ಜ. 11,12ರಂದು ‘ಮಂಗಳೂರು ಲಿಟ್‌ ಫೆಸ್ಟ್‌-2025’

| Published : Jan 09 2025, 12:45 AM IST

ಸಾರಾಂಶ

ಜ.11ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ನೆರವೇರಲಿದೆ. ಮರುದಿನ ಬೆಳಗ್ಗೆ 10 ಗಂಟೆಗೆ ಕೇಂದ್ರ ಸಾಮರ್ಥ್ಯ ಆಯೋಗ ಸದಸ್ಯ ಡಾ.ಬಾಲಸುಬ್ರಹ್ಮಣ್ಯಂ ಅವರಿಗೆ ಈ ಬಾರಿಯ ಲಿಟ್‌ ಫೆಸ್ಟ್‌ ಗೌರವ ಪ್ರದಾನ ಮಾಡಲಾಗುವುದು. ಎರಡು ದಿನಗಳ ಲಿಟ್‌ ಫೆಸ್ಟ್‌ನಲ್ಲಿ 34 ಅವಧಿಗಳಿದ್ದು, 72 ಮಂದಿ ಆಹ್ವಾನಿತ ಪ್ರತಿನಿಧಿಗಳು ವಿಚಾರ ಮಂಡಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತ್‌ ಫೌಂಡೇಷನ್‌ ಆಯೋಜನೆಯ ಮಂಗಳೂರು ಸಾಹಿತ್ಯೋತ್ಸವದ 7ನೇ ಆವೃತ್ತಿಯು ನಗರದ ಟಿಎಂಎ ಪೈ ಸಭಾಂಗಣದಲ್ಲಿ ಜ.11 ಮತ್ತು 12 ರಂದು ನಡೆಯಲಿದೆ. ಇದನ್ನು ಶತಾವಧಾನಿ ಆರ್‌.ಗಣೇಶ್‌ ಮತ್ತು ಖ್ಯಾತ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಉದ್ಘಾಟಿಸಲಿದ್ದಾರೆ ಎಂದು ಭಾರತ್‌ ಫೌಂಡೇಷನ್‌ ಟ್ರಸ್ಟಿ ಸುನಿಲ್‌ ಕುಲಕರ್ಣಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.11ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ನೆರವೇರಲಿದೆ. ಮರುದಿನ ಬೆಳಗ್ಗೆ 10 ಗಂಟೆಗೆ ಕೇಂದ್ರ ಸಾಮರ್ಥ್ಯ ಆಯೋಗ ಸದಸ್ಯ ಡಾ.ಬಾಲಸುಬ್ರಹ್ಮಣ್ಯಂ ಅವರಿಗೆ ಈ ಬಾರಿಯ ಲಿಟ್‌ ಫೆಸ್ಟ್‌ ಗೌರವ ಪ್ರದಾನ ಮಾಡಲಾಗುವುದು ಎಂದರು.

ಎರಡು ದಿನಗಳ ಲಿಟ್‌ ಫೆಸ್ಟ್‌ನಲ್ಲಿ 34 ಅವಧಿಗಳಿದ್ದು, 72 ಮಂದಿ ಆಹ್ವಾನಿತ ಪ್ರತಿನಿಧಿಗಳು ವಿಚಾರ ಮಂಡಿಸಲಿದ್ದಾರೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ, ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ವಿಕ್ರಮ್‌ ಸೂದ್‌, ಭಾರತದ ಮಾಜಿ ರಾಜತಾಂತ್ರಿಕ ಮತ್ತು ಲೇಖಕ ದಿಲೀಪ್‌ ಸಿನ್ಹಾ, ಮಾಜಿ ಪೊಲೀಸ್‌ ಅಧಿಕಾರಿ, ತಮಿಳ್ನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ, ಇತಿಹಾಸಕಾರ ಮತ್ತು ಲೇಖಕ ಡಾ.ವಿಕ್ರಮ್‌ ಸಂಪತ್‌, ಜೆಎನ್‌ಯು ಉಪ ಕುಲಪತಿ ಡಾ.ಶಾಂತಿಶ್ರೀ ದುಲಿಪುಡಿ ಪಂಡಿತ್‌, ಸ್ವಾಮಿ ಮಹಾಮೇಧಾನಂದ, ಮಿಥಿಕ್‌ ಸೊಸೈಟಿ ಅಧ್ಯಕ್ಷ ವಿ.ನಾಗರಾಜ್‌, ಹಿಮಾಲಯ ಭೌಗೋಳಿಕ ರಾಜಕೀಯ ತಜ್ಞ ಡಾ.ಕ್ಲಾಡ್‌ ಅರ್ಪಿ, ರಾಜಕೀಯ ತಜ್ಞ, ಮಾಜಿ ಸಂಸದ ಡಾ.ವಿನಯ್‌ ಸಹಸ್ರಬುದ್ಧೆ, ಸಂಸ್ಕೃತ ಕಂಟೆಂಟ್‌ ಕ್ರಿಯೇಟರ್‌ ಸಮಷ್ಠಿ ಗುಬ್ಬಿ, ಸಂಸ್ಕೃತ ವಿದ್ವಾಂಸ ಮತ್ತು ಲೇಖಕ ಡಾ.ಎಚ್‌.ಆರ್‌.ವಿಶ್ವಾಸ್‌, ಕನ್ನಡಪ್ರಭ-ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಮತ್ತು ಕನ್ನಡಪ್ರಭ ಮ್ಯಾಗಜಿನ್‌ ಸಂಪಾದಕ ಜೋಗಿ, ಸೃಜನಶೀಲ ಶಿಕ್ಷಕಿ ವಂದನಾ ರೈ ಸೇರಿದಂತೆ ಭಾಷಾ ತಜ್ಞರು, ಹಿರಿಯ ಸಾಹಿತಿಗಳು, ಉದಯೋನ್ಮುಖ ಬರಹಗಾರರು, ಲೇಖಕರು, ಯುವ ಕವಿಗಳು, ವಾಗ್ಮಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಟ್ರಸ್ಟಿಗಳಾದ ಶ್ರೀರಾಜ್‌ ಗುಡಿ, ಸುಜಿತ್ ಪ್ರತಾಪ್‌, ದುರ್ಗಾ ಪ್ರಸಾದ್‌, ಈಶ್ವರ ಪ್ರಸಾದ್‌ ಶೆಟ್ಟಿ ಇದ್ದರು.

