ಮಂಡ್ಯ ಜಿಲ್ಲೆಯ ೩೭ ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಇದೆ. ಈಗಾಗಲೇ ಶೇ.೬೦ರಷ್ಟು ಬೆಳೆ ಒಣಗಿಹೋಗಿದೆ. ತಕ್ಷಣಕ್ಕೆ ನೀರು ಹರಿಸಿದರೆ ಉಳಿದಿರುವ ಶೇ.೪೦ರಷ್ಟು ಬೆಳೆಯನ್ನಾದರೂ ಉಳಿಸಿಕೊಳ್ಳಬಹುದು. ಅಣೆಕಟ್ಟೆಯಲ್ಲಿ ೯೨ ಅಡಿ ನೀರಿದ್ದರೂ ನೀರು ಬಿಡದ ಸರ್ಕಾರ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಳೆದು ನಿಂತ ಬೆಳೆಗಳು ಒಣಗುತ್ತಿದ್ದರೂ ನಾಲೆಗಳಿಗೆ ನೀರು ಹರಿಸದ ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವಿನ ವಿರುದ್ಧ ಜೆಡಿಎಸ್ ದಳಪತಿಗಳು ಸೋಮವಾರ ಬೀದಿಗಿಳಿದು ಹೋರಾಟ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ರಣಕಹಳೆ ಮೊಳಗಿಸಿದ ಜೆಡಿಎಸ್ ನಾಯಕರು ಈ ಕೂಡಲೇ ನಾಲೆಗಳಿಗೆ ನೀರು ಹರಿಸದಿದ್ದರೆ ಗುರುವಾರದಿಂದ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲೆಯ ೩೭ ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಇದೆ. ಈಗಾಗಲೇ ಶೇ.೬೦ರಷ್ಟು ಬೆಳೆ ಒಣಗಿಹೋಗಿದೆ. ತಕ್ಷಣಕ್ಕೆ ನೀರು ಹರಿಸಿದರೆ ಉಳಿದಿರುವ ಶೇ.೪೦ರಷ್ಟು ಬೆಳೆಯನ್ನಾದರೂ ಉಳಿಸಿಕೊಳ್ಳಬಹುದು. ಅಣೆಕಟ್ಟೆಯಲ್ಲಿ ೯೨ ಅಡಿ ನೀರಿದ್ದರೂ ನೀರು ಬಿಡದ ಸರ್ಕಾರ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಟೀಕಿಸಿದರು.

ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ೨೦೨೩ರಲ್ಲಿ ೭೭ ಅಡಿ ನೀರಿದ್ದಾಗ ದಿನಕ್ಕೆ ೨೫೦೦ ಕ್ಯುಸೆಕ್‌ನಂತೆ ನೀರು ಬಿಡುಗಡೆ ಮಾಡಿರುವ ದಾಖಲೆಗಳಿವೆ. ಕೆಆರ್‌ಎಸ್ ನೀರಿನ ಮಟ್ಟ ೭೪ ಅಡಿಗಿಂತ ಮೇಲಿದ್ದರೆ ಕೃಷಿಗೆ ಬಳಸಿಕೊಳ್ಳಬಹುದು ಎಂದು ಅಣೆಕಟ್ಟೆ ನಿರ್ಮಾಣದ ಪ್ರಮುಖ ಅಂಶಗಳಲ್ಲಿ ಸೇರಿಸಲಾಗಿದೆ. ಈಗ ಅಣೆಕಟ್ಟೆಯಲ್ಲಿ ೯೨ ಅಡಿ ನೀರಿದ್ದರೂ ಬೆಳೆಗಳಿಗೆ ಕೊಡದೆ ಸರ್ಕಾರ ಸುಮ್ಮನೆ ಕುಳಿತಿರುವುದೇಕೆ. ರೈತರನ್ನು ಏನು ಮಾಡಬೇಕು ಎಂದುಕೊಂಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.

ರೈತರ ಸಾಲ ಮನ್ನಾ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಮ್ಮ ಸಾಲಮನ್ನಾ ಯಾರಿಗ್ರೀ ಬೇಕು. ಅದರಿಂದ ರೈತರ ಉದ್ಧಾರವಾಗೋಲ್ಲ. ಬೆಳೆದುನಿಂತಿರುವ ಬೆಳೆ ರಕ್ಷಿಸಲಾಗದಿದ್ದರೆ ರೈತರು ಸಾಲಗಾರರಾಗುತ್ತಾರೆ. ಅಣೆಕಟ್ಟೆಯಲ್ಲಿ ನೀರನ್ನಿಟ್ಟುಕೊಂಡು ರೈತರ ಬದುಕನ್ನು ಸರ್ವನಾಶ ಮಾಡುತ್ತಿದ್ದೀರಿ. ಕೃಷಿ ಭೂಮಿಯನ್ನು ಸರ್ಕಾರ ರಿಯಲ್ ಎಸ್ಟೇಟ್ ಮಾಡುವುದಕ್ಕೆ ಹೊರಟಿರುವಂತೆ ಕಂಡುಬರುತ್ತಿದೆ ಎಂದು ಟೀಕಿಸಿದರು.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಬಿಡುಗಡೆ ಮಾಡುವ ಭರವಸೆ ನೀಡಿ ಈಗ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ. ಬೆಳೆಗಳ ರಕ್ಷಣೆಗೆ ಪ್ರಧಾನ ಆದ್ಯತೆಯನ್ನು ನೀಡದೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ರಾಜ್ಯದ ಕಾವೇರಿ ಕಣಿವೆಯ ರೈತರ ಬದುಕನ್ನು ಬೀದಿಪಾಲು ಮಾಡಿ ನೆರೆ ರಾಜ್ಯದ ರೈತರ ಬದುಕನ್ನು ಹಸನು ಮಾಡುವುದಕ್ಕೆ ಟೊಂಕಕಟ್ಟಿ ನಿಂತಿದೆ ಎಂದು ಕಿಡಿಕಾರಿದರು.

