ಮಂಗಳಾದೇವಿ ದೇವಸ್ಥಾನ ನವರಾತ್ರಿಗೆ ಮುಸ್ಲಿಮರ ವ್ಯಾಪಾರ ಇಲ್ಲ

| Published : Oct 13 2023, 12:16 AM IST

ಮಂಗಳಾದೇವಿ ದೇವಸ್ಥಾನ ನವರಾತ್ರಿಗೆ ಮುಸ್ಲಿಮರ ವ್ಯಾಪಾರ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಅನ್ಯಮತೀಯರು ಯಾರೂ ಟೆಂಡರ್‌ ಹಾಕಿಲ್ಲ ಎಂದು ದೇವಳದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ ಇತಿಹಾಸ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನದಲ್ಲಿ ಈ ಬಾರಿಯ ನವರಾತ್ರಿ ಉತ್ಸವಕ್ಕೆ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರ ಅವಕಾಶ ಸಿಕ್ಕಿಲ್ಲ. ಆದರೆ ನಮ್ಮನ್ನು ಉದ್ದೇಶಪೂರ್ವಕ ವ್ಯಾಪಾರದಿಂದ ಹೊರಗಿಡಲಾಗಿದೆ ಎಂದು ಆರೋಪಿಸಿ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ದ.ಕ. ಮತ್ತು ಉಡುಪಿ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ಗುರುವಾರ ಜಿಲ್ಲಾಧಿಕಾರಿಗೆ ದೂರು ನೀಡಿದೆ. ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಅನ್ಯಮತೀಯರು ಯಾರೂ ಟೆಂಡರ್‌ ಹಾಕಿಲ್ಲ ಎಂದು ದೇವಳದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಅ.15ರಿಂದ 24ರ ವರೆಗೆ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದೆ. ಇದು ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಾದ್ದರಿಂದ ರಥಬೀದಿ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ ಉತ್ಸವದಲ್ಲಿ ವ್ಯಾಪಾರಕ್ಕೆ ಅಂಗಡಿಗೆ ಟೆಂಡರ್ ಆಹ್ವಾನಿಸಿ ಏಲಂ ನಡೆಸಲಾಗಿದೆ. ನಿಯಮಾನುಸಾರವೇ ದೇವಸ್ಥಾನದಿಂದ ಏಲಂ ಕರೆದಿದ್ದು, 92 ಅಂಗಡಿಗಳನ್ನು ಏಲಂನಲ್ಲಿ ನೀಡಲಾಗಿದೆ. ಮುಸ್ಲಿಮರಿಗೆ ನಿರ್ಬಂಧ ಆರೋಪ: ಏಲಂ ವೇಳೆ ಮುಸ್ಲಿಮರಿಗೆ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ದ.