ಮಂಗಳೂರಿನ ನಾಟ್ಯಕಲಾ ತಂಡ ಪ್ರಥಮ

| Published : Nov 06 2024, 12:47 AM IST

ಸಾರಾಂಶ

ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಂಗಳೂರಿನ ನಾಟ್ಯ ಕಲಾ ತಂಡ ಪ್ರಥಮ ಸ್ಥಾನ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ. ಮಂತರ್‌ಗೌಡ ಬಹುಮಾನ ವಿತರಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕನ್ನಡ ರಾಜ್ಯೋತ್ಸವ ಅಂಗವಾಗಿ ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಈಚೆಗೆ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಂಗಳೂರಿನ ನಾಟ್ಯಕಲಾ ತಂಡ ಪ್ರಥಮ ಸ್ಥಾನ ಪಡೆಯಿತು.

ಸೋಮವಾರಪೇಟೆಯ ಎಡಿಸಿ ತಂಡ ದ್ವಿತೀಯ, ಅರ್ಜುನ್ ತಂಡ ತೃತೀಯ ಸ್ಥಾನಗಳಿಸಿದೆ. ಸೂಪರ್ ಟ್ರೋಫಿಯನ್ನು ರವಿವರ್ಮ ತಂಡ ಪಡೆದುಕೊಂಡಿದೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೋಮವಾರಪೇಟೆಯ ರವಿವರ್ಮ ತಂಡ ಪ್ರಥಮ, ಕ್ರಿಯೆಟಿವ್ ಅಕಾಡೆಮಿ ದ್ವಿತೀಯ, ಕೈಲಾಸ್ ಹಟ್ಟಿಹೊಳೆ ತೃತೀಯ, ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರಪೇಟೆಯ ಮಸಗೋಡು ಚನ್ನಮ್ಮ ಶಾಲೆಯ ನಂದಗೋಕುಲ ತಂಡ ಪ್ರಥಮ, ಆದಿಶಕ್ತಿ ತಂಡ ದ್ವಿತೀಯ, ಭುವನೇಶ್ವರಿ ತಂಡ ತೃತೀಯ ಸ್ಥಾನಗಳಿಸಿದೆ. ಕಾಲೇಜು ವಿಭಾಗದಲ್ಲಿ ಅರ್ಜುನ್ ತಂಡ ಪ್ರಥಮ ಸ್ಥಾನ ಪಡೆದಿದೆ.

ಸಂಘದ ಸದಸ್ಯರಿಗೆ ಆಯೋಜಿಸಿದ್ದ ಕಬಡ್ಡಿ ಪಂದ್ಯಾಟದಲ್ಲಿ ಸತೀಶ್ ತಂಡ ಪ್ರಥಮ, ಚಾಣುಕ್ಯ ತಂಡ ದ್ವಿತೀಯ, ಕ್ರಿಕೆಟ್ ಪಂದ್ಯಾಟದಲ್ಲಿ ಕವನ್ ಪೂಜಾರಿ ತಂಡ ಪ್ರಥಮ, ಬಜೆಗುಂಡಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಶಾಸಕರಾದ ಡಾ. ಮಂತರ್‌ಗೌಡ, ಮಾಜಿ ಸಚಿವರಾದ ಅಪ್ಪಚ್ಚು ರಂಜನ್ ಬಹುಮಾನ ವಿತರಿಸಿದರು. ಮಂತರ್‌ಗೌಡ ಮಾತನಾಡಿ, ಕನ್ನಡ ಪರ ಹೋರಾಟದಲ್ಲಿ ಅಟೋ ಚಾಲಕರ ಕೊಡುಗೆ ಅಪಾರವಾದುದು. ಸದಾ ಸಾರ್ವಜನಿಕರಿಗೆ ಸೇವೆ ಒದಗಿಸುವ ಕೆಲಸವನ್ನು ಆಟೋ ಚಾಲಕರು ಮಾಡುತ್ತಾರೆ. ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಪಟ್ಟಣದ ಹತ್ತಿರದಲ್ಲಿ ಪೈಸಾರಿ ಜಾಗವಿರುವುದನ್ನು ಗುರುತಿಸಿ ತಿಳಿಸಿದರೆ ನಿವೇಶನ ಕಲ್ಪಿಸಲಾಗುವುದು ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಜಯ್ ಐಗೂರು, ಸಂಘದ ಸದಸ್ಯ ಲಿಂಗರಾಜು, ಟಿ.ಎಚ್. ಆಲಿಮಾ, ವಿದ್ಯಾರ್ಥಿ ಬಿ.ವಿ ದೀಕ್ಷಿತ್ ಅವರನ್ನು ಸನ್ಮಾನಿಸಲಾಯಿತು.

ದಾನಿಗಳಾದ ಹರಪಳ್ಳಿ ರವೀಂದ್ರ, ತಾಕೇರಿ ಪದ್ಮನಾಭ, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಆಟೋ ಚಾಲಕರ ಸಂಘದ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷ ಜೀವನ್, ಕಾರ್ಯದರ್ಶಿ ಮಹಮ್ಮದ್ ಶಫಿ, ಖಜಾಂಚಿ ಶಶಿ, ಪ್ರಮುಖರಾದ ಬಿ.ಜೆ. ದೀಪಕ್, ಯೋಗೇಶ್, ಕಿಬ್ಬೆಟ್ಟ ಮಧು, ದೀಪಕ್, ಕೆ.ಎ.ಆದಂ ಮತ್ತಿತರರು ಇದ್ದರು.