ಈ ಬಾರಿ ಏನೇನು ವಿಶೇಷತೆ?

ಈ ಚಿಂತನ ಮಂಥನದಲ್ಲಿ ಎರಡು ವೇದಿಕೆಗಳು ಮತ್ತು ಹರಟೆ ಕಟ್ಟೆಯಲ್ಲಿ ಒಟ್ಟು 29 ಅವಧಿಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಆ ಬಾರಿಯೂ ತುಳು ಲಿಪಿಯ ಪರಿಚಯ ಮಾಡಿಕೊಡಲಿದ್ದು, ಕನಿಷ್ಠ ತುಳು ಲಿಪಿಯಲ್ಲಿ ತಮ್ಮ ತಮ್ಮ ಹೆಸರು ಬರೆಯುವಂತೆ ಅಭ್ಯಾಸ ಆಗಬೇಕು ಎಂಬುದು ಇಲ್ಲಿನ ಕಲ್ಪನೆ. ಇದಲ್ಲದೆ ಕಲೆ ಸಂಸ್ಕೃತಿಯ ಪರಿಚಯಕ್ಕಾಗಿ ಮಡಕೆ ಮಾಡುವ ಪ್ರಾತ್ಯಕ್ಷಿಕೆ ಕೂಡ ಇರಲಿದೆ. ಈಗಾಗಲೇ ಸಾಹಿತ್ಯ ರಸಪ್ರಶ್ನೆ ಏರ್ಪಡಿಸಿದ್ದು, ಅದರ ಅಂತಿಮ ಸುತ್ತು ಈ ಲಿಟ್‌ಫೆಸ್ಟ್‌ನಲ್ಲಿ ನಡೆಯಲಿದೆ.

ಎರಡು ದಿನಗಳ ಅವಧಿಯಲ್ಲಿ 14 ಕೃತಿಗಳು ಲೋಕಾರ್ಪಣೆಗೊಳ್ಳಲಿದ್ದು, ಇದರಲ್ಲಿ ಆರು ಇಂಗ್ಲಿಷ್‌ ಮತ್ತು ಎಂಟು ಕನ್ನಡ ಕೃತಿಗಳು ಸೇರಿವೆ.

ಅಂಧರಿಗಾಗಿಯೇ ಪ್ರತ್ಯೇಕ ಗೋಷ್ಠಿ ಇರಲಿದೆ. ಇದರಲ್ಲಿ ಡಾ.ಮಲ್ಲಪ್ಪ ಬಂಡಿ ಮತ್ತು ಒ.ಐಶ್ವರ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ. ಹಿಂದುಳಿದವರಿಗೂ ವೇದಿಕೆ ಕಲ್ಪಿಸಲಾಗಿದ್ದು, ದೊಂಗಲಿಗ ಸಮುದಾಯದವರು ವಿಚಾರ ಮಂಡಿಸಲಿದ್ದಾರೆ. ಸಂಸ್ಕೃತಕ್ಕೆ ಒತ್ತು ನೀಡುವ ದಿಶೆಯಲ್ಲಿ ವಿಚಾರಗೋಷ್ಠಿ ಇರಲಿದ್ದು, ಸಂಸ್ಕೃತದಲ್ಲೇ ಅವಧಿ ಇರುವಂತೆ ಪ್ರಯತ್ನಿಸಲಾಗುತ್ತಿದೆ ಎಂದು ಸುನಿಲ್‌ ಕುಲಕರ್ಣಿ ಹೇಳಿದರು.

----------------

----------------