ಕ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ವ್ಯಾಪಾರದ ವಿಷಯದಲ್ಲಿ ಕೋಮು ವಿಷಬೀಜ ಬಿತ್ತಿದ್ದರು. ಆದರೆ ಈಗ ಕಾಂಗ್ರೆಸ್ ಅವಧಿಯಲ್ಲೂ ಅದೇ ಮುಂದುವರೆದಿದೆ. ಅಧಿಕಾರಿಗಳು, ಪೊಲೀಸರು ಇದನ್ನ ಕಟ್ಟುನಿಟ್ಟಾಗಿ ನೋಡಬೇಕು. ವ್ಯಾಪಾರಕ್ಕೆ ಮುಸಲ್ಮಾನರು ಬರಬಾರದು ಎಂದು ಹೇಳಲು ಇವರು ಯಾರು? ನಾವು ದೇವಸ್ಥಾನದ ಒಳಗಡೆ ಕೇಳುತ್ತಿಲ್ಲ, ಎದುರಿನ ಸಾರ್ವಜನಿಕ ಜಾಗ ಕೇಳುತ್ತಿದ್ದೇವೆ. ಮಂಗಳೂರು ಪಾಲಿಕೆ ಮತ್ತು ಜಿಲ್ಲಾಡಳಿತ ಅದಕ್ಕೆ ಜವಾಬ್ದಾರಿ ಎಂದಿದ್ದಾರೆ. ಮಂಗಳಾದೇವಿ ಜಾತ್ರೆಗೆ ಎಲ್ಲ ಧರ್ಮದವರೂ ಆಗಮಿಸುತ್ತಾರೆ. ಇಲ್ಲಿ‌ ಮುಸಲ್ಮಾನರು ಬರಬಾರದು ಎಂದು ತಾಕೀತು ಮಾಡಿದ್ದಾರೆ. ಕೆಲವೊಂದು ಶಕ್ತಿಗಳು ಬರಲು ಬಿಡುತ್ತಿಲ್ಲ ಎಂದು ಆಡಳಿತ ಮಂಡಳಿ ಹೇಳುತ್ತಿದೆ. ಇದಕ್ಕೆ ಪಾಲಿಕೆ ಕಮಿಷನರ್ ಜವಾಬ್ದಾರಿ, ನಾವು ಇಲ್ಲಿ ಭಿಕ್ಷೆ ಬೇಡುತ್ತಿಲ್ಲ. ದೇವಸ್ಥಾನದವರು ಹೊರಗಿನವರಿಗೆ ಹರಾಜು ಪ್ರಕ್ರಿಯೆ ಕೊಟ್ಟಿದ್ದಾರೆ. ಪಾಲಿಕೆ ಜಾಗವನ್ನು ದೇವಸ್ಥಾನದವರು ಯಾರಿಗೊ ಹರಾಜು ಹಾಕುವುದು ಯಾಕೆ? ಇವರು ಹಿಂದೂ ವ್ಯಾಪಾರಸ್ಥರಿಗೆ ಉಚಿತವಾಗಿ ಕೊಡುತ್ತಾರಾ? ಸನಾತನ ಸಂಸ್ಥೆಯವರು ಬಂದು ಆಡಳಿತಕ್ಕೆ ತಾಕೀತು ಮಾಡಿದ್ದಾರಂತೆ, ನಾವು ಜಾತ್ರಾ ವ್ಯಾಪಾರಸ್ಥರ ಸಮಿತಿ ಇದನ್ನು ಇಷ್ಟಕ್ಕೆ ಬಿಡುವುದಿಲ್ಲ, ನಾವು ಮಂಗಳಾದೇವಿ ಜಾತ್ರೆಯಲ್ಲಿ ಎಲ್ಲರಿಗೂ ಅವಕಾಶ ಕೊಡಬೇಕು ಎಂದು ಆಗ್ರಹಿಸುತ್ತೇವೆ. ವ್ಯಾಪಾರಕ್ಕೆ ಅವಕಾಶ ನೀಡದಿದ್ದರೆ ಅಲ್ಲಿ ಖಂಡಿತಾ ತಕರಾರು ಮಾಡುತ್ತೇವೆ. ಏನಾದರೂ ತೊಂದರೆಯಾದರೆ ಅದಕ್ಕೆ ಮಂಗಳೂರು ಪಾಲಿಕೆ‌ ಮತ್ತು ಜಿಲ್ಲಾಡಳಿತ ಜವಾಬ್ದಾರಿ ಎಂದರು. ಮುಸ್ಲಿಂ ವ್ಯಾಪಾರ ನಿರ್ಬಂಧಿಸಿಲ್ಲ: ವ್ಯಾಪಾರಸ್ಥರ ಈ ಆರೋಪವನ್ನು ಮಂಗಳಾದೇವಿ ದೇವಸ್ಥಾನದ ಆಡಳಿತ ಮಂಡಳಿ ನಿರಾಕರಿಸಿದೆ. ದೇವಸ್ಥಾನದ ಆಡಳಿತ ಮಂಡಳಿ ಅನ್ಯಧರ್ಮೀಯರ ವ್ಯಾಪಾರ ನಿರ್ಬಂಧ ಮಾಡಿಲ್ಲ. ಕಾನೂನಿನ ಪ್ರಕಾರ ಯಾವುದೇ ನಿಬಂಧನೆಗಳಿಲ್ಲದೇ ಟೆಂಡರ್ ಕರೆಯಲಾಗಿತ್ತು. ಹರಾಜು ಕರೆದ ಬಗ್ಗೆ ಪತ್ರಿಕಾ ಪ್ರಕಟಣೆ ಕೂಡ ನೀಡಲಾಗಿತ್ತು. ಅದರಂತೆ ದೇವಸ್ಥಾನದ ಅಂಗಳದಲ್ಲಿ ಹರಾಜು ಪ್ರಕ್ರಿಯೆ ನಡೆದಿದೆ. 