ಮಂಗಳೂರು ಲೇಡಿಗೋಷನ್‌ ಬಸ್‌ಸ್ಟಾಪ್‌ ರದ್ದು

| Published : Sep 03 2024, 01:40 AM IST

ಸಾರಾಂಶ

ನಗರದ ಸ್ಟೇಟ್‌ಬ್ಯಾಂಕ್‌ ಸಿಟಿ ಹಾಗೂ ಗ್ರಾಮಾಂತರ ಮತ್ತು ಎಕ್ಸ್‌ಪ್ರೆಸ್‌ ಬಸ್‌ ನಿಲ್ದಾಣದಿಂದ ಹೊರ ಹೋಗುವ ಎಲ್ಲ ಬಸ್‌ಗಳಿಗೆ ಇನ್ನು ಮುಂದೆ ಲೇಡಿಗೋಷನ್‌ ಮುಂಭಾಗ ನಿಲುಗಡೆ ಇಲ್ಲ. ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಬಂದೇ ಬಸ್‌ ಹತ್ತಬೇಕಾಗಿದೆ. ಈ ಸಂಚಾರ ಮಾರ್ಪಾಟನ್ನು ಸೋಮವಾರದಿಂದಲೇ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಸ್ಟೇಟ್‌ಬ್ಯಾಂಕ್‌ ಸಿಟಿ ಹಾಗೂ ಗ್ರಾಮಾಂತರ ಮತ್ತು ಎಕ್ಸ್‌ಪ್ರೆಸ್‌ ಬಸ್‌ ನಿಲ್ದಾಣದಿಂದ ಹೊರ ಹೋಗುವ ಎಲ್ಲ ಬಸ್‌ಗಳಿಗೆ ಇನ್ನು ಮುಂದೆ ಲೇಡಿಗೋಷನ್‌ ಮುಂಭಾಗ ನಿಲುಗಡೆ ಇಲ್ಲ. ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಬಂದೇ ಬಸ್‌ ಹತ್ತಬೇಕಾಗಿದೆ. ಈ ಸಂಚಾರ ಮಾರ್ಪಾಟನ್ನು ಸೋಮವಾರದಿಂದಲೇ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

ಬಸ್‌ ನಿಲ್ದಾಣದಿಂದ 50 ಮೀಟರ್‌ ವರೆಗೆ ಯಾವುದೇ ಬಸ್‌ಗಳ ನಿಲುಗಡೆಗೆ ಅವಕಾಶ ನೀಡಬಾರದು. ಇದರಿಂದ ಸಂಚಾರ ದಟ್ಟಣೆ ತಲೆದೋರುತ್ತದೆ ಎಂಬ ಮಂಗಳೂರು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಸಲಹೆ ಮೇರೆಗೆ ಸಂಚಾರಿ ಪೊಲೀಸರು ಈ ತೀರ್ಮಾನ ಕೈಗೊಂಡಿದ್ದಾರೆ.

ಬಸ್ಟೇಂಡ್‌ನಿಂದಲೇ ಬಸ್‌ ಹತ್ತಬೇಕು:

ಇಲ್ಲಿವರೆಗೆ ಸಿಟಿ ಹಾಗೂ ಸರ್ವಿಸ್‌ ಬಸ್‌ಗಳು ಬಸ್ಟೇಂಡ್‌ನಿಂದ ಹೊರಟು ಲೇಡಿಗೋಷನ್‌ ಆಸ್ಪತ್ರೆ ಎದುರು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದವು. ಇನ್ನು ಪ್ರಯಾಣಿಕರು ಬಸ್‌ ಹತ್ತಲು ನೇರವಾಗಿ ಬಸ್ಟೇಂಡ್‌ಗೇ ತೆರಳಬೇಕಾಗಿದೆ. ಬಸ್ಟೇಂಡ್‌ ಹಾಗೂ ಲೇಡಿಗೋಷನ್‌ ಮಧ್ಯೆ ಓಡಾಟಕ್ಕೆ ಡಿವೈಡರ್‌ ನಡುವೆ ಎರಡು ಕಡೆಗಳಲ್ಲಿ ಸ್ವಲ್ಪ ಅಂತರ ಬಿಡಲಾಗಿದೆ. ಇದೇ ದಾರಿಯಲ್ಲೇ ಪಾದಚಾರಿಯಾಗಿ ಓಡಾಟ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಬಸ್ಟೇಂಡ್‌ನಿಂದ ಹೊರಡುವ ಸಿಟಿ ಹಾಗೂ ಸರ್ವಿಸ್‌, ಎಕ್ಸ್‌ಪ್ರೆಸ್‌ ಬಸ್‌ಗಗಳಿಗೆ ಮೊದಲ ಸ್ಟಾಪ್‌ನ್ನು ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜು ಮುಂಭಾಗ ನೀಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರಾವ್ ಅಂಡ್‌ ರಾವ್‌ ವೃತ್ತದಿಂದ ಹಂಪನಕಟ್ಟೆ ಕಡೆಗೆ ಹೋಗುವ ವಾಹನಗಳು ಲೇಡಿಗೋಷನ್‌ ನಿಲ್ದಾಣದ ಮೂಲಕವೇ ನೇರವಾಗಿ ಸಂಚರಿಸಲಿವೆ.

.................

ಲೇಡಿಗೋಷನ್‌ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ ಹತ್ತುವುದನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ಸ್ಟೇಟ್‌ಬ್ಯಾಂಕ್‌ ಬಸ್ಟೇಂಡ್‌ನಲ್ಲೇ ನಗರ ಹಾಗೂ ಗ್ರಾಮಾಂತರ ಸಾರಿಗೆ, ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಹತ್ತಬೇಕು. ಸ್ಟೇಟ್‌ಬ್ಯಾಂಕ್‌ನಿಂದ ಬಸ್‌ ಹೊರಟರೆ, ಹಂಪನಕಟ್ಟೆ ವಿವಿ ಕಾಲೇಜು ಬಳಿ ಮಾತ್ರ ಮತ್ತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ.-ದಿನೇಶ್‌ ಕುಮಾರ್‌, ಡಿಸಿಪಿ ಸಂಚಾರ ವಿಭಾಗ, ಮಂಗಳೂರು