ಸಾರಾಂಶ
ಅಂಕೋಲಾ, ಹುಬ್ಬಳ್ಳಿ, ಗದಗ ಹಾಗೂ ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಿಂದ ಮಾವು ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. ಗುಣಮಟ್ಟ ಹಾಗೂ ಗಾತ್ರಕ್ಕೆ ಅನುಗುಣವಾಗಿ ಮಾರಾಟಗಾರರು ಬೆಲೆ ನಿಗದಿಪಡಿಸಿದ್ದಾರೆ.
ಫಕೃದ್ದೀನ್ ಎಂ.ಎನ್.
ನವಲಗುಂದ: ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳ ವ್ಯಾಪಾರ ಜೋರಾಗಿದೆ. ಗ್ರಾಹಕರು ತರಹೇವಾರಿ ಮಾವು ಖರೀದಿಸಿ ರುಚಿ ಸವಿಯುತ್ತಿದ್ದಾರೆ. ಆಪೂಸ್ ಮಾವು ಹೆಚ್ಚು ಮಾರಾಟವಾಗುತ್ತಿದೆ.ಆಪೂಸ್ ಮಾವು ಡಜನ್‍ಗೆ ₹250ರಿಂದ 300, ಕಲ್ಮಿ ₹250ರಿಂದ ₹300, ಸಿಂದೂರ ₹200ರಿಂದ ₹250 ರಸಪುರಿ ₹300ರಿಂದ ₹350, ಮಲ್ಲಿಕಾ ₹450ರಿಂದ ₹500, ಇಶಾಡ ₹400ರಿಂದ ₹600ರ ವರೆಗೆ ಮಾರಾಟವಾಗುತ್ತಿದೆ.ಬೆನುಷಾ ಕೆಜಿ ₹60ರಿಂದ ₹100 ಹಾಗೂ ತೋತಾಪುರಿ ಮಾವಿನಹಣ್ಣು ಕೆಜಿಗೆ ₹60ರಿಂದ ₹80ರವರೆಗೆ ದರ ಇದೆ. ಮಾರುಕಟ್ಟೆಯಲ್ಲಿ ಆಪೂಸ್ ಹಣ್ಣುಗಳು ಹೆಚ್ಚಿವೆ. ಸಿಂದೂರ, ಇಶಾಡ, ಕಲ್ಮಿ, ರಸಪುರಿ, ಮಲ್ಲಿಕಾ ಹಣ್ಣುಗಳು ಹೆಚ್ಚಾಗಿ ಪೂರೈಕೆಯಾಗುತ್ತಿದೆ.
ಅಂಕೋಲಾ, ಹುಬ್ಬಳ್ಳಿ, ಗದಗ ಹಾಗೂ ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಿಂದ ಮಾವು ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. ಗುಣಮಟ್ಟ ಹಾಗೂ ಗಾತ್ರಕ್ಕೆ ಅನುಗುಣವಾಗಿ ಮಾರಾಟಗಾರರು ಬೆಲೆ ನಿಗದಿಪಡಿಸಿದ್ದಾರೆ.ಲಿಂಗರಾಜವೃತ್ತ, ಇಬ್ರಾಹಿಂಪುರ ರಸ್ತೆ, ಬಸ್ ನಿಲ್ದಾಣ ಮುಂಭಾಗ ಗಾಂಧಿ ಮಾರುಕಟ್ಟೆ ಸಹಿತ ನಗರದ ಮುಖ್ಯರಸ್ತೆಗಳ ಬದಿಯಲ್ಲಿ ವ್ಯಾಪಾರಿಗಳು ಮಾವು ಮಾರಾಟದಲ್ಲಿ ತೊಡಗಿದ್ದಾರೆ. ಬುಟ್ಟಿಗಳಲ್ಲಿ ರಾಶಿ ರಾಶಿಯಾಗಿ ಹಣ್ಣುಗಳನ್ನು ಇಟ್ಟುಕೊಂಡು ಗ್ರಾಹಕರನ್ನು ಆಕರ್ಷಿಸಿ ಮಾರಾಟ ಮಾಡುತ್ತಿದ್ದಾರೆ.
ಈ ವರ್ಷ ಇಳುವರಿ ಕುಸಿದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕಳೆದ ವರ್ಷ ಅತಿಯಾದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಮರಗಳು ಜನವರಿ ಕಳೆದರೂ ಹೂವು ಬಿಟ್ಟಿರಲಿಲ್ಲ. ಇದೇ ಸಮಯಕ್ಕೆ ಮತ್ತೊಮ್ಮೆ ಚಿಗುರೊಡೆದಿತ್ತು. ಹೂವು ಬಿಡುವುದು ತಡವಾಗಿ, ಕಾಯಿ ಕಟ್ಟುವುದು ನಿಧಾನವಾಗಿತ್ತು. ಆದ್ದರಿಂದ ಮಾರುಕಟ್ಟೆಗೆ ಹಣ್ಣು ಬರುವುದು ತಡವಾಗಿದೆ. ಬೆಲೆ ಸ್ವಲ್ಪ ದುಬಾರಿಯೂ ಇದೆ. ಇನ್ನೂ ಎರಡು ವಾರ ಕಳೆದರೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಪೂರೈಕೆಯಾಗುತ್ತದೆ. ಆಗ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹಣ್ಣಿನ ವ್ಯಾಪಾರಿಯೊಬ್ಬರು ಹೇಳಿದರು.ಕಳೆದ ವರ್ಷಕ್ಕಿಂತ ಮಾವಿನ ಬೆಲೆ ದುಬಾರಿಯಾಗಿದೆ. ಬೇಡಿಕೆಯಷ್ಟು ಹಣ್ಣು ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಪ್ರತಿ ದಿನ ಸರಾಸರಿ 20ರಿಂದ 40 ಡಜನ್ ಹಣ್ಣುಗಳು ಮಾರಾಟವಾಗುತ್ತವೆ ಎಂದು ಹಣ್ಣಿನ ವ್ಯಾಪಾರಿ ಅಬ್ದುಲ್ ಚಿಕ್ಕೋಡಿ ಹೇಳಿದರು.