು ತಿಳಿಸಿದ್ದಾರೆ.
1994ರವರೆಗೆ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮವೊಂದರಲ್ಲಿ ಅನಾಮಿಕ ವಾಸವಿದ್ದ. ಈ ವೇಳೆ ಉಂಡಾಡಿ ಗುಂಡನಂತಿದ್ದ. ಏನೂ ಕೆಲಸ ಮಾಡದೆ ಬೀದಿ, ಬೀದಿ ತಿರುಗಾಡುತ್ತಿದ್ದ. ಈತ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದ. ಈತನಿಗೆ ಅಣ್ಣಂದಿರಿದ್ದಾರೆ. ಮೊದಲು ಧರ್ಮಸ್ಥಳಕ್ಕೆ ಮುಸುಕುಧಾರಿ ಹೋಗಿದ್ದ. ನಂತರ ಈತನ ಸಹೋದರ ತನಾಸಿ ಹೋದ. ಈಗಲೂ ತನಾಸಿ ಧರ್ಮಸ್ಥಳದಲ್ಲಿದ್ದಾನೆ ಎಂದು ಹೇಳಿದರು.
1994ರಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದ ಮಾಸ್ಕ್‌ಮ್ಯಾನ್ ನಂತರ 2014ರಲ್ಲಿ ಸ್ವಗ್ರಾಮಕ್ಕೆ ತನ್ನ 3ನೇ ಪತ್ನಿಯೊಂದಿಗೆ ವಾಪಸ್ ಬಂದಿದ್ದ. ಸುಮಾರು ಒಂದು ವರ್ಷ ಗ್ರಾಮದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ. ಗ್ರಾಮಸ್ಥರೇ ಸೇರಿ ಶೀಟ್ ಮನೆ ನಿರ್ಮಿಸಿಕೊಟ್ಟಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಂತರ, ಅನಾಮಿಕ ತಾನು ಇದ್ದ ಶೀಟ್ ಮನೆಯ ಜಾಗವನ್ನು ನನ್ನ ಹೆಸರಿಗೆ ಮಾಡಿಕೊಡುವಂತೆ ಗ್ರಾಮಸ್ಥರು, ಪಂಚಾಯ್ತಿಯವರೊಂದಿಗೆ ಜಗಳ ಮಾಡುತ್ತಿದ್ದ. ಅಲ್ಲೇ ಸ್ವಚ್ಛತಾ ಕಾರ್ಯದ ಜೊತೆಗೆ ಇಟ್ಟಿಗೆ ಪ್ಯಾಕ್ಟರಿಯಲ್ಲೂ ಕೆಲಸ ಮಾಡಿಕೊಂಡಿದ್ದ. ಬಳಿಕ, ರಾತ್ರೋರಾತ್ರಿ ಊರು ಖಾಲಿ ಮಾಡಿಕೊಂಡು ಹೋಗಿದ್ದ ಎಂದು ಮಾಹಿತಿ ನೀಡಿದರು.
ಅನಾಮಿಕನ ತಂದೆ-ತಾಯಿ ಒಳ್ಳೆಯವರಾದರೂ ಈತ ಮಾತ್ರ ಮೋಸಗಾರ. ಈತನಿಗೆ ಮೂರ್ನಾಲ್ಕು ಜನ ಅಣ್ಣ ತಮ್ಮಂದಿರಿದ್ದರು. ಅವರೆಲ್ಲರೂ ಒಳ್ಳೆಯವರೇ. ಈತ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೀನಿ ಎನ್ನುವುದು, ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಬಗ್ಗೆ ಹೇಳುತ್ತಿರುವುದೆಲ್ಲವೂ ಸುಳ್ಳು ಎಂದು ತಿಳಿಸಿದರು.
ಗ್ರಾಮಸ್ಥರು ಧರ್ಮಸ್ಥಳಕ್ಕೆ ಹೋದಾಗ ದೇವಸ್ಥಾನಕ್ಕೆ ನಮ್ಮನ್ನು ಬಿಡಿಸುತ್ತಿದ್ದ. ಒಮ್ಮೆ ಗ್ರಾಮಕ್ಕೆ ಬಂದು ಸೀರೆ ಬಟ್ಟೆ ಹಂಚಿದ್ದ. ಈ ಬಗ್ಗೆ ಕೇಳಿದಾಗ ವೀರೇಂದ್ರ ಹೆಗ್ಗಡೆಯವರು ಹಂಚಲು ಕೊಟ್ಟಿದ್ದಾರೆ ಎಂದು ಹೇಳಿದ್ದ. ಆದರೆ, ಇವನು ಶವಗಳ ಮೇಲಿದ್ದ ಚಿನ್ನ, ಒಡವೆ ಕದಿಯುತ್ತಿದ್ದ ಎಂಬುದನ್ನು ನಾವು ಕೇಳಿದ್ದೆವು ಎಂದು ಹೇಳಿದರು.