ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆಯ ಕೊನೆ ಅವಧಿಯ ಮೇಯರ್-ಉಪ ಮೇಯರ್ ಸ್ಥಾನಕ್ಕೆ ಸೆ.19 ರಂದು ಚುನಾವಣೆ ನಡೆಯಲಿದೆ.ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಎಸ್‌ಸಿ) ಹಾಗೂ ಉಪ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ ‘ಎ’ ಮಹಿಳೆ ಮೀಸಲು ನಿಗದಿಯಾಗಿದೆ. ಬಿಜೆಪಿಗೆ ಬಹುಮತ ಇದ್ದರೂ ಮೇಯರ್-ಉಪ ಮೇಯರ್ ಚುನಾವಣೆ ವೇಳೆ ಕಾಂಗ್ರೆಸ್ ಕೂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ಕ್ರಮ. ಆದರೆ ಈ ಬಾರಿ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಎಸ್‌ಸಿ ಮೀಸಲು ಅಭ್ಯರ್ಥಿ ಇಲ್ಲ. ಹಾಗಾಗಿ ಕಾಂಗ್ರೆಸ್ ಸ್ಪರ್ಧಿಸುವುದು ದೂರದ ಮಾತು. ಹಾಗಾಗಿ ಮೇಯರ್ ಆಯ್ಕೆ ಅವಿರೋಧವಾಗಿ ನಡೆಯಲಿದೆ.
ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಮೂರು ಮಂದಿಗೆ ಅವಕಾಶ ಇದೆ. ಈ ಪೈಕಿ ಮಂಗಳೂರು ದೇರೇಬೈಲ್ ವಾರ್ಡ್‌ನ ಮನೋಜ್ ಕುಮಾರ್ ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ಹಾಲಿ ಉಪಮೇಯರ್, ಬೆಂಗರೆ ವಾರ್ಡ್‌ನ ಸುನಿತಾ, ಜೆಪ್ಪು ವಾರ್ಡ್‌ನ ಭರತ್ ಕುಮಾರ್ ಅರ್ಹತೆ ಪಡೆದಿದ್ದಾರೆ. ಉಪ ಮೇಯರ್ ಸ್ಥಾನ ಮಹಿಳೆಗೆ ಮೀಸಲು ಇರುವುದರಿಂದ ಮೇಯರ್ ಸ್ಥಾನವನ್ನುನ್ನೂ ಮಹಿಳೆಗೆ ನೀಡುವ ಸಾಧ್ಯತೆ ಇಲ್ಲ.ಕಾಂಗ್ರೆಸ್‌ನಲ್ಲಿ ಒಬ್ಬರೇ ಅಭ್ಯರ್ಥಿ: ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಒಬ್ಬರೇ ಅಭ್ಯರ್ಥಿ ಇದ್ದಾರೆ. ಬಿಜೆಪಿಯಲ್ಲಿ ಎಂಟು ಮಂದಿ ಆಕಾಂಕ್ಷಿಗಳಿದ್ದು, ಎಲ್ಲರೂ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸೇರಿದವರು. ಬಿಜೆಪಿಯಲ್ಲಿ ವೀಣಾ ಮಂಗಳ, ಸುಷ್ಮಾ ಆಚಾರ್ಯ, ವಿನಿತಾ, ಶೋಭಾ ಪೂಜಾರಿ, ರೂಪಶ್ರೀ, ಚಂದ್ರಾವತಿ ಸೇರಿದಂತೆ ಒಟ್ಟು 8 ಮಂದಿ ಇದ್ದಾರೆ. ಇವರೆಲ್ಲರೂ ಮೊದಲ ಬಾರಿಗೆ ಪಾಲಿಕೆ ಪ್ರವೇಶಿಸಿದವರು. ಇನ್ನೊಬ್ಬರು ಪೂರ್ಣಿಮಾ ಆಚಾರ್ಯ ಇದ್ದರೂ ಅವರು ಈಗಾಗಲೇ ಉಪ ಮೇಯರ್ ಆಗಿರುವುದರಿಂದ ಇವರನ್ನು ಪರಿಗಣಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಕಾಂಗ್ರೆಸ್‌ನಲ್ಲಿ ಝೀನತ್ ಸಂಶುದ್ದೀನ್ ಏಕಮಾತ್ರ ಅಭ್ಯರ್ಥಿಯ ಅರ್ಹತೆ ಪಡೆದಿದ್ದಾರೆ. ಹಾಗಾಗಿ ಕಾಂಗ್ರೆಸ್ ಉಪ ಮೇಯರ್ ಸ್ಥಾನಕ್ಕೆ ಮಾತ್ರ ಸ್ಪರ್ಧಿಸಬಹುದು.
