ಸಾರಾಂಶ
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭಾನುವಾರ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಭತ್ತ ನಾಟಿ ಮಾಡುವ ಮೂಲಕ ಕೃಷಿಯ ಖುಷಿಯನ್ನು ಅನುಭವಿಸಿದರು.
ಮಂಡ್ಯ ಮಂಜುನಾಥ
ಮಂಡ್ಯ : ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭಾನುವಾರ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಭತ್ತ ನಾಟಿ ಮಾಡುವ ಮೂಲಕ ಕೃಷಿಯ ಖುಷಿಯನ್ನು ಅನುಭವಿಸಿದರು.
ಅರಳಕುಪ್ಪೆ ಗ್ರಾಮದ ಕೃಷ್ಣಪ್ಪ ಎಂಬುವರಿಗೆ ಸೇರಿದ ಮೂರು ಎಕರೆ ಗದ್ದೆಯಲ್ಲಿ ಭತ್ತ ನಾಟಿಗೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ೧೨.೩೦ರ ಸಮಯಕ್ಕೆ ಗದ್ದೆಯ ಮೇಲ್ಭಾಗದಲ್ಲಿ ರಾಶಿಪೂಜೆ ನೆರವೇರಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಂತರ ಪಂಚೆಯನ್ನು ಎತ್ತಿಕಟ್ಟಿ ಗದ್ದೆಯೊಳಗೆ ಇಳಿದರು. ಇವರೊಂದಿಗೆ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಬೇಲೂರು ಶಶಿಧರ ಕೂಡ ಗದ್ದೆಗಿಳಿದರು. ಇವರೊಂದಿಗೆ ೧೨೫ ಮಹಿಳಾ ಕೂಲಿ ಕಾರ್ಮಿಕರು ಗದ್ದೆಗಿಳಿದು ನಾಟಿ ಕಾರ್ಯ ಮಾಡಿದರು.
ಎಚ್.ಡಿ.ಕುಮಾರಸ್ವಾಮಿ ಭತ್ತದ ಗದ್ದೆಗಿಳಿದು ನಾಟಿ ಮಾಡಿದ ಕೆಲ ಸಮಯದಲ್ಲೇ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಸ್ಥಳಕ್ಕೆ ಆಗಮಿಸಿದರು. ಪಂಚೆ ಧರಿಸಿ ಬಂದಿದ್ದ ನಿಖಿಲ್ ಕೂಡ ಪಂಚೆ ಎತ್ತಿಕಟ್ಟಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೆರವಿನೊಂದಿಗೆ ಭತ್ತದ ಸಸಿಗಳನ್ನು ನಾಟಿ ಮಾಡಿದರು.
ರೈತ ಮಹಿಳೆಯರೊಟ್ಟಿಗೆ ಕುಳಿತು ಊಟ:
ಆ ನಂತರದಲ್ಲಿ ಗದ್ದೆಯ ಮತ್ತೊಂದು ಭಾಗಕ್ಕೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಾಟಿ ಮಾಡುವ ಯಂತ್ರದಲ್ಲಿ ಕುಳಿತು ಚಾಲನೆ ಮಾಡುವ ಮೂಲಕ ಭತ್ತದ ಸಸಿಗಳನ್ನು ನಾಟಿ ಮಾಡಿದರು. ಬಳಿಕ ಗದ್ದೆಯ ಮೇಲ್ಭಾಗದಲ್ಲಿ ಭತ್ತ ನಾಟಿ ಮಾಡಿದ ಕೂಲಿ ಕಾರ್ಮಿಕ ಮಹಿಳೆಯರೊಂದಿಗೆ ಕುಳಿತು ಊಟ ಮಾಡಿದರು. ಪ್ರಕೃತಿಯ ಮಡಿಲಿನಲ್ಲಿ ಆಹ್ವಾದಕರ ವಾತಾವರಣದಲ್ಲಿ ಕುಳಿತು ರೈತ ಮಹಿಳೆಯರೊಂದಿಗೆ ಊಟ ಸವಿದು ವಿಶೇಷ ಅನುಭವ ಪಡೆದುಕೊಂಡರು.
