ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬೇಲೂರು ಪೊಲೀಸ್ ಠಾಣೆ ಆವರಣದಲ್ಲಿ ಸರ್ವಧರ್ಮ ಸಮನ್ವಯ ಸಮಿತಿಯ ಶಾಂತಿ ಸಭೆ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಡಿವೈಎಸ್ಪಿ ಲೋಕೇಶ್ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ (ಸ)ರವರ ಜನ್ಮದಿನಾಚರಣೆ ಅಂಗವಾಗಿ ಬೇಲೂರಿನಲ್ಲಿ ನಡೆಯುವ ಶೋಭಾಯಾತ್ರೆ ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ಸಮುದಾಯದ ಮುಖಂಡರು ನಡೆಸಿಕೊಡಬೇಕು ಎಂದು ಮನವಿ ಮಾಡಿದರು.
ನಂತರ ಹನುಮ ಜಯಂತಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ನಮ್ಮ ಬೇಲೂರು ಸೌಹಾರ್ದ ಸಂಕೇತವಾಗಿದ್ದು, ಹಿಂದೂ ಬಾಂಧವರು ನಡೆಸುವ ಹನುಮ ಜಯಂತಿಗೆ ಮುಸ್ಲಿಂ ಬಾಂಧವರು ಸಿಹಿ ತಿಂಡಿ ತಿನಿಸು, ತಂಪು ಪಾನೀಯ ನೀಡಿ ನಮ್ಮನ್ನು ಶುಭಹಾರೈಸುತ್ತಾರೆ. ಅದರಂತೆಯೇ ಈದ್ ಮಿಲಾದ್ ಹಬ್ಬದ ಶೋಭಾಯಾತ್ರೆಗೆ ನಾವು ಸಹ ಹಣ್ಣುಹಂಪಲು ನೀಡುತ್ತೇವೆ. ನಾವೆಲ್ಲರೂ ಸಹೋದರಂತೆ ಬಾಳುತ್ತಿದ್ದೇವೆ. ಹೊರ ಜಿಲ್ಲೆಗಳಿಂದ ಬರುವ, ನಮ್ಮ ಸೌಹಾರ್ದತೆಗೆ ಧಕ್ಕೆ ತರುವ ದುಷ್ಟಶಕ್ತಿಗಳನ್ನು ಪೊಲೀಸರಿಗೆ ಮಾಹಿತಿ ನೀಡಿ ಮಟ್ಟ ಹಾಕಬೇಕು ಎಂದರು.ಬೇಲೂರು ಹಳೆಬೀಡು ಪ್ರಾಧಿಕಾರ ಅಧ್ಯಕ್ಷ ಸೈಯದ್ ತೌಫಿಕ್ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಬರುವಂತಹ ಗಾಳಿ ಸುದ್ದಿಗಳಿಗೆ ಕಿವಿ ಕೊಡದೆ ಸತ್ಯಾಸತ್ಯತೆ ಪರಿಶೀಲಿಸಬೇಕು. ಸ್ಥಳೀಯವಾಗಿ ನಾವೆಲ್ಲರೂ ಸಹೋದರಂತೆ ಬದುಕಿ ತೋರಿಸಬೇಕಾಗಿದೆ. ಪೊಲೀಸರ ಜೊತೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಜಯಪ್ರಕಾಶ್ ಮಾತನಾಡಿ, ಬೇಲೂರಿನ ಸೌಹಾರ್ದತೆ ನೋಡಿ ತುಂಬಾ ಸಂತೋಷವಾಗಿದೆ. ಇದೇ ರೀತಿ ಮುಂದುವರಿಸೋದು ನಮ್ಮ ಕರ್ತವ್ಯ. ಸಾರ್ವಜನಿಕರು ಮತ್ತು ತಮ್ಮೆಲ್ಲರ ಸಲಹೆ, ಸಹಕಾರದಿಂದ ಉತ್ತಮ ಸಮಾಜ ನಿರ್ಮಾಣ ಮಾಡೋಣ. ಯಾವುದೇ ರೀತಿಯ ದುಷ್ಟಶಕ್ತಿಗಳು ಕಂಡು ಬಂದರೆ ನಮಗೆ ಮಾಹಿತಿ ನೀಡಿ ನಿಮ್ಮ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದರು.ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷೆ ಭಾರತಿ ಗೌಡ, ಪುರಸಭಾ ಸದಸ್ಯ ಜಮಾಲುದ್ದೀನ್, ಮಾನವ ಹಕ್ಕು ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ನಿಂಗರಾಜ್, ಉಪನ್ಯಾಸಕ ರಘು, ಪುರಸಭಾ ಸದಸ್ಯ ಪರ್ವೀಜ್ ಫಯಾಜ್, ವಿವಿಧ ಮಸೀದಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಾಮಾಜಿಕ ಹೋರಾಟಗಾರ ನೂರ್ ಅಹಮ್ಮದ್ ಅಬ್ದುಲ್ ಖಾದರ್, ಸಬ್ ಇನ್ಸ್ಪೆಕ್ಟರ್ ಜಿತೇಂದ್ರ, ಪೊಲೀಸ್ ಇಲಾಖೆಯ ಸಿಬ್ಬಂದಿಯಾದ ದೇವರಾಜ್, ಚೇತನ್, ನವೀನ್, ಪ್ರವೀಣ್ ಇನ್ನಿತರರು ಹಾಜರಿದ್ದರು.