ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾದ ತಿನಿಸು ಕಟ್ಟೆ ಮಳಿಗೆ ಹಂಚಿಕೆ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ ಮಳಿಗೆ ಪಡೆದಿದ್ದಾರೆಂಬ ಆರೋಪದ ಕೇಳಿಬಂದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಂಡಿದ್ದ ವಾರ್ಡ್ ನಂ.41ರ ಸದಸ್ಯ ಮಂಗೇಶ ಪವಾರ ಇದೀಗ ಮೇಯರ್ ಪಟ್ಟ ಅಲಂಕರಿಸಿದ್ದಾರೆ.ಅಂದು ತಮ್ಮನ್ನು ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆನ್ನವರ ಅವರೇ ಮಂಗೇಶ ಪವಾರ ಅವರು ನೂತನ ಮೇಯರ್ ಆಗಿ ಚುನಾಯಿತಗೊಂಡಿದ್ದಾರೆಂದು ಘೋಷಣೆ ಮಾಡಿದರು. ಅಲ್ಲದೇ, ಅವರಿಗೆ ಪುಷ್ಪಗುಚ್ಛ ನೀಡಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು. ಮಂಗೇಶ ಪವಾರ ಮೇಯರ್ ಪಟ್ಟಕ್ಕೇರಿದ ಪ್ರಸಂಗವೂ ತೀವ್ರ ಕುತೂಹಲ ಕೆರಳಿಸುವಂತೆ ಮಾಡಿತು.ಮಂಗೇಶ ಪವಾರ ಬಿಜೆಪಿ ಕಟ್ಟಾ ಕಾರ್ಯಕರ್ತ. ಈ ಹಿಂದೆ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಕಳೆದ ಹಲವಾರು ವರ್ಷಗಳಿಂದ ತಮ್ಮನ್ನು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೂ ಮೊದಲೇ ಅವರು ಲೋಕೋಪಯೋಗಿ ಇಲಾಖೆ ವತಿಯಿಂದ ನಗರದ ಬಸವೇಶ್ವರ ವೃತ್ತದ ಬಳಿ ನಿರ್ಮಿಸಲಾಗಿರುವ ತಿನಿಸು ಕಟ್ಟೆ ಮಳಿಗೆ ಹಂಚಿಕೆ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಪತ್ನಿಯರ ಹೆಸರಿನಲ್ಲಿ ಮಂಗೇಶ ಪವಾರ ಮತ್ತು ಜಯಂತ ಜಾಧವ ಮಳಿಗೆಯನ್ನು ಪಡೆದಿದ್ದರು. ಬಳಿಕಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.ಜನಪ್ರತಿನಿಧಿಯಾಗಿದ್ದರೂ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ತಿನಿಸು ಕಟ್ಟೆ ಮಳಿಗೆಯನ್ನು ಅನಧಿಕೃತವಾಗಿ ಪಡೆದುಕೊಂಡಿದ್ದಾರೆ. ಹಾಗಾಗಿ, ಅವರ ಪಾಲಿಕೆ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ ಅವರು ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು.
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಅವರು ಪಾಲಿಕೆ ಸದಸ್ಯರಾದ ಮಂಗೇಶ ಪವಾರ ಮತ್ತು ಜಯಂತ ಜಾಧವ ಅವರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಬಳಿಕ ಈ ಇಬ್ಬರು ಸದಸ್ಯರು ಪ್ರಾದೇಶಿಕ ಆಯುಕ್ತರ ಆದೇಶ ಪ್ರಶ್ನಿಸಿ, ನಗರಾಭಿವೃದ್ಧಿ ಇಲಾಖೆ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಅಲ್ಲಿ ಮೇಲ್ಮನವಿಯನ್ನು ಅನೂರ್ಜಿತಗೊಳಿಸಲಾಯಿತು. ಹಾಗಾಗಿ, ಪ್ರಾದೇಶಿಕ ಆಯುಕ್ತರು ಮತ್ತು ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಸದಸ್ಯರಿಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್ ಅಧಿಕಾರಿಗಳ ಆದೇಶಕ್ಕೆ ತಡೆ ನೀಡಿತು. ಮೇಯರ್, ಉಪಮೇಯರ್ ಚುನಾವಣೆ ಎರಡೇ ದಿನ ಬಾಕಿ ಇರುವಾಗಲೇ ಈ ಹೈಕೋರ್ಟ್ ತಡೆಯಾಜ್ಞೆ ಆದೇಶ ಹೊರಬಿದ್ದಿತು. ಇದರಿಂದಾಗಿ ಮಂಗೇಶ ಪವಾರ ಅವರಿಗೆ ಬಿಗ್ ರಿಲೀಫ್ ಸಿಕ್ಕಿತು. ಅಲ್ಲದೇ, ಮೇಯರ್ ಚುನಾವಣೆಗೆ ಸ್ಪರ್ಧಿಸುವ ಅವಕಾಶವೂ ದೊರೆತು. ಈಗ ಮೇಯರ್ ಆಗಿ ಚುನಾಯಿತಗೊಂಡಿದ್ದಾರೆ.ಅಂದುಕೊಂಡದ್ದನ್ನು ಸಾಧಿಸಿದ ಶಾಸಕ ಅಭಯ:
ಸದಸ್ಯತ್ವದಿಂದ ಅನರ್ಹಗೊಂಡಿದ್ದ ಮಂಗೇಶ ಪವಾರ ಅವರನ್ನೇ ಮೇಯರ್‌ರನ್ನಾಗಿ ಆಯ್ಕೆ ಮಾಡಲೇಬೇಕು. ಸದಸ್ಯತ್ವ ಅನರ್ಹಗೊಳಿಸಿದ್ದ ಅಧಿಕಾರಿಯಿಂದಲೇ ಮೇಯರ್ ಪ್ರಮಾಣಪತ್ರವನ್ನು ಕೊಡಿಸಬೇಕು. ಅವರಿಂದಲೇ ಸನ್ಮಾನ, ಅಭಿನಂದನೆ ಮಾಡಿಸಬೇಕು ಎಂದು ಪಣ ತೊಟ್ಟಿದ್ದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅದನ್ನೂ ಸಾಧಿಸಿಯೇ ಬಿಟ್ಟಿದ್ದಾರೆ. ಈ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.ಪಾಲಿಕೆ ಸದಸ್ಯರಿಬ್ಬರ ಸದಸ್ಯತ್ವ ಅನರ್ಹಗೊಳಿಸಿದ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿಗೆ ಸರಿಯಾದ ತರಬೇತಿ ಸಿಕ್ಕಿಲ್ಲವೆಂದು ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿದೆ. ಅವರು ಯಾರದ್ದೋ ಒತ್ತಡಕ್ಕೆ ಮಣಿದು ಇಂತಹ ಕೆಲಸ ಮಾಡಬಾರದು. ಮೇಯರ್, ಉಪಮೇಯರ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ ನಿಜ. ಆದರೆ, ಇದು ನಮ್ಮಗೆಲುವಲ್ಲ, ಇದೊಂದು ನಮಗೆ ಸಿಕ್ಕ ಅವಕಾಶ. ಆಡಳಿತ, ಪ್ರತಿಪಕ್ಷ ಸೇರಿದಂತೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು.-ಅಭಯ ಪಾಟೀಲ,
ಶಾಸಕರು ಬೆಳಗಾವಿ ದಕ್ಷಿಣ.ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಿದೆ. ಚುನಾವಣೆ ವೇಳೆ ಸ್ಪರ್ಧೆ ಇರುತ್ತದೆ. ಬಳಿಕ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡೋಣ. ನೂತನ ಮೇಯರ್, ಉಪಮೇಯರ್‌ಗೆ ಸಹಕಾರ ನೀಡುತ್ತೇವೆ.ಜಗದೀಶ ಶೆಟ್ಟರ್ ಸಂಸದರು, ಬೆಳಗಾವಿ
ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರ ಸಹಕಾರದೊಂದಿಗೆ ಶ್ರಮಿಸಲಾಗುವುದು. ನಮ್ಮನ್ನು ಆಯ್ಕೆಮಾಡುವಲ್ಲಿ ಶ್ರಮಿಸಿದ ಪಕ್ಷದ ನಾಯಕರಿಗೆ, ಹಿರಿಯರಿಗೆ ಧನ್ಯವಾದಗಳು.ಮಂಗೇಶ ಪವಾರ, ನೂತನ ಮೇಯರ್
ಉಪಮೇಯರ್ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಗರದ ಅಭಿವೃದ್ಧಿಗೆ ಎಲ್ಲರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು.ವಾಣಿ ವಿಲಾಸ ಜೋಶಿ, ನೂತನ ಉಪಮೇಯರ್