ನಾಟಿ ಕಾರ್ಯದಲ್ಲಿ ತೊಡಗಿದ್ದ 125 ಮಂದಿ ರೈತ ಮಹಿಳೆಯರಿಗೆ ಹಾಗೂ 25 ಮಂದಿ ಪುರುಷರಿಗೆ ವರಮಹಾಲಕ್ಷ್ಮೀ ಹಬ್ಬದ ಉಡುಗೊರೆಗಳನ್ನು ಎಚ್.ಡಿ.ಕುಮಾರಸ್ವಾಮಿ ಅವರು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಾವೇರಿ ನದಿಗೆ ಬಾಗಿನ:
ಇದಕ್ಕೂ ಮುನ್ನ ಎಚ್.ಡಿ.ಕುಮಾರಸ್ವಾಮಿ ಅವರು ಅರಳಕುಪ್ಪೆ ಗ್ರಾಮದ ಶ್ರೀಆಂಜನೇಯಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಪಕ್ಕದಲ್ಲೇ ಹರಿಯುತ್ತಿದ್ದ ತುಂಬಿ ಹರಿಯುತ್ತಿದ್ದ ಕಾವೇರಿ ನದಿಗೆ ಬಾಗಿನ ಸಮರ್ಪಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು 2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಆ.11 ರಂದು ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಭತ್ತದ ನಾಟಿ ಮಾಡಿದ್ದರು. ಇದೀಗ ಮಂಡ್ಯ ಜಿಲ್ಲೆಯ ಸಂಸದರಾಗಿ, ಕೇಂದ್ರ ಸಚಿವರಾದ ನಂತರ ಆ.11 ರಂದೇ ಅರಳಕುಪ್ಪೆಯಲ್ಲಿ ಭತ್ತದ ನಾಟಿ ಮಾಡಿದ್ದು ಕಾಕತಾಳೀಯವೆಂಬಂತಾಗಿತ್ತು.
ರುಚಿಕರವಾದ ಭೋಜನ ವ್ಯವಸ್ಥೆ
ಕುಮಾರಣ್ಣ ಕೃಷಿ-ಖುಷಿ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆಲ್ಲಾ ರುಚಿಕರವಾದ ಭೋಜನವನ್ನು ಆಯೋಜಿಸಲಾಗಿತ್ತು. ಮುದ್ದೆ, ಅವರೆಕಾಳು ಗೊಜ್ಜು, ಅನ್ನ, ಸೊಪ್ಪುಸಾರು, ಪಾಯಸ, ಮೊಸರನ್ನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ವಿರೋಧಿಗಳಿಗೆ ಸಂದೇಶ ರವಾನೆ:
ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಅನ್ನದಾತರಿಗೆ ಆತ್ಮವಿಶ್ವಾಸ ತುಂಬಲು ರೈತರೊಂದಿಗೆ ನಾಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭತ್ತದ ನಾಟಿ ಮಾಡುವುದರೊಂದಿಗೆ ತಾನು ಮಣ್ಣಿನ ಮಗ ಎಂದು ವಿರೋಧಿಗಳಿಗೆ ಟಕ್ಕರ್ ಕೊಡುವುದರ ಜೊತೆಗೆ ಇದೀಗ ಮಂಡ್ಯ ರೈತರೊಂದಿಗೆ ನಾನಿದ್ದೀನೆ ಎಂಬ ಸಂದೇಶ ರವಾನಿಸುವುದು ಈ ಭತ್ತದ ನಾಟಿ ಕಾರ್ಯಕ್ರಮದ ಹಿಂದಿನ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ದಾರಿಯುದ್ದಕ್ಕೂ ಸಿಂಗಾರ:
ಭತ್ತದ ನಾಟಿ ಕಾರ್ಯಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಆಗಮನ ಹಿನ್ನೆಲೆಯಲ್ಲಿ ಅರಳಕುಪ್ಪೆ ಗ್ರಾಮದ ಪ್ರವೇಶದ್ವಾರದಿಂದ ಅಲಂಕಾರಿಕ ಫ್ಲೆಕ್ಸ್‌ಗಳು ರಸ್ತೆಯ ಇಕ್ಕೆಲಗಳಲ್ಲೂ ರಾರಾಜಿಸುತ್ತಿದ್ದವು. ಎತ್ತಿನಗಾಡಿಗಳನ್ನು ಕಲಾತ್ಮಕವಾಗಿ ಸಿಂಗರಿಸಲಾಗಿತ್ತು. ಬಣ್ಣ ಬಣ್ಣದ ವಸ್ತ್ರಗಳನ್ನು ತೆಂಗಿನಮರಗಳಿಗೆ ಕಟ್ಟಲಾಗಿತ್ತು. ವಸ್ತ್ರಗಳನ್ನು ತೋರಣದ ಮಾದರಿಯಲ್ಲೂ ಅಲಂಕರಿಸಿ ಕಾರ್ಯಕ್ರಮದ ಸ್ಥಳಕ್ಕೆ ಮೆರುಗನ್ನು ನೀಡಲಾಗಿತ್ತು.