ಸಾರಾಂಶ
ಹಾವೇರಿ: ಅನೇಕ ನಂಬುಗೆಗಳಿಂದ ಕೂಡಿದ ಈ ಜಡ ಸಮಾಜದಲ್ಲಿ ಸತ್ಯವನ್ನು ಹೇಳುವುದೇ ಒಂದು ಸವಾಲಿನ ಕೆಲಸ. ಸೈದ್ಧಾಂತಿಕ ಸಿದ್ಧತೆ ಮತ್ತು ವೈಜ್ಞಾನಿಕ ಮನೋಭಾವದ ತಳಹದಿ ಇದ್ದಾಗ ಮಾತ್ರ ಈ ಸಮಾಜವನ್ನು ತಿದ್ದಲು ಸಾಧ್ಯ. ಡಾ.ಕಲಬುರ್ಗಿ ಮತ್ತು ದಾಭೋಳ್ಕರ್ ಇದಕ್ಕಾಗಿ ಜೀವ ತ್ಯಾಗ ಮಾಡಿದರು ಎಂದು ನಿವೃತ್ತ ಪ್ರಾಚಾರ್ಯ ಬಿ. ಬಸವರಾಜ ಹೇಳಿದರು.ನಗರದ ಭಗತ್ ಅಕಾಡೆಮಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮತ್ತು ತಾಲೂಕು ಸಮಾವೇಶ ಹಾಗೂ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಸಾಹಿತಿ ಶೇಖರ್ ಭಜಂತ್ರಿ ಅವರು ಡಾ.ಎಂ. ಎಂ.ಕಲಬುರ್ಗಿ ಕುರಿತು ಉಪನ್ಯಾಸ ನೀಡಿ, ವೈಜ್ಞಾನಿಕ ಮನೋಭಾವವೆಂದರೆ ಅದೊಂದು ಗಾಢ ಮನೋಸ್ಥಿತಿ. ವಚನ ಸಾಹಿತ್ಯದ ಶರಣ ನಂಬುಗೆಗಳ ನೆಲಗಟ್ಟಿನಲ್ಲಿ ಡಾ.ಎಂ.ಎಂ. ಕಲಬುರ್ಗಿ ಅವರು ತಮ್ಮ ಜೀವಿತಾವಧಿಯ ಕೊನೆಯ ವರೆಗೂ ಹೋರಾಟ ಮಾಡಿದರು ಎಂದರು..ಮಹಾರಾಷ್ಟ್ರದ ವಿಚಾರವಾದಿ ಡಾ. ನರೇಂದ್ರ ದಾಬೋಳ್ಕರ್ ಅವರ ಜೀವ ಸಾಧನೆ ಕುರಿತು ಭಾರತ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷ ಸತೀಶ ಎಂ.ಬಿ. ಮಾತನಾಡಿ, ವಿಚಾರಗಳನ್ನೂ ವಿಚಾರಗಳಿಂದಲೇ ಎದುರಿಸಬೇಕೆಂಬುದೇ ದಾಬೋಳ್ಕರರ ಪ್ರತಿಪಾದನೆಯಾಗಿತ್ತು. ಮಹಾರಾಷ್ಟ್ರ ಅಂಧಃ ನಿರ್ಮೂಲನ ಸಮಿತಿ ಅವರು ಅಳಿದ ನಂತರವೂ ಕೆಲಸ ನಿರ್ವಹಿಸುತ್ತಿರುವುದು ವಿಚಾರ ವಾದಕ್ಕೆ ಪುಷ್ಟಿ ನೀಡುವ ಸಂಗತಿ ಎಂದರು.ವೈಜ್ಞಾನಿಕ ಮನೋವೃತ್ತಿ ಪ್ರಧಾನ ವಿಷಯ ಕುರಿತು ಡಾ. ಅಂಬಿಕಾ ಹಂಚಾಟೆ ಮಾತನಾಡಿ, ಮಕ್ಕಳಲ್ಲಿನ ಸಾಮರ್ಥ್ಯ ಹೊರ ಹಾಕಲು ಬಿಟ್ಟಾಗ ಮನೆಯಿಂದಲೇ ವೈಜ್ಞಾನಿಕ ಮನೋವೃತ್ತಿ ಆರಂಭವಾಗುತ್ತದೆ. ಆಂತರಿಕ ಮತ್ತು ಬಾಹ್ಯ ಶಕ್ತಿಗಳ ನಡುವೆ ಬೆಳೆಯುವ ಮಗುವಿಗೆ ಪ್ರಶ್ನೆಗಳನ್ನು ಕೇಳು ಬಿಡಿ, ವಿಜ್ಞಾನದಿಂದ ಸಮಾಜ ಸದಾಕಾಲ ಬಲಿಷ್ಠವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಶಿಕ್ಷಕ ದಿನಾಚರಣೆಯ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಜಮೀರ ರಿತ್ತಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಎ.ಬಿ. ಗುಡ್ಡಳ್ಳಿ, ಲಯನ್ಸ್ ಸಂಸ್ಥೆಯ ಗೌರವ ಪುರಸ್ಕಾರ ಪಡೆದ ಶಿಕ್ಷಕ ಜಗದೀಶ ಚೌಟಗಿ ಹಾಗೂ ನಿವೃತ್ತ ಶಿಕ್ಷಕ ಗೋವಿಂದಪ್ಪ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು. ಬಿಜಿವಿಎಸ್ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಗುಡಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಜುಬೇದಾ ನಾಯಕ್, ಮಾಲತೇಶ ಕರ್ಜಗಿ, ಪೃಥ್ವಿರಾಜ ಬೆಟಗೇರಿ. ಭಗತ್ ಸಿಂಗ್ ಅಕಾಡೆಮಿಯ ಸತೀಶ ಎಂ.ಬಿ. ಪಾಲ್ಗೊಂಡಿದ್ದರು. ಕೆ.ಆರ್. ಹಿರೇಮಠ, ಎ.ಬಿ. ಗುಡ್ಡಳ್ಳಿ, ಮಹಾಂತೇಶ ಮರಿಗೂಳಪ್ಪನವರ ಅಕ್ಕಮಹಾದೇವಿ ಹಾನಗಲ್ಲ ಮುಂತಾದವರು ವಿಜ್ಞಾನ ಗೀತೆಗಳನ್ನು ಹಾಡಿದರು. ಮಹ್ಮದಲಿ ಸಂಕ್ಲಿಪೂರ ಸ್ವಾಗತಿಸಿದರು. ಆರ್.ಸಿ. ನಂದೀಹಳ್ಳಿ ನಿರೂಪಿಸಿದರು. ಭಾಗ್ಯಾ ಎಂ.ಕೆ. ವಂದಿಸಿದರು.