ಸಾರಾಂಶ
ಸಂತೋಷ ದೈವಜ್ಞ
ಮುಂಡಗೋಡ:ಪ್ರಸಕ್ತ ಸಾಲಿನಲ್ಲಿ ಮಾವಿನ ಮರಗಳೀಗ ಮೈ ತುಂಬ ಹೂ ಬಿಟ್ಟು ಕಾಯಿ ಕಚ್ಚುತ್ತಿದ್ದು, ಮಾವು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.ಈ ಬಾರಿ ಮಾವಿನ ಮರಗಳು ವಿಳಂಬವಾಗಿ ನೆನೆ (ಹೂವು) ಬಿಟ್ಟರೂ ಕೂಡ ಉತ್ತಮ ಫಸಲು ಬರುವ ನಿರೀಕ್ಷೆ ಮೂಡಿಸಿದ್ದು, ಸಂಪ್ರದಾಯದಂತೆ ಮಾವು ಬೆಳೆಗಾರರು ಗಿಡಗಳಿಗೆ ಔಷಧಿ ಸಿಂಪರಣೆ ಸೇರಿದಂತೆ ಮಾವಿನ ತೋಪುಗಳ ಪೋಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿಂದೆಲ್ಲ ಅವಧಿಗೂ ಮುನ್ನ ನವೆಂಬರ್-ಡಿಸೆಂಬರ್ ತಿಂಗಳಲ್ಲಿಯೇ ಮೈತುಂಬ ಹೂಬಿಟ್ಟು ಕಂಗೊಳಿಸಿ ಮಾವು ಬೆಳೆಗಾರರಲ್ಲಿ ಉತ್ತಮ ಫಸಲು ನೀಡುವ ನಿರೀಕ್ಷೆ ಹುಟ್ಟಿಸಿ ಈ ವೇಳೆಗಾಗಲೇ ಮೂಡಗಾಳಿ, ಹವಾಮಾನ ವೈಪರೀತ್ಯ ಅಥವಾ ಅತಿಯಾದ ಕ್ರಿಮಿನಾಷಕ (ಔಷಧಿ) ಸಿಂಪರಣೆಯಿಂದಲೋ ಮಾವಿನ ಬೆಳೆ ಬೂದಿ ರೋಗ ಹಾಗೂ ಕೀಟಬಾಧೆಗೊಳಗಾಗಿ ಅರ್ಧದಷ್ಟು ಹೂವು ಉದುರಿ ನಾಶವಾಗುತ್ತಿತ್ತು, ಆದರೆ ಈ ಬಾರಿ ಇದುವರೆಗೂ ಮೂಡ ಗಾಳಿ, ಅಂಟು ಇಬ್ಬನಿ ಸೇರಿದಂತೆ ಯಾವುದೇ ಕೀಟಬಾಧೆ ಕಾಣಿಸಿಕೊಳ್ಳದೇ ಇರುವುದರಿಂದ ಮಾವು ಬೆಳೆಗಾರರು ಸದ್ಯ ಸಮಾಧಾನವಾಗಿದ್ದಾರೆ. ಮುಂದಿನ ದಿನಗಳಲ್ಲಿ ಹವಾಮಾನ ಕೂಡ ಕೈಹಿಡಿದರೆ ಉತ್ತಮ ಫಸಲು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
ತಾಲೂಕಿನಲ್ಲಿ ಸುಮಾರು ೫೦೦೦ ಎಕರೆ ಪ್ರದೇಶದಲ್ಲಿ ಆಪೂಸ್, ಪೈರಿ, ಇಸಾಡ್, ಸಿಂದೂಲಾ, ಮಾನಕೂರ, ಗಿಳಿಮಾವು, ಮಲ್ಲಿಕಾ, ಮಲಗೋಬಾ ಸೇರಿದಂತೆ ಹಲವಾರು ತಳಿಯ ಮಾವು ಬೆಳೆಯಲಾಗಿದೆ. ಮಾವಿನ ಕಣಜ ಎಂದೇ ಪ್ರಸಿದ್ಧವಾಗಿರುವ ತಾಲೂಕಿನ ಪಾಳಾ ಭಾಗದಲ್ಲಿ ಲಕ್ಷಾಂತರ ರೂಪಾಯಿ ನೀಡಿ ಗೇಣಿ ಹಿಡಿದ ದಲ್ಲಾಳಿಗಳು ಈಗಾಗಲೇ ಇಲ್ಲಿ ಲಗ್ಗೆ ಇಟ್ಟು ತಮ್ಮ ಕಾರ್ಯ ಪ್ರಾರಂಭಿಸಿದ್ದಾರೆ.ಪ್ರತಿ ಸಲ ದಲ್ಲಾಳಿಗಳು ವರ್ಷದಿಂದ ವರ್ಷಕ್ಕೆ ದ್ವಿಗುಣ ಹಾಗೂ ತ್ರಿಗುಣ ದರ ಏರಿಸಿ ಇಲ್ಲಿಯ ಮಾವಿನ ಕೊಪ್ಪಲುಗಳನ್ನು ಗುತ್ತಿಗೆ ಪಡೆಯುತ್ತಾರೆ. ಎರಡ್ಮೂರು ತಿಂಗಳ ಕಾಲ ಸಾವಿರಾರು ರುಪಾಯಿ ವೇತನ ನೀಡಿ ಕಾವಲುಗಾರನ್ನು ನೇಮಿಸಿ ಬೆಲೆ ಬಾಳುವ ಔಷಧಿ ಸಿಂಪರಣೆ ಮಾಡುವುದು ಸೇರಿದಂತೆ ವಿವಿಧ ರೀತಿ ತೋಪುಗಳನ್ನು ನಿರ್ವಹಿಸಲು ಲಕ್ಷಾಂತರ ರುಪಾಯಿ ವ್ಯಯಿಸುತ್ತಾರೆ. ಪ್ರಾರಂಭದ ವಾತಾವರಣ ನೋಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಮಾವಿನ ತೋಟಗಳನ್ನು ಲಕ್ಷಾಂತರ ರೂಪಾಯಿಗೆ ಗುತ್ತಿಗೆ ಪಡೆದು ಹಲವು ತಿಂಗಳು ನಿರ್ವಹಣೆ ಮಾಡಿ ಕೊನೆಯ ಕ್ಷಣದಲ್ಲಿ ಕೈ ಸುಟ್ಟುಕೊಂಡ ಅನುಭವ ಕೂಡ ಮಾವು ವ್ಯಾಪಾರಸ್ಥರಿಗಾದ ಉದಾಹರಣೆಗಳು ಸಾಕಷ್ಟಿವೆ.