ಸಮಾಜಮುಖಿ ಚಟುವಟಿಕೆಗಳ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿರುವ ಸೂಟರ್‌ಪೇಟೆ ಪ್ರಜ್ವಲ್ ಯುವಕ ಮಂಡಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಮಂಗಳೂರು: ಸಮಾಜಮುಖಿ ಚಟುವಟಿಕೆಗಳ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿರುವ ಸೂಟರ್‌ಪೇಟೆ ಪ್ರಜ್ವಲ್ ಯುವಕ ಮಂಡಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಹೇಳಿದ್ದಾರೆ. ಸೂಟರ್‌ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ಬಬ್ಬುಸ್ವಾಮಿ ರಂಗಮಂದಿರದಲ್ಲಿ ನಡೆದ ಪ್ರಜ್ವಲ್ ಯುವಕ ಮಂಡಲದ 28ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಸಮಾಜದ ಒಳಿತಿಗಾಗಿ ನಿಸ್ವಾರ್ಥ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆ ವಾರ್ಷಿಕೋತ್ಸವದ ಜೊತೆಗೆ ನಿರಂತರ 28 ವರ್ಷ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಿ ತನ್ನ ಸೇವಾ ಚಟುವಟಿಕೆಗಳ ಮೂಲಕ ಜನಮನ ಗೆದ್ದಿದೆ. ಮಾನವೀಯತೆ ಮತ್ತು ನೈತಿಕ ಮೌಲ್ಯಗಳ ಇಂತಹ ಸಂಘಟನೆಗಳು ಯುವಜನತೆಗೆ ಪ್ರೇರಣೆಯಾಗಬೇಕು ಎಂದರು.ಪ್ರಜ್ವಲ್ ಯುವಕ ಮಂಡಲದ ಗೌರವಾಧ್ಯಕ್ಷ, ನಿವೃತ್ತ ತಹಸೀಲ್ದಾರ್ ಬಾಬು ಪಿ. ಅಧ್ಯಕ್ಷತೆ ವಹಿಸಿದ್ದರು. ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರ ಎಸ್.ರಾಘವೇಂದ್ರ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅಭಿಮತ ವಾಹಿನಿಯ ನಿರ್ದೇಶಕಿ ಮಮತಾ ಶೆಟ್ಟಿ, ನಿಕಟಪೂರ್ವ ಕಾರ್ಪೊರೇಟರ್ ಭರತ್ ಕುಮಾರ್, ಆರ್‌ಡಿಪಿಆರ್ ಇಲಾಖೆಯ ವಿಶ್ವನಾಥ್ ಉಳ್ಳಾಲ್, ಯುವಕ ಮಂಡಲದ ಗೌರವ ಸಲಹೆಗಾರರಾದ ಕೆ.ಕೆ.ಪೇಜಾವರ, ಎಸ್.ಜಗದೀಶ್ಚಂದ್ರ ಅಂಚನ್, ಅಧ್ಯಕ್ಷ ಅಭಿಲಾಷ್ ಇದ್ದರು.
ಪುಸ್ತಕ ವಿತರಣೆ: ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಡಾಕ್ಟರೇಟ್ ಪದವಿ ಪಡೆದ ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಯತೀನ್ ಕುಮಾರ್ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಪಿಯುಸಿ ಹಾಗೂ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಧನ್ಯಾ ಯು.ಎಸ್. ಹಾಗೂ ಪ್ರೇರಣಾ ಎನ್.ಪಿ. ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಆಶ್ಲೇಷ್ ಡಿ.ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು.ಇತ್ತೀಚೆಗೆ ನಿಧನ ಹೊಂದಿದ ಪ್ರಜ್ವಲ್ ಯುವಕ ಮಂಡಲದ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಗೌರವ ಸಲಹೆಗಾರ ಎಸ್.ಜಗದೀಶ್ಚಂದ್ರ ಅಂಚನ್ ನುಡಿನಮನ ಸಲ್ಲಿಸಿದರು.
ಕೆ.ಕೆ.ಪೇಜಾವರ ಸ್ವಾಗತಿಸಿದರು. ಸೃಜನ್ ಮಾನವ್ ವಂದಿಸಿದರು. ಬಳಿಕ ಬೆನಕ ಆರ್ಟ್ಸ್ ಕುಡ್ಲ ತಂಡದಿಂದ ‘ಪೊರಿಪುದಪ್ಪೆ ಜಲದುರ್ಗೆ’ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಂಡಿತು.