ಮಂಗಳೂರಿನ ಈ ‘ಸ್ಮಾರ್ಟ್‌’ ರಸ್ತೆಯಲ್ಲಿ ಕಟ್ಟೋದು, ಕೆಡವೋದೆ ಕೆಲಸ!

| Published : Sep 25 2024, 01:08 AM IST

ಸಾರಾಂಶ

ಕಟ್ಟಲೆಂದೇ ಕೆಡಹುವುದು ಹಾಗೂ ಕೆಡವಲೆಂದೇ ಕಟ್ಟುವುದಕ್ಕೆ ಜ್ವಲಂತ ನಿದರ್ಶನ- ಮಂಗಳೂರಿನ ಕ್ಲಾಕ್‌ ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತದವರೆಗಿನ ‘ಸ್ಮಾರ್ಟ್‌ ರಸ್ತೆ’! ಈ ರಸ್ತೆ ಅವಾಂತರದ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇದು

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಕಟ್ಟಲೆಂದೇ ಕೆಡಹುವುದು ಹಾಗೂ ಕೆಡವಲೆಂದೇ ಕಟ್ಟುವುದಕ್ಕೆ ಜ್ವಲಂತ ನಿದರ್ಶನ- ಮಂಗಳೂರಿನ ಕ್ಲಾಕ್‌ ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತದವರೆಗಿನ ‘ಸ್ಮಾರ್ಟ್‌ ರಸ್ತೆ’!

ಮೂರು ವರ್ಷಗಳ ಹಿಂದೆ ಕ್ಲಾಕ್‌ ಟವರ್‌ನಿಂದ ಸ್ಟೇಟ್‌ಬ್ಯಾಂಕ್‌ನ ಹ್ಯಾಮಿಲ್ಟನ್‌ ಸರ್ಕಲ್‌ವರೆಗಿನ ರಸ್ತೆ ದ್ವಿಮುಖ ವಾಹನ ಸಂಚಾರಕ್ಕೆ ಮುಕ್ತವಾಗಿತ್ತು. ಇದು ಸರಿಯಾಗಿಲ್ಲ, ಸ್ಮಾರ್ಟ್‌ ರಸ್ತೆ ಮಾಡಿ ತೋರಿಸುವುದಾಗಿ ಘೋಷಿಸಿದ ಸ್ಥಳೀಯಾಡಳಿತವು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಮೂಲಕ 2.50 ಕೋಟಿ ರು.ಗೂ ಅಧಿಕ ಖರ್ಚು ಮಾಡಿ ಏಕಮುಖ ರಸ್ತೆ ಮಾಡಿತು. ಅದಾಗಿ ಮೂರೇ ವರ್ಷದಲ್ಲಿ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಮರಳಿ ದ್ವಿಮುಖ ಸಂಚಾರ ಮಾಡಲು ಅಣಿಯಾಗುತ್ತಿದೆ. ಜನರ ಹಣ ಜನರ ಕಣ್ಣೆದುರಲ್ಲೇ ಪೋಲಾಗುತ್ತಿದೆ.

