ಸಾರಾಂಶ
ಹಿಂದೊಮ್ಮೆ ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಹ ಜಯದೇವ ಆಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏಮ್ಸ್ ಸಂಸ್ಧೆ ನಮ್ಮ ಮಾದರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದೆಹಲಿಯಲ್ಲಿ ಈ ವ್ಯವಸ್ಥೆ ತರಲು ಹೊರಟಿದೆ ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಾನು ಜಯದೇವ ಆಸ್ಪತ್ರೆಯ ನಿರ್ವಹಣೆ ಜವಾಬ್ದಾರಿ ಹೊತ್ತಾಗ ಕೇವಲ 300 ಹಾಸಿಗೆಗಳ ವ್ಯವಸ್ಥೆ ಇತ್ತು. ಇದೀಗ 2 ಸಾವಿರ ಹಾಸಿಗೆಗಳ ಜತೆಗೆ 2,500ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುವಂತಾಗಿದೆ. ಸಣ್ಣ ಬದಲಾವಣೆ ಮೂಲಕ ಆಸ್ಪತ್ರೆಯನ್ನು ವಿಶ್ವದರ್ಜೆಗೆ ಏರಿಸಿದ್ದೇವೆ ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಆಸ್ಪತ್ರೆ ನಿರ್ದೇಶಕರಾಗಿ ತಮ್ಮ ಸೇವಾವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಬುಧವಾರ ಕೊನೆಯ ದಿನ ಕರ್ತವ್ಯ ಪೂರೈಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಹ ಜಯದೇವ ಆಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಏಮ್ಸ್ ಸಂಸ್ಧೆ ನಮ್ಮ ಮಾದರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದೆಹಲಿಯಲ್ಲಿ ಈ ವ್ಯವಸ್ಥೆ ತರಲು ಹೊರಟಿದೆ. ಇದೇ ಮಾದರಿಯಲ್ಲಿ ಇನ್ನಷ್ಟು ಸರ್ಕಾರಿ ಆಸ್ಪತ್ರೆಗಳಿಗೆ ಇನ್ನೂ ಉತ್ತಮ ಮಾದರಿ ಅಳವಡಿಕೆ ಅಗತ್ಯ ಎಂದು ಸಲಹೆ ನೀಡಿದರು.
2005ರಲ್ಲಿ ಆಸ್ಪತ್ರೆ ತ್ಯಜಿಸುವ ಮನಸ್ಸು ಮಾಡಿದ್ದೆ. ಆಗ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನನಗೆ ಇಲ್ಲಿಯೇ ಕೆಲಸ ಮಾಡುವಂತೆ ಸೂಚಿಸಿದ್ದರು. ದೊಡ್ಡವರ ಮಾತು ಕೇಳಿದರೆ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಇಂದು ದೇವೇಗೌಡರ ಮಾತು ಸಾಕ್ಷಿಯಾಗಿದೆ.
ನಮ್ಮ ನೋವು ನಮಗೆ ಗೊತ್ತಾದರೆ ಜೀವಂತವಾಗಿದ್ದೀವಿ ಎಂದರ್ಥ. ಅದೇ ಬೇರೆಯವರ ನೋವು ನಮಗೆ ತಿಳಿದರೆ ಮನುಷ್ಯರಾಗಿದ್ದೇವೆ ಎಂದು ಅರ್ಥ ಎನ್ನುತ್ತಾ ಭಾವುಕರಾದರು.
ಜಯದೇವದಲ್ಲಿ ಮೊದಲು ಚಿಕಿತ್ಸೆ ಬಳಿಕ ಹಣ ಪಾವತಿ ವ್ಯವಸ್ಥೆ ಜತೆಗೆ ಶುಚಿತ್ವಕ್ಕೆ ಸಾಕಷ್ಟು ಪ್ರಾಮುಖ್ಯತೆ ಕೊಟ್ಟಿದ್ದೇವೆ. ಪ್ರತಿದಿನವೂ ಹೊಸದನ್ನು ತರುವುದರ ಮೂಲಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶ್ರಮಿಸಿದ್ದೇವೆ.
ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಿಕೊಂಡು ಗುಣಮಟ್ಟದ ಚಿಕಿತ್ಸಾ ಸೇವೆಗಳನ್ನು ನೀಡುತ್ತಾ ಬಂದಿದ್ದೇವೆ. ಈ ಹಾದಿಯಲ್ಲಿ ಸರ್ಕಾರಗಳು, ದಾನಿಗಳು, ಮಾಧ್ಯಮಗಳು ದೊಡ್ಡ ಮಟ್ಟದ ಸಹಕಾರ ನೀಡಿವೆ ಎದು ನೆನೆದರು.
ಭಾವುಕರಾದ ಸಿಬ್ಬಂದಿ: ಡಾ.ಸಿ.ಎನ್. ಮಂಜುನಾಥ್ ಅವರ ಅವಧಿ ಅಂತ್ಯವಾಗಿ ಕೊನೆಯ ದಿನ ಆಸ್ಪತ್ರೆ ಬಿಟ್ಟು ಹೋಗುವಾಗ ಸಿಬ್ಬಂದಿ ಹಾಗೂ ರೋಗಿಗಳು ಕಣ್ಣೀರು ಸುರಿಸಿದರು. ಸಿಬ್ಬಂದಿ, ರೋಗಿಗಳು ಹಾಗೂ ಸಾರ್ವಜನಿಕರ ಪ್ರೀತಿ ವಿಶ್ವಾಸಕ್ಕೆ ಮಂಜುನಾಥ್ ಅವರೂ ಭಾವುಕರಾದರು.
ಜಯದೇವ ಆಸ್ಪತ್ರೆಗೆ ಡಾ.ರವೀಂದ್ರ ಪ್ರಭಾರಿ ನಿರ್ದೇಶಕ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಜಯದೇವ ಆಸ್ಪತ್ರೆ) ನಿರ್ದೇಶಕ ರಾಗಿದ್ದ ಡಾ.ಸಿ.ಎನ್. ಮಂಜುನಾಥ್ ಅವರ ನಿವೃತ್ತಿಯಿಂದ ತೆರವಾದ ಹುದ್ದೆಗೆ ಡಾ.ಕೆ.ಎಸ್. ರವೀಂದ್ರ ನಾಥ್ ಅವರನ್ನು ಪ್ರಭಾರಿ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆಯಬೇಕಿದ್ದ ಜಯದೇವ ಆಸ್ಪತ್ರೆ ಆಡಳಿತ ಮಂಡಳಿ ಸಭೆ ಮುಂದೂಡಲಾಗಿದ್ದು, ಫೆಬ್ರುವರಿ ಎರಡನೇ ವಾರ ನಡೆಯಲಿರುವ ಸಭೆಯಲ್ಲಿ ನಿರ್ದೇಶಕರ ಆಯ್ಕೆ ನಡೆಯಲಿದೆ.
ನೂತನ ನಿರ್ದೇಶಕರ ಆಯ್ಕೆ ಆಗುವವರೆಗೆ ಪ್ರಭಾರಿಯಾಗಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಹಾಗೂ ಗುತ್ತಿಗೆ ಆಧಾರದ ಮೇಲೆ ಜಯದೇವ ಹೃದ್ರೋಗ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ.ಕೆ.ಎಸ್. ರವೀಂದ್ರನಾಥ್ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ಒಟ್ಟು 35 ವರ್ಷ ಸೇವೆ ಹಾಗೂ ನಿರ್ದೇಶಕರಾಗಿಯೇ 16 ವರ್ಷ ಸೇವೆ ಸಲ್ಲಿಸಿರುವ ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಜ.31ಕ್ಕೆ ಮುಕ್ತಾಯಗೊಂಡಿದೆ.
ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು ಬುಧವಾರ ಆದೇಶ ಹೊರಡಿಸಿದ್ದು, ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಡಾ.ಕೆ.ಎಸ್.ರವೀಂದ್ರ ನಾಥ್ ಅವರನ್ನು ಪ್ರಭಾರಿ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.