ಸೆ.13ರಂದು ಮಂಡ್ಯ ವಿಶ್ವವಿದ್ಯಾಲಯದ ಮೊದಲನೇ ಮತ್ತು ಎರಡನೇ ಘಟಿಕೋತ್ಸವ -ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ

| Published : Sep 13 2024, 01:50 AM IST / Updated: Sep 13 2024, 10:11 AM IST

ಸೆ.13ರಂದು ಮಂಡ್ಯ ವಿಶ್ವವಿದ್ಯಾಲಯದ ಮೊದಲನೇ ಮತ್ತು ಎರಡನೇ ಘಟಿಕೋತ್ಸವ -ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ವಿಶ್ವವಿದ್ಯಾಲಯದ ಮೊದಲನೇ ಮತ್ತು ಎರಡನೇ ಘಟಿಕೋತ್ಸವ ಸೆ.13 ರಂದು ಬೆಳಗ್ಗೆ 11.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ಪುಟ್ಟರಾಜು ಹೇಳಿದರು.

 ಮಂಡ್ಯ :  ಮಂಡ್ಯ ವಿಶ್ವವಿದ್ಯಾಲಯದ ಮೊದಲನೇ ಮತ್ತು ಎರಡನೇ ಘಟಿಕೋತ್ಸವ ಸೆ.13 ರಂದು ಬೆಳಗ್ಗೆ 11.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ಪುಟ್ಟರಾಜು ಹೇಳಿದರು.

ವಿಶ್ವ ವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತಿಯಲ್ಲಿ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಘಟಿಕೋತ್ಸವದಲ್ಲಿ ಸಮಾಜದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದ್ದು, ಮೊದಲನೇ ಘಟಿಕೋತ್ಸವದ ಗೌರವ ಡಾಕ್ಟರೇಟ್‌ನ್ನು ಶ್ರೀಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಎರಡನೇ ಘಟಿಕೋತ್ಸವದ ಗೌರವ ಡಾಕ್ಟರೇಟ್‌ನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ಮದ್ದೂರು ತಾಲೂಕು ಕೊಪ್ಪ ಗ್ರಾಮದ ಪದ್ಮಶ್ರೀ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಅವರಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದಿಂದ 2155  ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಸ್ನಾತಕ ವಿಭಾಗದಲ್ಲಿ 734 ಮಹಿಳಾ, 732 ಪುರುಷರು ಸೇರಿ 1456  ಹಾಗೂ ಸ್ನಾತಕೋತ್ತರ ವಿಭಾಗದಿಂದ 438 ಮಹಿಳಾ, 251 ಪುರುಷರು ಸೇರಿ 689ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಪಡೆದುಕೊಳ್ಳುವರು ಎಂದರು.

ಪ್ರಥಮ ರ್‍ಯಾಂಕ್-46, ದ್ವಿತೀಯ-36, ತೃತೀಯ -16 ಸೇರಿ 96 ವಿದ್ಯಾರ್ಥಿಗಳು ರ್‍ಯಾಂಕ್ ಪಡೆದುಕೊಂಡಿದ್ದಾರೆ. ಸ್ನಾತಕ ವಿಭಾಗದಲ್ಲಿ 42 ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ೪೮ ಸೇರಿ ೯೦ ವಿದ್ಯಾರ್ಥಿಗಳಿಗೆ ದತ್ತಿ ನಗದು ಬಹುಮಾನ ನೀಡಲಾಗುವುದು ಎಂದರು.

ಮಂಡ್ಯ ವಿಶ್ವವಿದ್ಯಾಲಯದಲ್ಲಿ ಈಗಷ್ಟೇ ಸಿಂಡಿಕೇಟ್ ರಚನೆಯಾಗಿದೆ. ಇನ್ನೂ ಕಾಯಂ ಉಪನ್ಯಾಸಕರನ್ನು ನೀಡಲಾಗಿಲ್ಲ. ಅಗತ್ಯವಿರುವಷ್ಟು ಅತಿಥಿ ಉಪನ್ಯಾಸಕರನ್ನು ಸರ್ಕಾರವೇ ನೇಮಕ ಮಾಡುತ್ತಿದೆ. ಇನ್ನೊಂದು ತಿಂಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಪೂರ್ಣಗೊಳ್ಳಲಿರುವುದಾಗಿ ತಿಳಿಸಿದರು.

ವಿಶ್ವ ವಿದ್ಯಾಲಯಕ್ಕೆ ಅಗತ್ಯವಿರುವ ಕಾಯಂ ಉಪನ್ಯಾಸಕರು, ಸೌಲಭ್ಯಗಳು ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತಂತೆ ನಿರಂತರವಾಗಿ ಸರ್ಕಾರದ ಗಮನಸೆಳೆಯುತ್ತಿದ್ದೇವೆ. ಸರ್ಕಾರ ಹಂತ ಹಂತವಾಗಿ ಸವಲತ್ತುಗಳು, ಸೌಲಭ್ಯಗಳನ್ನು ಒದಗಿಸುತ್ತಿದೆ. ಇನ್ನೂ ಮಂಡ್ಯ ವಿಶ್ವವಿದ್ಯಾಲಯ ಪರಿಪೂರ್ಣ ವಿಶ್ವವಿದ್ಯಾಲಯವಾಗಿ ಹೊರಹೊಮ್ಮದಿರುವುದರಿಂದ ಮೈಸೂರು ವಿಶ್ವವಿದ್ಯಾಲಯವನ್ನು ಅನುಸರಿಸಲಾಗುತ್ತಿದೆ ಎಂದು ನುಡಿದರು.

ಮಂಡ್ಯ ವಿಶ್ವವಿದ್ಯಾಲಯದಿಂದ ಅಂಕಪಟ್ಟಿಯಲ್ಲಿ ದೋಷಗಳು ಕಂಡುಬಂದಿಲ್ಲ. ಅಂತಹ ದೋಷಗಳೇನಾದರೂ ಇದ್ದರೆ ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದರಲ್ಲದೇ, ಮೌಲ್ಯಮಾಪನದಲ್ಲಿ ವ್ಯತ್ಯಾಸಗಳಾಗಿದ್ದರೂ ಇತ್ಯರ್ಥಪಡಿಸಿಕೊಡುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಕುಲಸಚಿವ ಮೌಲ್ಯಮಾಪನ ಪ್ರಭಾರ ಪ್ರೊ.ಕೆ.ಯೋಗಾನರಸಿಂಹಚಾರಿ, ಪ್ರಭಾರ ಕುಲಸಚಿವ ಡಾ.ಎಸ್.ಎಲ್.ಸುರೇಶ್, ಬಸವರಾಜ ಯತ್ನಳ್ಳಿ, ಪ್ರಾಂಶುಪಾಲೆ ಸ್ವರ್ಣ ಇದ್ದರು.