ಇಲಾಖೆ ನಿರ್ಲಕ್ಷ್ಯ:ಇಲ್ಲಿ ಬತ್ತದ ಬೆಳೆ ಹೊರತುಪಡಿಸಿ ಇನ್ನಾವುದೇ ರೀತಿ ವಾಣಿಜ್ಯ ಬೆಳೆ ಬೆಳೆಯಲು ಅವಕಾಶ ತೀವ್ರ ಕಡಿಮೆ ಇರುವುದರಿಂದ ಇಲ್ಲಿಯ ಬಹುತೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಮಾವಿನ ತೋಪು ಮಾಡಿಕೊಂಡಿದ್ದಾರೆ. ಇಲ್ಲಿಂದ ಸಾಕಷ್ಟು ಪ್ರಮಾಣದ ಮಾವಿನ ಬೆಳೆ ವಿವಿಧ ರಾಜ್ಯಗಳಿಗೂ ರಪ್ಪಾಗುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ ಸಂಬಂಧಿಸಿದ ತೋಟಗಾರಿಕೆ ಇಲಾಖೆಯಿಂದ ಮಾವು ಬೆಳೆಗಾರರಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಸರ್ಕಾರದಿಂದ ಬರುವ ಸಹಾಯ ಧನ ತರಿಸಿ ಕೈತೊಳೆದುಕೊಳ್ಳುತ್ತಾರೆ ವಿನಃ ಬೆಳೆಗಳ ಪೋಷಣೆ, ನಿರ್ವಹಣಾ ಕ್ರಮಗಳ ಬಗ್ಗೆ ರೈತರಿಗೆ ಸಮರ್ಪಕವಾದ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕೆಲಸ ಈ ವರೆಗೂ ನಡೆಯುತ್ತಿಲ್ಲ ಎಂಬುವುದು ರೈತರ ಆರೋಪ. ಈ ವೇಳೆಯಲ್ಲಾದರೂ ಮಾವಿನ ಫಸಲಿನ ಪಾಲನೆ, ಪೋಷಣೆ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ನೀಡಲು ಮುಂದಾಗಬೇಕಿದೆ ಎಂಬುವುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.ಪ್ರಸಕ್ತ ಸಾಲಿನಲ್ಲಿ ಮಾವಿನ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಹೂ ಬಿಟ್ಟಿದ್ದು, ಉತ್ತಮ ಫಸಲು ಬರುವ ನಿರೀಕ್ಷೆ ಇದೆ. ಈ ಬಾರಿ ಹೂವು ಬಿಡುವುದು ತಡವಾಗಿದೆ ವಿನಃ ಇನ್ನಾವುದೇ ತೊಂದರೆಯಾಗಿಲ್ಲ. ಫಸಲು ಬರುವುದು ವಾಡಿಕೆಗಿಂತ ೧ ತಿಂಗಳು ತಡವಾಗಬಹುದು ಎಂದು ಸಹಾಯಕ ತೋಟಗಾರಿಕಾ ಇಲಾಖೆ ನಿರ್ದೇಶಕ ಕೃಷ್ಣ ಕುಳ್ಳೂರ ಹೇಳಿದರು.ಪ್ರಾರಂಭದಲ್ಲಿ ಮಾವಿನ ಮರಗಳು ಹೂ ಬಿಡುವುದು ವಿಳಂಬವಾಗಿದ್ದರಿಂದ ಫಸಲಿನ ಇಳುವರಿ ಕ್ಷೀಣಿಸುವ ಆತಂಕ ಎದುರಾಗಿತ್ತು. ಆದರೆ ಈಗ ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಟ್ಟಿರುವುದರಿಂದ ಉತ್ತಮ ಫಸಲಿನ ನಿರೀಕ್ಷೆ ಮೂಡಿದೆ. ಮುಂದಿನ ದಿನಗಳಲ್ಲಿ ಹವಾಮಾನ ಕೂಡ ಕೈಹಿಡಿಯಬೇಕಿದೆ ಎಂದು ಮಾವು ಬೆಳೆಗಾರ ಮಹ್ಮದಗೌಸ್ ಪಾಟೀಲ ಹೇಳಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))