ಸಾರಾಂಶ
ಮದ್ದೂರು: ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಶನಿವಾರ ನಡೆದಿದೆ. ನಿಡಘಟ್ಟ ಗ್ರಾಮದ ರಾಜು (47) ಮೃತ ದುರ್ದೈವಿ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈತನನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಕೊನೆ ಉಸಿರೆಳೆದಿದ್ದಾನೆ. ನಿಡಘಟ್ಟ ಗ್ರಾಮದಿಂದ ಮದ್ದೂರಿನ ಕೊಲ್ಲಿ ವೃತ್ತದವರೆಗೆ ಹಳೆ ಬೆಂಗಳೂರು - ಮೈಸೂರು ರಾಜ್ಯ ಹೆದ್ದಾರಿ ಡಾಂಬರೀಕರಣ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮೈಸೂರು ಮಾರ್ಗದಲ್ಲಿ ವಾಹನಗಳ ಏಕಮುಖ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಈ ವೇಳೆ ಅಪಘಾತವೆಸಗಿದ ಟಿಪ್ಪರ್ ಲಾರಿ ಚಾಲಕ ಮುಂದೆ ಸಾಗುತ್ತಿದ್ದ ವಾಹನಗಳನ್ನು ಹಿಂದಿಕ್ಕಿ ಸಾಗುವ ಆತುರದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕೂಲಿ ಕಾರ್ಮಿಕ ರಾಜುಗೆ ಡಿಕ್ಕಿಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪಿಎಸ್ಐ ರಾಮಸ್ವಾಮಿ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.