ಬೆಂಗಳೂರಿನ ಕುಡಿಯುವ ನೀರಿಗೆ ೫ ಹಂತಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಈಗ ಆರನೇ ಹಂತದ ಯೋಜನೆಗೂ ಮುಂದಾಗಿದ್ದಾರೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ನಿಜ. ಇಡೀ ದೇಶಕ್ಕೆ ಕೆಆರ್‌ಎಸ್‌ನಿಂದ ಕುಡಿಯುವ ನೀರು ಕೊಡುವುದಕ್ಕೆ ಸಾಧ್ಯವೇ. ಮಹಾರಾಜರು ಅಣೆಕಟ್ಟೆ ಕಟ್ಟಿರುವುದು ಕೃಷಿ ಮತ್ತು ಕುಡಿಯುವ ನೀರಿಗೆ ಮಾತ್ರ. ಕೃಷಿಗೆ ನೀರು ಹರಿಸುವುದಕ್ಕೆ ಅವಕಾಶಗಳಿರುವಾಗ ಸರ್ಕಾರ ಮೌನ ವಹಿಸಿದೆ. ಈ ಸರ್ಕಾರಕ್ಕೆ ಕೃಷಿ ಬಗ್ಗೆ ಜ್ಞಾನವಿಲ್ಲ. ರೈತ ಪರ ಆಸಕ್ತಿಯಂತೂ ಮೊದಲೇ ಇಲ್ಲ. ಇಂತಹವರಿಂದ ನಾಡು ಉದ್ಧಾರವಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ರೈತರ ಬದುಕನ್ನು ಸರ್ವನಾಶ ಮಾಡುತ್ತಿದೆ. ಜುಲೈ ತಿಂಗಳಲ್ಲಿ ಕೆಆರ್‌ಎಸ್ ಪ್ರವೇಶದ್ವಾರದಲ್ಲಿ ನಾಲಾ ಕಾಮಗಾರಿ ನಡೆಸುತ್ತಿರುವುದು ವಿಚಿತ್ರವಾದರೂ ಸತ್ಯ. ಗುತ್ತಿಗೆದಾರನಿಗೆ ಲಾಭ ಮಾಡಿಕೊಡಬೇಕು ಎನ್ನುವುದಷ್ಟೇ ಸರ್ಕಾರದ ಉದ್ದೇಶವಾಗಿದೆ. ರೈತರು ದಿವಾಳಿಯಾದರೂ ಯಾರಿಗೂ ಚಿಂತೆಯೇ ಇಲ್ಲ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ ಸೇರಿದಂತೆ ಹಲವರಿದ್ದರು.

ಬೆಳೆಗಳು ಗದ್ದೆಯಲ್ಲೇ ಒಣಗುತ್ತಿವೆ. ಸರ್ಕಾರದ ಈ ಉದಾಸೀನ ಧೋರಣೆ ಸರಿಯಲ್ಲ. ಹಿಂದೆಲ್ಲಾ ಅಣೆಕಟ್ಟೆಯಲ್ಲಿ ಕಡಿಮೆ ನೀರಿದ್ದಾಗಲೂ ನೀರು ಹರಿಸಲಾಗಿದೆ. ಆ ದಾಖಲೆಗಳನ್ನಿಟ್ಟುಕೊಂಡೇ ನೀರು ಹರಿಸುವಂತೆ ಒತ್ತಡ ಹಾಕಲಾಗುತ್ತಿದೆ. ಗುತ್ತಿಗೆದಾರರಿಗೆ ಸಹಾಯ ಮಾಡುವುದೇ ನಿಮ್ಮ ಧ್ಯೇಯವಾದರೆ ರೈತರು ಎಲ್ಲಿಗೆ ಹೋಗಬೇಕು. ರೈತರ ಬದುಕಿನ ಜೊತೆ ಚೆಲ್ಲಾಟ ಸರಿಯಲ್ಲ. ಕೂಡಲೇ ನಾಲೆಗಳಿಗೆ ನೀರು ಹರಿಸಿ ಬೆಳೆ ರಕ್ಷಣೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ.