94 ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ನೂರಾರು‌ ಜನರು ಭಾಗವಹಿಸಿದ್ದರು. ಆದರೆ ಯಾವುದೇ ಅನ್ಯ ಧರ್ಮದವರು ಹರಾಜಿನಲ್ಲಿ ಭಾಗವಹಿಸಲಿಲ್ಲ. ನಾವು ಯಾರಿಗೂ ಭಾಗವಹಿಸಬೇಡಿ ಎಂಬ ನಿರ್ಬಂಧ ಹಾಕಿರಲಿಲ್ಲ. ಜಿಲ್ಲಾಧಿಕಾರಿಗಳ ಸೂಚನೆ ಮತ್ತು ಮಾರ್ಗಸೂಚಿ ಅನ್ವಯ ಹಂಚಿಕೆ ಆಗಿದೆ. ಆದರೆ ಪ್ರಕ್ರಿಯೆ ಮುಗಿದ ನಂತರ ವ್ಯಾಪಾರಸ್ಥರು ಬಂದು ಕೇಳಿದ್ದಾರೆ. ಆದರೆ ನಮ್ಮ ಹರಾಜು ಪ್ರಕ್ರಿಯೆ ಮುಗಿದು ಅಂಗಡಿಗಳ ಹಂಚಿಕೆ ಆಗಿದೆ. ಎಲ್ಲ ಸ್ಟಾಲ್‌ಗಳು ಹರಾಜಾದ ಕಾರಣ ಮತ್ತೆ ಹರಾಜು ಮಾಡಲು ಆಗುವುದಿಲ್ಲ. ನಮಗೆ ಯಾವುದೇ ಸಂಘಟನೆಗಳು ಮುಸ್ಲಿಮರಿಗೆ ಕೊಡಬೇಡಿ ಎಂದು ಮನವಿ ಮಾಡಿಲ್ಲ. ಆದರೆ ಸಮನ್ವಯ ಸಮಿತಿ ಹೆಸರಲ್ಲಿ ಅನ್ಯ ಧರ್ಮೀಯರಿಗೂ ಕೊಡಬೇಕು ಎಂದು ಮನವಿ ಕೊಟ್ಟಿದ್ದಾರೆ. ಇದು ರಥಬೀದಿಯಾದ ಕಾರಣ ದೇವಸ್ಥಾನದ ವತಿಯಿಂದಲೇ ಜಿಲ್ಲಾಧಿಕಾರಿಗಳ ಸೂಚನೆಯಂತೆ ಹರಾಜು ನಡೆಯುತ್ತದೆ ಎಂದು ಸ್ಪಷ್ಟಪಡಿಸಿದೆ. ಮೇಯರ್‌ ಸ್ಪಷ್ಟನೆ: ಮಂಗಳಾದೇವಿ ಕಾರಣಕ್ಕೆ ಮಂಗಳೂರಿಗೆ‌ ಹೆಸರು ಬಂದಿದೆ. ಸಾವಿರಾರು ವರ್ಷಗಳಿಂದ ಅಲ್ಲಿ ನವರಾತ್ರಿ ಉತ್ಸವ ಆಗುತ್ತಾ ಇದೆ. ಪಾಲಿಕೆ ರಚನೆಯಾಗಿರುವುದು ಸ್ವಾತಂತ್ರ್ಯ ಸಿಕ್ಕಿದ ನಂತರ, ಅದಕ್ಕೂ ಮೊದಲೇ ದೇವಸ್ಥಾನ ಇದೆ. ಅದರ ಎದುರಿನ ರಸ್ತೆ ದೇವಸ್ಥಾನ ಮೂಲಕವೇ ಹರಾಜು ನಡೆಯುತ್ತಿದೆ. ಈಗ ಮಂಗಳಾದೇವಿ ದೇವಸ್ಥಾನದ ಮುಜುರಾಯಿಗೆ ಸೇರಿದೆ. ಹಾಗಾಗಿ ಅದು ಕೂಡ ಸರ್ಕಾರದ ವ್ಯಾಪ್ತಿಗೆ ಬ‌ರುತ್ತದೆ. ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಅಂಗಡಿಗೆ ಅವರೇ ಹರಾಜು ಮಾಡುತ್ತಾರೆ. ಮಹಾನಗರ ಪಾಲಿಕೆ ಅಲ್ಲಿ ಶುಚಿತ್ವದ ಕೆಲಸ ಮಾಡುತ್ತದೆ. ಹಿಂದಿನ ಮೇಯರ್‌ಗಳ ಅವಧಿಯಂತೆ ಈಗಲೂ ನಡೆಯುತ್ತಿದೆ. ಹಾಗಾಗಿ ನಾವು ಯಾವುದೇ ಬದಲಾವಣೆ ಮಾಡಿಲ್ಲ ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿದ್ದಾರೆ.