ಸಾರಾಂಶ
ಮಂಡ್ಯ ತಾಲೂಕು ಬೂದನೂರು ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರು ಸಹ 2017ರಲ್ಲಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಸರ್ಕಾರಿ ಕಟ್ಟೆಯನ್ನು ಮುಸ್ಮಿಂ ಮಕಾನ್ ಆಗಿ ಬಲಾಯಿಸಲಾಗಿತ್ತು
ಮಂಡ್ಯ ಮಂಜುನಾಥ
ಮಂಡ್ಯ : ಮಂಡ್ಯ ತಾಲೂಕು ಬೂದನೂರು ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರು ಸಹ 2017ರಲ್ಲಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಸರ್ಕಾರಿ ಕಟ್ಟೆಯನ್ನು ಮುಸ್ಮಿಂ ಮಕಾನ್ ಆಗಿ ಬಲಾಯಿಸಲಾಗಿತ್ತು. ಆದರೆ, ಗ್ರಾಮಸ್ಥರ ಹೋರಾಟದ ಪ್ರತಿಫಲವಾಗಿ 2022ರಲ್ಲಿ ಜಿಲ್ಲಾಧಿಕಾರಿ ಅವರೇ ಆರ್‌ಟಿಸಿಯಲ್ಲಿ ಮಕಾನ್ ಎಂದಿರುವುದನ್ನು ರದ್ದು ಮಾಡಿದ್ದಾರೆ.
ಬೂದನೂರು ಗ್ರಾಮದ ಸರ್ವೇ ನಂ.313ರಲ್ಲಿ ವಕ್ಫ್‌ಗೆ 30 ಗುಂಟೆ ಬದಲಾಗಿ 1.13 ಎಕರೆ ಸರ್ಕಾರಿ ಕಟ್ಟೆ ಜಾಗವನ್ನು ನೀಡುವ ಮೂಲಕ ಮುಸ್ಲಿಂ ಮಕಾನ್‌ಗೆ ತಿದ್ದುಪಡಿ ಮಾಡಲಾಗಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ 2022ರಲ್ಲಿದ್ದ ಜಿಲ್ಲಾಧಿಕಾರಿ ಅವರು ದಾಖಲೆಗಳನ್ನೆಲ್ಲಾ ಮರುಪರಿಶೀಲಿಸಿ 2022 ಫೆ.ರಂದು ಮಕಾನ್ ಜಾಗವನ್ನು ರದ್ದುಪಡಿಸಿದ್ದಾರೆ.
ಬೂದನೂರು ಗ್ರಾಮದ ಈ ಜಾಗವು 1969-70ನೇ ಸಾಲಿನಿಂದ 1976-77ನೇ ಸಾಲಿನವರೆಗೆ ಕೈ ಬರಹದ ಆರ್‌ಟಿಸಿಯಲ್ಲಿ ಸರ್ಕಾರಿ ಎಂದು ನಮೂದಾಗಿದೆ. ಬಳಿಕ 1977-78ನೇ ಸಾಲಿನಿಂದ 2017 ಮೇ 30ರವರ ಆರ್‌ಟಿಸಿಯಲ್ಲೂ ಸರ್ಕಾರಿ ಸ್ಮಶಾನ ಎಂದೇ ನಮೂದಾಗಿದೆ. ಆದರೆ, 2017 ಏ.24ರಲ್ಲಿ ಇದ್ದ ಮಂಡ್ಯ ಉಪವಿಭಾಗಾಧಿಕಾರಿ ಅವರು ಸರ್ಕಾರಿ ಜಾಗ ಎಂಬುದನ್ನು ಮುಸಲ್ಮಾನರ ಮಕಾನ್ ಎಂದು ಖಾತೆ ಅಂಗೀಕರಿಸಿದ್ದು, ಸರ್ವೇ ನಂ.313ರಲ್ಲಿ 1.13 ಎಕರೆ ಜಮೀನು ವಕ್ಫ್ ಬೋರ್ಡ್‌ಗೆ ಸೇರಿಸಿರುವುದು ಕಂಡುಬಂದಿದೆ.
ವಕ್ಫ್‌ಗೆ ₹37.82 ಲಕ್ಷ ಭೂಸ್ವಾಧೀನ ಪರಿಹಾರ:
ಬೂದನೂರು ಗ್ರಾಮದ ಸರ್ವೇ ನಂ.313ರಲ್ಲಿ 1543 ಚ.ಮೀ. ( 15.25ಗುಂಟೆ) ಜಮೀನು ರಾಷ್ಟ್ರೀಯ ಹೆದ್ದಾರಿ-275ಕ್ಕೆ ಭೂಸ್ವಾಧೀನವಾಗಿದ್ದು, ಈ ಭೂಸ್ವಾಧೀನದ ಪರಿಹಾರದ 37,82,499 ರು. ಹಣವನ್ನೂ ವಕ್ಫ್ ಬೋರ್ಡ್‌ಗೆ ಪಾವತಿಸಲಾಗಿದೆ. ಇದು ಅವಾರ್ಡ್ ನೋಟೀಸ್‌ನಿಂದ ತಿಳಿದು ಬಂದಿದೆ.
ಗ್ರಾಮಸ್ಥರ ವಿರೋಧ:
ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇರದಿದ್ದರೂ ಮುಸ್ಲಿಂ ಮಕಾನ್ ಹೇಗೆ ಬಂತು ಎಂದು ಬೂದನೂರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಈ ಜಮೀನನ್ನು ಹಿಂದೂಗಳ ಸ್ಮಶಾನಕ್ಕೆ ಕಾಯ್ದಿರಿಸುವಂತೆ ಒತ್ತಾಯಿಸಿದ್ದರು. ಗ್ರಾಮಸ್ಥರ ಹೋರಾಟ ತೀವ್ರವಾದ ಹಿನ್ನೆಲೆ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ವಕ್ಫ್ ಅಧಿಕಾರಿಯನ್ನೊಳಗೊಂಡ ತಂಡವೊಂದು ಅಧ್ಯಯನ ನಡೆಸಿ 2022ರಲ್ಲಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿತ್ತು.
ಸಿಬಿಐಗೆ ದೂರು ನಿಡುವೆ
2017ರಲ್ಲಿ ಜಿಯಾವುಲ್ಲಾ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿದ್ದರು. ಆಗ ತಿದ್ದುಪಡಿ ಆದೇಶ ಮಾಡಿ ಸರ್ಕಾರಿ ಜಾಗವನ್ನು ವಕ್ಫ್‌ಗೆ ಸೇರಿಸಿದ್ದಾರೆ. ಇದರಿಂದ ವಕ್ಫ್ ಬೋರ್ಡ್‌ಗೆ ₹37.82 ಲಕ್ಷ ಭೂಸ್ವಾಧಿನದ ಪರಿಹಾರ ಹೋಗಿದ್ದು, ಇದರ ವಿರುದ್ಧ ಸಿಬಿಐಗೆ ದೂರು ನೀಡುವೆ.
- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