- ಸಿ.ಎಸ್.ಪುಟ್ಟರಾಜು, ಮಾಜಿ ಸಚಿವ

ಈ ಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ. ಕುಮಾರಸ್ವಾಮಿ ಅವರು ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಒಂದು ಕಟ್ಟು ನೀರು ಹರಿಸುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಈ ಸರ್ಕಾರ ಕಣ್ಣಿದ್ದೂ ಕುರುಡಾಗಿದೆ. ಕಿವಿಯಿದ್ದೂ ಕಿವುಡಾಗಿದೆ. ನೀರಾವರಿ ಸಲಹಾ ಸಮಿತಿಯಲ್ಲಿ ಇನ್ನೆರಡು ದಿನಗಳಲ್ಲಿ ನಾಲೆಗಳಿಗೆ ನೀರು ಹರಿಯಲಿದೆ ಎಂದವರು ಈಗ ಮೂರು ದಿನವಾದರೂ ನಾಲೆಗಳಿಗೆ ನೀರು ಹರಿದಿಲ್ಲ. ರೈತ ಬದುಕು ದುಸ್ತರವಾಗಿದೆ.

- ಡಿ.ರಮೇಶ್, ಜೆಡಿಎಸ್ ಜಿಲ್ಲಾಧ್ಯಕ್ಷರು

ಜಿಲ್ಲೆಯಲ್ಲಿ ಕಾರ್ಖಾನೆಗಳು ಆರಂಭವಾಗಿದೆ. ರೈತರ ಕಬ್ಬು ಕಟಾವಿಗೆ ಬಂದಿದೆ. ಆದರೆ, ಬೆಳೆ ನೀರಿಲ್ಲದೆ ಒಣಗುತ್ತಿದೆ. ಒಂದು ಕಟ್ಟು ನೀರು ಕೊಟ್ಟರೆ ರೈತರು ಉಳಿಯುವುದಕ್ಕೆ ಸಾಧ್ಯವಾಗಲಿದೆ. ಸರ್ಕಾರ ಕೂಡಲೇ ಮನಸ್ಸು ಮಾಡಿ ಬೆಳೆಗಳಿಗೆ ನೀರು ಹರಿಸಬೇಕು. ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿರುವಾಗ ಬೆಳೆಗಳಿಗೆ ಹರಿಸದೆ ರೈತರನ್ನು ಗೋಳು ಹೊಯ್ದುಕೊಳ್ಳುತ್ತಿರುವುದೇಕೆ? ರೈತರ ಬದುಕನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಲ್ಲವೇ?

- ಬಿ.ಆರ್.ರಾಮಚಂದ್ರು, ಜೆಡಿಎಸ್ ಮುಖಂಡಕೆ.ಆರ್.ಎಸ್.ಸೇರಿದಂತೆ ಹೇಮಾವತಿ ಭಾಗದ ಬೆಳೆಗಳೂ ಒಣಗುತ್ತಿವೆ. ನೀರು ಹರಿಸುವಂತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರೈತರು ನೀರಿಗಾಗಿ ಹೋರಾಟ ಮಾಡುತ್ತಲೇ ಇದ್ದಾರೆ. ದಪ್ಪ ಚರ್ಮವನ್ನು ಹೊಂದಿರುವ ಈ ಸರ್ಕಾರ, ಸಚಿವರು ಮತ್ತು ಶಾಸಕರಿಗೆ ರೈತರ ಕೂಗು ಕೇಳಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ನೋವನ್ನು ಆಲಿಸಿ ಬೆಳೆಗಳನ್ನು ಉಳಿಸಲು ಕೂಡಲೇ ನೀರು ಬಿಡುವಂತೆ ಆದೇಶಿಸಬೇಕು. ಇಲ್ಲವಾದರೆ ಮುಂದಿನ ಹೋರಾಟದ ರೂಪುರೇಷೆ ರೂಪಿಸಬೇಕಾಗುತ್ತದೆ.-ಎಚ್.ಟಿ.ಮಂಜು, ಶಾಸಕ, ಕೆ.ಆರ್.ಪೇಟೆ

ಐಸಿಸಿ ಸಭೆಯಲ್ಲಿ ನಾನೂ ಭಾಗವಹಿಸಿ ರೈತರು ಬೆಳೆದಿರುವ ಬೆಳೆಗಳು ಒಣಗುತ್ತಿದ್ದು, ಕೂಡಲೇ ನೀರು ಬಿಡಬೇಕೆಂದು ಮನವಿ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ, ಇದುವರೆಗೂ ನೀರು ಹರಿಸಿಲ್ಲ. ಇವರಿಗೆ ರೈತರ ಹಿತಕ್ಕಿಂತ ಗುತ್ತಿಗೆದಾರನ ಹಿತವೇ ಮುಖ್ಯವಾಗಿದೆ.- ಕೆ.ವಿವೇಕಾನಂದ, ವಿಧಾನ ಪರಿಷತ್ ಸದಸ್ಯರು