ಬಿಜೆಪಿಯಲ್ಲಿ ಮೇಯರ್ ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಉಪ ಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಚುನಾವಣೆ ದಿನ ಅಥವಾ ಮುನ್ನಾ ದಿನ ಅಭ್ಯರ್ಥಿ ಯಾರು ಎಂಬುದು ಬಹಿರಂಗವಾಗಲಿದೆ. ಈ ಬಾರಿ ಉತ್ತರ ಕ್ಷೇತ್ರಕ್ಕೆ ಮೇಯರ್ ಸ್ಥಾನಪ್ರತಿ ಬಾರಿ ಕ್ಷೇತ್ರಗಳ ಸಮಾನ ಪ್ರಾತಿನಿಧ್ಯ ಕಾಯ್ದುಕೊಳ್ಳಲು ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರ ವ್ಯಾಪ್ತಿಯ ಸದಸ್ಯರಿಗೆ ಮೇಯರ್-ಉಪ ಮೇಯರ್ ಸ್ಥಾನದಲ್ಲಿ ಅವಕಾಶ ನೀಡುತ್ತಾರೆ. ಕಳೆದ ಎರಡು ಅವಧಿಯಲ್ಲೂ ಮೇಯರ್ ಸ್ಥಾನಕ್ಕೆ ಮಂಗಳೂರು ದಕ್ಷಿಣ ವ್ಯಾಪ್ತಿಯ ಪ್ರೇಮಾನಂದ ಶೆಟ್ಟಿ ಮತ್ತು ಸುಧೀರ್ ಶೆಟ್ಟಿ ಆಯ್ಕೆಯಾಗಿದ್ದರು. ಹಾಗಾಗಿ ಈ ಬಾರಿ ಮಂಗಳೂರು ಉತ್ತರಕ್ಕೆ ನೀಡುವ ಸಾಧ್ಯತೆಯೇ ಅಧಿಕ. ಈ ಹಿನ್ನೆಲೆಯಲ್ಲಿ ಉಪ ಮೇಯರ್‌ನ್ನು ಮಂಗಳೂರು ದಕ್ಷಿಣಕ್ಕೆ ನೀಡುವ ಸಂಭವ ಜಾಸ್ತಿ.
ಮಂಗಳೂರು ಪಾಲಿಕೆಯ ಒಟ್ಟು 60 ಸದಸ್ಯರಲ್ಲಿ ಬಿಜೆಪಿ 44, ಕಾಂಗ್ರೆಸ್ 14, ಎಸ್‌ಡಿಪಿಐ 2 ಸ್ಥಾನ ಹೊಂದಿದೆ. ಈ ಕೊನೆ ಅವಧಿಯ ಮೇಯರ್-ಉಪಮೇಯರ್ ಅಧಿಕಾರ ಅವಧಿ 2025 ಫೆ. 27ಕ್ಕೆ ಮುಕ್ತಾಯಗೊಳ್ಳಲಿದೆ. ಅಂದರೆ ಒಂದು ವರ್ಷ ಬದಲು ಕೇವಲ ಐದೂವರೆ ತಿಂಗಳು ಅಧಿಕಾರ ಇರಲಿದೆ.ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಇನ್ನಷ್ಟೆ ಆಗಬೇಕು. ಮೀಸಲಾತಿ ಅನ್ವಯ ಮೇಯರ್ ಸ್ಥಾನಕ್ಕೆ ಮೂರು ಮಂದಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ಎಂಟು ಮಂದಿಗೆ ಸ್ಪರ್ಧಿಸುವ ಅರ್ಹತೆ ಇದೆ. ಚುನಾವಣೆಗೂ ಮುನ್ನ ಅಭ್ಯರ್ಥಿಗಳನ್ನು ಶಾಸಕರು, ಮುಖಂಡರು ಸೇರಿ ಅಂತಿಮಗೊಳಿಸಲಿದ್ದಾರೆ.
-ಪ್ರೇಮಾನಂದ ಶೆಟ್ಟಿ, ಪಾಲಿಕೆ ಮಾಜಿ ಮೇಯರ್