ಮಂಗಳೂರು: ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ವೈದಿಕ ತಾಂತ್ರಿಕ ವಿದ್ಯಾಪೀಠದ 4 ದಿನಗಳ ವಾರ್ಷಿಕೋತ್ಸವದ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಮಂಗಳೂರು: ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ವೈದಿಕ ತಾಂತ್ರಿಕ ವಿದ್ಯಾಪೀಠದ 4 ದಿನಗಳ ವಾರ್ಷಿಕೋತ್ಸವದ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಉದ್ಘಾಟನೆ ನೆರವೇರಿಸಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಯುವ ತಲೆಮಾರಿಗೆ ಭಾರತೀಯ ಶಾಸ್ತ್ರೀಯ ಸಂಗೀತ ಶಿಕ್ಷಣ ನೀಡುತ್ತಿರುವ ವೀಣಾವಾದಿನಿ ಸಂಸ್ಥೆಯನ್ನು ಶ್ಲಾಘಿಸಿದರಲ್ಲದೆ, ಸಂಗೀತದ ಜತೆಗೆ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯುವ ಈ ಶಿಕ್ಷಣ ಸಂಸ್ಥೆ ಕಾಸರಗೋಡಿನಲ್ಲಿ ಅದ್ವಿತೀಯವಾದದ್ದು ಎಂದು ವರ್ಣಿಸಿದರು.

ಈ ಪರಿಸರದಲ್ಲಿ ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಪ್ರಯತ್ನ ನಡೆಯಬೇಕಾಗಿದೆ. ಜತೆಗೆ ಭಾರತೀಯ ಪರಂಪರೆಯ ಧಾರ್ಮಿಕ, ಸಾಂಸ್ಕೃತಿಕ ತಿಳುವಳಿಕೆಯನ್ನು ಯುವ ಜನತೆಗೆ ನೀಡಬೇಕಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕೇರಳದ ಅಲ್ವಾಯಿಯ ತಾಂತ್ರಿಕ ವಿದ್ಯಾಪೀಠದ ಪ್ರಾಂಶುಪಾಲ ಪುತ್ತೂರಿನ ಪೈರಪುಣಿ ಬಾಲಕೃಷ್ಣ ಭಟ್, ಬ್ರಹ್ಮಶ್ರೀ ಮುಲ್ಲಪಲ್ಲಿ ಕೃಷ್ಣನ್ ನಂಬೂದಿರಿ, ಬದಿಯಡ್ಕದ ವೈದ್ಯ ಡಾ. ಶ್ರೀನಿಧಿ ಸರಳಾಯ ಹಾಗೂ ಬೇಳದ ಕೌಮುದಿ ನೇತ್ರಾಲಯದ ನೇತ್ರ ತಜ್ಞ ಡಾ.ಸುನಿಲ್ ಇದ್ದರು.

ಕಾರ್ಯಕ್ರಮವನ್ನು ರಾಜಾರಾಮ್ ಪೆರ್ಲ ನಿರ್ವಹಿಸಿದರು. ಸಂಚಾಲಕ ಯೋಗೀಶ ಶರ್ಮ ಅವರು ವಿದ್ಯಾಲಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು. ಶ್ರೀಹರಿ ನೀಲಂಗಳ ವಂದಿಸಿದರು. ಬಳಿಕ ಸಂಗೀತ ಗುರುಗಳು ಹಾಗೂ ವಿದ್ಯಾರ್ಥಿಗಳ ಸಾಮೂಹಿಕ ನವಾವರಣ ಸಂಗೀತದ ಜತೆಗೆ ಮುಲ್ಲಪಲ್ಲಿ ಕೃಷ್ಣನ್ ನಂಬೂದಿರಿ ನೇತೃತ್ವದಲ್ಲಿ ಅಪರೂಪದ ಶ್ರೀಚಕ್ರ ಪೂಜೆ ಜರುಗಿತು.

ಬೆಳಗ್ಗೆ ಉದ್ಘಾಟನೆಯ ಬಳಿಕ ಪ್ರತಿಭಾವಂತ ಬಾಲ ಕಲಾವಿದ ಶ್ರೀಶಂಕರನ್ ಮಳಿಯೂರು ನೇತೃತ್ವದಲ್ಲಿ ಸಮನ್ವಯ ಎಂಬ ವಿವಿಧ ವಾದ್ಯ ವಾದನಗಳ ಸಂಯೋಗದಲ್ಲಿ ಫ್ಯೂಶನ್ ವಾದ್ಯಮೇಳ ಗಮನ ಸೆಳೆಯಿತು.