2021ಕ್ಕಿಂತ ಮೊದಲು ಕ್ಲಾಕ್‌ ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತದ ಮೂಲಕ ಹ್ಯಾಮಿಲ್ಟನ್‌ ಸರ್ಕಲ್‌ವರೆಗೆ ರಸ್ತೆ ವಿಭಾಜಕವಿದ್ದು, ಎರಡೂ ಬದಿಯಿಂದ ವಾಹನ ಸಂಚಾರಕ್ಕೆ ಅವಕಾಶವಿತ್ತು. ಸಂಚಾರವೂ ಸುಲಲಿತವಾಗಿತ್ತು. ಹ್ಯಾಮಿಲ್ಟನ್‌ ಸರ್ಕಲ್‌ನಿಂದ ರಾವ್‌ ಆಂಡ್‌ ರಾವ್‌ ಸರ್ಕಲ್‌ವರೆಗೆ ಸಿಟಿ ಬಸ್ಸು ತಂಗುದಾಣ ಇದ್ದುದರಿಂದ ಆ ರಸ್ತೆ ಸಂಚಾರ ಏಕಮುಖವಾಗಿತ್ತು. ಅದೇ ರೀತಿ ರಾವ್‌ ಆಂಡ್‌ ರಾವ್- ಕ್ಲಾಕ್‌ ಟವರ್‌ ರಸ್ತೆ ಸಂಚಾರವೂ ಏಕಮುಖವಾಗಿತ್ತು. ಆದರೆ 2021 ಆಗಸ್ಟ್‌ 14ರಂದು ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಭೆಯಲ್ಲಿ ಕ್ಲಾಕ್‌ಟವರ್‌- ಎಬಿ ಶೆಟ್ಟಿ ವೃತ್ತ- ಹ್ಯಾಮಿಲ್ಟನ್‌ ಸರ್ಕಲ್‌- ಕ್ಲಾಕ್‌ ಟವರ್‌ನ ಇಡೀ ‘ವರ್ತುಲ’ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯಾಗಿ ನಿರ್ಣಯ ಕೈಗೊಳ್ಳಲಾಯಿತು. ಅದರ ಆಧಾರದ ಮೇಲೆ 23.09.2021ರಂದು ಆಗಿನ ನಗರ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್‌ ಈ ಕುರಿತು ಆದೇಶ ಹೊರಡಿಸಿದ್ದರು.

ಇದರ ನಂತರ ಶುರುವಾದದ್ದೇ ನಿಜವಾದ ಸಂಚಾರ ಸಮಸ್ಯೆಗಳು. ಒಂದು ಕಡೆಯಿಂದ ಈ ರಸ್ತೆ ಹೊಕ್ಕರೆ ಮರಳಿ ಬರಲು ಇಡೀ ವರ್ತುಲ ಸುತ್ತು ಹಾಕಿ ಬರಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ರಾವ್‌ ಆಂಡ್‌ ರಾವ್‌- ಕ್ಲಾಕ್‌ ಟವರ್‌ವರೆಗೆ ವಾಹನ ದಟ್ಟಣೆ ಸಮಸ್ಯೆ. ಈ ನಡುವೆ ಸಿಟಿ ಬಸ್ಸು ನಿಲ್ದಾಣವೂ ಸ್ಥಳಾಂತರವಾಗಿ ಸಂಚಾರ ವ್ಯವಸ್ಥೆ ಅಧ್ವಾನಗೊಂಡಿತು. 2021ರಿಂದಲೂ ನಿರಂತರವಾಗಿ ಇಲ್ಲಿನ ಸಂಚಾರ ಸಮಸ್ಯೆಗಳ ಬಗ್ಗೆ ಅಲ್ಲಿನ ವ್ಯಾಪಾರಿಗಳು, ಸಾರ್ವಜನಿಕರು ನಿರಂತರ ದೂರು ಹೇಳತೊಡಗಿದರು. ಆರ್‌ಟಿಒ ರಸ್ತೆಯಲ್ಲಂತೂ ವಾಹನಗಳ ಅತಿವೇಗದಿಂದ ಹಲವು ಅವಘಡಗಳು ಸಂಭವಿಸಿ ನಿಯಂತ್ರಣವೇ ಕಷ್ಟಕರವಾಯಿತು. ಈ ನಡುವೆ ಎಬಿ ಶೆಟ್ಟಿ ವೃತ್ತವನ್ನೇ ಕಿತ್ತೆಸೆಯಲಾಯಿತು. ರಸ್ತೆಯ ಒಂದು ಬದಿ ಸಾಲು ಸಾಲು ಬಸ್ಸುಗಳ ‘ವಿಶ್ರಾಂತಿ ಧಾಮ’ವಾಯಿತು. ಅನೈತಿಕ ಚಟುವಟಿಕೆಗಳ ತಾಣವಾಯಿತು. ಇವೆಲ್ಲದರ ಫಲಶ್ರುತಿಯಾಗಿ ಈಗ ಮತ್ತೆ ಕ್ಲಾಕ್‌ ಟವರ್‌- ಹ್ಯಾಮಿಲ್ಟನ್‌ ಸರ್ಕಲ್‌ ರಸ್ತೆಯನ್ನು ದ್ವಿಮುಖ ಸಂಚಾರ ಮುಕ್ತಗೊಳಿಸಲು ಆಡಳಿತ ತೀರ್ಮಾನಿಸಿದೆ.

