ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಹದಿನೆಂಟನೇ ಶತಮಾನದಲ್ಲಿದ್ದ ಯೋಗಿ ನಾರೇಯಣ ಯತಿಗಳು ಎಲ್ಲಾ ಜಾತಿ, ವರ್ಗ, ಧರ್ಮ ಮೀರಿದ ಮಹರ್ಷಿ ಎಂದು ಚಿತ್ರದುರ್ಗ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಟ್ರೆಹಳ್ಳಿ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀಲಕ್ಷ್ಮೀವೆಂಕಟೇಶ್ವರ, ಶ್ರೀ ಮಹಾಗಣಪತಿ ಹಾಗೂ ಸದ್ಗುರು ಶ್ರೀ ಯೋಗಿ ನಾರೇಯಣಸ್ವಾಮಿ ತಾತಯ್ಯನವರ ನೂತನ ಬಿಂಬ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಬಲಿಜ ಶ್ರೇಯ ಭವನ ಲೋಕಾರ್ಪಣೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಲ್ಯಾಣ ಮಂಟಪ ಯಾವ ಜಾತಿ, ಧರ್ಮಕ್ಕೂ ಸೀಮಿತವಾಗದೇ ಎಲ್ಲರಿಗೂ ಉಪಯೋಗವಾಗಲಿ. ಬಲಿಜ ಜನಾಂಗದಲ್ಲಿ ಯಶಸ್ವಿ ಉದ್ಯಮಿಗಳು, ನೌಕರರಿದ್ದು ಅವರು ಸಹ ಸಮಾಜದ ಏಳ್ಗೆ ಬೆಳವಣಿಗೆಗೆ ಶ್ರಮಿಸಬೇಕು. ಹೆದ್ದಾರಿ ಪಕ್ಕದ ಈ ಭವನ ಎಲ್ಲರಿಗೂ ಸದ್ಬಳಕೆಯಾಗಲಿ ಎಂದರು.ಗೌರಿಗದ್ದೆಯ ವಿನಯ್ ಗುರೂಜಿ ಮಾತನಾಡಿ, ಶ್ರೀರಾಮಚಂದ್ರ ಮರ್ಯಾದಾಪುರುಷೋತ್ತಮ. ಆತ ದೇವರು ಎಂಬುದಕ್ಕಿಂತ ಎಲ್ಲರಿಗೂ ಆದರ್ಶ ಪುರುಷ. ರಾಮನ ಆದರ್ಶ ನಮಗೆಲ್ಲ ಮಾದರಿ. ಸಣ್ಣ ಸಮುದಾಯವೊಂದರ ಜನರೆಲ್ಲ ಸೇರಿ ದೊಡ್ಡ ಭವನ ನಿರ್ಮಿಸಿರುವುದು ಅವರಲ್ಲಿನ ಕಾರ್ಯ ಕ್ಷಮತೆಗೆ ಸಾಕ್ಷಿ. ಇದು ಸರ್ವಜನಾಂಗದವರ ಕಲ್ಯಾಣ ಕಾರ್ಯಗಳಿಗೆ ನೆರವಾಗುವುದರ ಜೊತೆಗೆ ಬರುವ ಆದಾಯವನ್ನು ಸಮಾಜದ ಅಭಿವೃದ್ಧಿಗೆ, ಬಡ ಮಕ್ಕಳ ಶೈಕ್ಷಣಿಕ ಉನ್ನತಿಗೆ ಬಳಸಿ ಎಂದು ಸಲಹೆ ನೀಡಿದರು.
ಬೆಂಗಳೂರಿನ ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ ಶಿಕ್ಷಣದಲ್ಲಿ ಧರ್ಮ, ತ್ಯಾಗ, ಸೇವೆ, ಪರೋಪಕಾರದ ಗುಣವಿರಬೇಕು. ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಯಾವ ದೇವರಲ್ಲೂ ಜಾತಿ, ಮತಗಳ ಭೇದವಿಲ್ಲ. ಹಾಗಾಗಿ ಜನರೂ ಸಹ ಜಾತಿ ಭೇದವಿಟ್ಟುಕೊಳ್ಳದೆ ಮನುಷ್ಯ ಜಾತಿ ಒಂದೇ ಎಂದು ಬದುಕಬೇಕು ಎಂದರು.ಪ್ರಾಸ್ತಾವಿಕವಾಗಿ ನಾ. ತಿಪ್ಪೇಸ್ವಾಮಿ ಮಾತನಾಡಿ, ಪರಿಶ್ರಮ ಹಾಕುವವರ ಜೊತೆ ಭಗವಂತನ ಆಶೀರ್ವಾದ ಸದಾ ಇರುತ್ತದೆ. ಸಚಿವ ಡಿ ಸುಧಾಕರ್ ಹಿಂದೆ ಶಾಸಕರಾಗಿದ್ದಾಗ 50 ಲಕ್ಷ ಅನುದಾನ ನೀಡಿದ್ದರು. ಆದರೆ ನಿವೇಶನ ಸಿಗದೇ ಅನುದಾನ ರದ್ದಾಯಿತು. ವೆಂಕಟಾಚಲ ಎಂಬುವವರು ನಿವೇಶನ ನೀಡಲು ಮುಂದೆ ಬಂದರು. ಭಗವಂತನ ಇಚ್ಛೆಯಿಂದ, ತಮ್ಮೆಲ್ಲರ ಸಹಕಾರದಿಂದ ತಾಲೂಕಿನಲ್ಲಿ ಭವ್ಯ ಭವನ ನಿರ್ಮಾಣವಾಗಿದೆ. ಶಾಲೆಗಳು, ಮನೆಗಳು, ದೇವಾಲಯಗಳು ಹೆಚ್ಚು ಹೆಚ್ಚು ನಿರ್ಮಾಣವಾಗುವ ಮೂಲಕ ಸಮಾಜ ಪರಿವರ್ತನೆಯ ಕೇಂದ್ರಗಳಾಗಬೇಕು ಎಂದರು.
ಸಚಿವ ಡಿ ಸುಧಾಕರ್, ಬಾಲ್ಡ್ ವಿನ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ್, ಯೋಗಿ ನಾರೇಯಣ ಬಲಿಜ ಸಂಘದ ಅಧ್ಯಕ್ಷ ತಿಮ್ಮಶೆಟ್ಟಿ, ಬಾಜಪ ರಾಜ್ಯ ಕಾರ್ಯದರ್ಶಿ ಮುನಿರಾಜು, ಮಾಜಿ ಸಂಸದ ಜನಾರ್ದನ ಸ್ವಾಮಿ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕಾಂತರಾಜು ಚಿದಾನಂದ್, ವೆಂಕಟಾಚಲ, ರಾಮಲಿಂಗಪ್ಪ, ನರಸಿಂಹ ಮೂರ್ತಿ, ಸೇತುರಾo, ಗಿರಿಜಾ ಶಂಕರ್, ಅಶೋಕ್, ಪದ್ಮನಾಭ್, ಬಿ.ಎನ್. ಪ್ರಕಾಶ್, ನರೇಂದ್ರ ಬಾಬು, ವೆಂಕಟೇಶ್, ಅಣ್ಣಪ್ಪ ಹಾಜರಿದ್ದರು.