ಯಕ್ಷಗಾನ ಎಂದಿಗೂ ನಾಟಕ ಸಭಾ ಆಗದಿರಲಿ: ರೆಂಜಾಳ ರಾಮಕೃಷ್ಣ ರಾವ್‌

| Published : Aug 08 2025, 02:00 AM IST

ಸಾರಾಂಶ

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಮಂಗಳವಾರ ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ- ದಾಖಲೀಕರಣ’ ಸರಣಿ-8 ಕಾರ್ಯಕ್ರಮ ನೆರವೇರಿತು.

ಮಂಗಳೂರು ವಿಶ್ವವಿದ್ಯಾನಿಲಯ ಯಕ್ಷಗಾನ ಅಧ್ಯಯನ ಕೇಂದ್ರ ಯಕ್ಷಾಯಣ ದಾಖಲೀಕರಣ

ಕನ್ನಡಪ್ರಭ ವಾರ್ತೆ ಉಳ್ಳಾಲ

ಕಲಾವಿದರಿಗೂ ಪರಂಪರೆಯ ಒಲವು, ಕಾಲ ಜ್ಞಾನ ಮತ್ತು ತಿಟ್ಟಿನ ಶಿಸ್ತು ಖಂಡಿತಾ ಇರಬೇಕು. ಯಕ್ಷಗಾನ ಕಲೆಯು ಪರಂಪರೆ ಹಾಗೂ ಚೌಕಟ್ಟನ್ನು ಮೀರದೆ ಕಲೆಯ ಮೌಲ್ಯ ಉಳಿಸಿಕೊಂಡು ಬೆಳೆಯಬೇಕು. ಯಕ್ಷಗಾನ ಎಂದಿಗೂ ನಾಟಕ‌ ಸಭಾ ಆಗದಿರಲಿ ಎಂದು ಯಕ್ಷಗಾನ ರಂಗದ ಹಿರಿಯ ಕಲಾವಿದ ರಾಮಕೃಷ್ಣ ರಾವ್ ರೆಂಜಾಳ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಮಂಗಳವಾರ ನಡೆದ‌ ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ- ದಾಖಲೀಕರಣ’ ಸರಣಿ-8 ಕಾರ್ಯಕ್ರಮದಲ್ಲಿ ಅವರು ತಮ್ಮ ಯಕ್ಷ ಪಯಣದ ಅನುಭವ ಹಂಚಿಕೊಂಡರು.ಕಾಲಮಿತಿ ಬಂದನಂತರ ಹೊಸತನದೊಂದಿಗೆ ಪರಂಪರೆಯ ವೇಷಗಳು ಮರೆಯಾಗುತ್ತಿವೆ. ಈಗಿನ ಕಲಾವಿದರಿಗೆ ಮೇಳ ತಿರುಗಾಟ ಕಷ್ಟ ಇಲ್ಲ‌. ಆಗ ಮೂರು ರು. ಸಂಬಳ ಸಿಗುತ್ತಿದ್ದ ಕಾಲದಲ್ಲೂ ತೃಪ್ತಿ, ನೆಮ್ಮದಿ ಇತ್ತು. ಆದರೆ ಅವಕಾಶಗಳು ಇದ್ದರೂ ಈಗ ನೆಮ್ಮದಿ ಇಲ್ಲ‌. ಕಾಲಮಿತಿಯ ಪರಿಣಾಮ ರಾತ್ರಿ ಕಲಾವಿದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.ಯಕ್ಷಾಯಣ ದಾಖಲೀಕರಣ ಸರಣಿ 8 ರ ಕಾರ್ಯಕ್ರಮವನ್ನು ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ ಉದ್ಘಾಟಿಸಿ ಶುಭ ಹಾರೈಸಿದರು.

ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶ ಡಾ.ಧನಂಜಯ ಕುಂಬ್ಳೆ ಅವರು ಮಾತನಾಡಿ, ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಆರಂಭದಲ್ಲಿ ಕೂಡ್ಲು, ಮಡಿಕೇರಿ‌ ಮೇಳಗಳಲ್ಲಿ ಹಾಗೂ‌ ಬಳಿಕ ಕಟೀಲು ಮೇಳದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಕಾಲ ಯಕ್ಷಗಾನದಲ್ಲಿ ತೊಡಗಿಸಿಕೊಂಡು ,‌ತೆಂಕುತಿಟ್ಟು ಯಕ್ಷಗಾನ‌ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಹಾನ್ ಕಲಾವಿದರಾಗಿದ್ದಾರೆ ಎಂದರು.ಹಿರಿಯ ಕಲಾವಿದ ಸುಣ್ಣಂಬಳ ಈಶ್ವರ ಭಟ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಸುಬ್ಬ ಪಕ್ಕಳ, ವಿವಿಧ ಪೀಠಗಳ ಸಂಶೋಧನಾ ಸಹಾಯಕರು, ರೆಂಜಾಳ ಅಭಿಮಾನಿಗಳು ಉಪಸ್ಥಿತರಿದ್ದರು.ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ.ಸತೀಶ್ ಕೊಣಾಜೆ ವಂದಿಸಿದರು. ಚಂದ್ರಶೇಖರ್ ಎಂ.ಬಿ. ದಾಖಲೀಕರಣದಲ್ಲಿ ಸಹಕರಿಸಿದರು.ಗೆಜ್ಜೆ ಕೊಟ್ಟು ಕಣ್ಣೀರಿಟ್ಟ ರೆಂಜಾಳ:

ನನ್ನಲ್ಲಿ ಯಕ್ಷಗಾನಕ್ಕೆ ಸಂಬಧಿಸಿದ ಅನೇಕ ಮಣಿಸರ, ಕಿರೀಟಗಳಿದ್ದವು ಅವುಗಳನ್ನೆಲ್ಲ ಉಚಿತವಾಗಿ ಆಸಕ್ತಿ ಇದ್ದವರಿಗೆ ಹಂಚಿದೆ. ಆದರೆ ಗೆಜ್ಜೆಯನ್ನು ಯಾರಿಗೂ ಉಚಿತ ಕೊಡ್ಬೇಡಿ ಎಂದು ಗೆಳೆಯ ಕಲಾವಿದ ಹೇಳಿದ್ದಕ್ಕೆ ಅದನ್ನು ಮಾರಿದೆ. ಅವರು ಎಂಟು ರೂಪಾಯಿ ಕೊಟ್ಟರು. ಗೆಜ್ಜೆ ಮಾರಿದ ಕ್ಷಣ ನಾನು ಕಣ್ಣೀರಿಟ್ಟೆ ಎಂದು ರೆಂಜಾಳ ಹೇಳಿದರು.