ಸ್ಮಾರ್ಟ್‌ ರಸ್ತೆ ಕತೆ ಏನು?:

ಕ್ಲಾಕ್‌ಟವರ್‌- ಎ.ಬಿ. ಶೆಟ್ಟಿ ವೃತ್ತವರೆಗಿನ ರಸ್ತೆಯನ್ನು ಸ್ಮಾರ್ಟ್‌ ರಸ್ತೆ ಮಾಡುವುದಾಗಿ ಘೋಷಿಸಿ, ಅದಕ್ಕಾಗಿ ಒಂದೆರಡು ಕೋಟಿ ರು.ಗೂ ಅಧಿಕ ವೆಚ್ಚ ಮಾಡಿ ಆಗಿದೆ. ಮತ್ತೆ ಈ ರಸ್ತೆಯನ್ನು ದ್ವಿಮುಖ ಸಂಚಾರ ಯೋಗ್ಯ ಮಾಡಲು ಮಗದೊಮ್ಮೆ ಕಾಮಗಾರಿ ಮಾಡಬೇಕು, ಅದಕ್ಕಾಗಿ ಮತ್ತೆ ಲಕ್ಷಾಂತರ ಹಣ ವ್ಯಯ ಮಾಡಬೇಕು. ಹಾಗಾದರೆ ಸ್ಮಾರ್ಟ್‌ ರಸ್ತೆಯ ಗತಿ ಏನು? ಸಾರ್ವಜನಿಕರ ಹಣ ಪೋಲಾಗುತ್ತಿದ್ದರೂ ಯಾರೂ ಕೇಳುವವರೇ ಇಲ್ಲವೇ? ಕಟ್ಟುವುದು, ಕೆಡಹುವುದೇ ಆದರೆ ಮಹಾನಗರ ಪಾಲಿಕೆ, ಸ್ಮಾರ್ಟ್‌ ಸಿಟಿಯಲ್ಲಿ ಎಂಜಿನಿಯರ್‌ಗಳು, ತಜ್ಞರು ಯಾಕೆ ಬೇಕು ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಮಹಾನಗರ ಪಾಲಿಕೆಯಲ್ಲಿ ಟ್ರಾಫಿಕ್‌ ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ್ದ ಡಿಸಿಪಿ ದಿನೇಶ್‌ ಕುಮಾರ್‌, ಕ್ಲಾಕ್‌ ಟವರ್‌ನಿಂದ ಹ್ಯಾಮಿಲ್ಟನ್‌ ಸರ್ಕಲ್‌ವರೆಗೆ ಈ ಹಿಂದೆ ಇದ್ದ ದ್ವಿಮುಖ ಸಂಚಾರ ವ್ಯವಸ್ಥೆಯೇ ಉತ್ತಮವಾಗಿತ್ತು. ಏಕಮುಖ ಸಂಚಾರ ಮಾಡಿದ್ದರಿಂದ ಸಮಸ್ಯೆ ಉದ್ಭವಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೆ, ದ್ವಿಮುಖ ರಸ್ತೆ ಮಾಡಬೇಕಾದರೆ ಈಗ ಈ ರಸ್ತೆಯ ಇಕ್ಕೆಲದಲ್ಲಿ ತೀರ ಅಗಲವಾಗಿ ಮಾಡಿರುವ ಪಾದಚಾರಿ ಮಾರ್ಗವನ್ನು ಮತ್ತೆ ಸಪೂರ ಮಾಡಬೇಕಾಗುತ್ತದೆ, ಇಲ್ಲದಿದ್ದರೆ ರಸ್ತೆ ಇಕ್ಕಟ್ಟಾಗಲಿದೆ ಎಂದಿದ್ದರು.

ಕೊನೆಗೂ ಈ ರಸ್ತೆ ದ್ವಿಮುಖ ಸಂಚಾರಕ್ಕೆ ಮತ್ತೆ ತೆರೆಯುವ ಪ್ರಕ್ರಿಯೆಯಲ್ಲಿದೆ. ಆದರೆ ಜನರ ಹಣ ಪೋಲಾದದ್ದು ಮಾತ್ರ ವಾಪಸ್‌ ಬರಲ್ಲ ಎನ್ನುವುದಂತೂ ಸತ್ಯ!