ಇಂದು ಮಂಗಳೂರು- ಗೋವಾ ‘ವಂದೇ ಭಾರತ್‌’ ಪ್ರಾಯೋಗಿಕ ಸಂಚಾರ

| Published : Dec 26 2023, 01:30 AM IST

ಸಾರಾಂಶ

ಮಂಗಳೂರಿಗೆ ಬಹು ನಿರೀಕ್ಷಿತ ವಂದೇ ಭಾರತ್‌ ರೈಲು ಆಗಮಿಸಿದ್ದು, ಮಂಗಳೂರು-ಗೋವಾ ನಡುವೆ ಸಂಚರಿಸಲಿದೆ. ಇದರ ಪ್ರಾಯೋಗಿಕ ಸಂಚಾರ ಮಂಗಳವಾರದಿಂದ ಆರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಹುನಿರೀಕ್ಷಿತ ಮಂಗಳೂರು- ಗೋವಾ ಸೇರಿದಂತೆ ದೇಶದ 6 ಕಡೆಗಳಲ್ಲಿ ಆರಂಭವಾಗುವ ವಂದೇ ಭಾರತ್‌ ರೈಲಿಗೆ ಡಿ.30ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಚಾಲನೆ ನೀಡುವ ನಿರೀಕ್ಷೆಯಿದ್ದು, ಈ ರೈಲಿನ ಪ್ರಾಯೋಗಿಕ ಸಂಚಾರ ಡಿ.26ರಂದು ಬೆಳಗ್ಗೆ 8.30ಕ್ಕೆ ಮಂಗಳೂರಿನಿಂದ ಆರಂಭವಾಗಲಿದೆ.

ಪ್ರಾಯೋಗಿಕ ಸಂಚಾರ ಹಿನ್ನೆಲೆಯಲ್ಲಿ ವಂದೇ ಭಾರತ್‌ ರೈಲು ಸೋಮವಾರವೇ ಮಂಗಳೂರು ಸೆಂಟ್ರಲ್‌ಗೆ ಬಂದು ತಲುಪಿದೆ. ಸೋಮವಾರ ಸಕಲ ಸಿದ್ಧತೆಯೊಂದಿಗೆ ಪ್ರಾಯೋಗಿಕ ಸಂಚಾರ ನಡೆಸಲಿದೆ.

ಮಂಗಳೂರು-ಗೋವಾ, ಮಂಗಳೂರು- ತಿರುವನಂತಪುರಂ ಹಾಗೂ ಮಂಗಳೂರು- ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಸೆ.22ರಂದು ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಈ ಪೈಕಿ ಪ್ರಥಮ ಹಂತದಲ್ಲಿ ಮಂಗಳೂರು-ಗೋವಾ ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿದೆ.

ಮಂಗಳೂರು- ಗೋವಾ ನಡುವಿನ ವಂದೇ ಭಾರತ್‌ ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಪ್ರಕಾರ ಮಂಗಳವಾರ ಹೊರತುಪಡಿಸಿ ವಾರದ 6 ದಿನವೂ ಸಂಚಾರ ನಡೆಸಲಿದೆ. ಕೇವಲ 4.35 ಗಂಟೆಯಲ್ಲಿ 315 ಕಿ.ಮೀ. ದೂರವನ್ನು ಗಂಟೆಗೆ 68.7 ಕಿ.ಮೀ. ವೇಗದಲ್ಲಿ ಕ್ರಮಿಸಲಿದೆ. ಉಡುಪಿ ಮತ್ತು ಕಾರವಾರಗಳಲ್ಲಿ ಮಾತ್ರ ನಿಲುಗಡೆ ಕಲ್ಪಿಸಲಾಗಿದೆ. ಈ ರೈಲಿನ ನಿರ್ವಹಣೆ ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ನಡೆಯಲಿದೆ.

ಹೊಸ ಫ್ಲ್ಯಾಟ್‌ ಫಾರಂ ಲೋಕಾರ್ಪಣೆ: ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಂದರ್ಭದಲ್ಲಿ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಿರ್ಮಾಣವಾದ 4 ಮತ್ತು 5ನೇ ಪ್ಲಾಟ್‌ಫಾರಂ ಕೂಡ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.