ಪರಿಸರ ರಕ್ಷಿಸಿದರೆ ಮಾನವಕುಲ ಉಳಿದೀತು: ಮಹಾಂತೇಶ ರೇವಡಿ

| Published : Jun 07 2024, 12:33 AM IST

ಸಾರಾಂಶ

ಪ್ರಕೃತಿ ಮಾನವನ ಎಲ್ಲ ಅವಶ್ಯಕತೆಗಳನ್ನು ಪೂರೈಸಬಲ್ಲದೇ ಹೊರತು ದುರಾಸೆಗಳನ್ನಲ್ಲ.

ಅಂಕೋಲಾ: ಪರಿಸರ ರಕ್ಷಣೆಯ ಸಮಸ್ಯೆ ಮಾನವ ಜನಾಂಗ ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ. ಸೌರಮಂಡಲದಲ್ಲಿ ಭೂಮಿ ಮಾತ್ರ ಮಾನವನಿಗೆ ವಾಸಿಸಲು ಯೋಗ್ಯವಾದ ಏಕಮಾತ್ರ ಗ್ರಹವಾಗಿದೆ. ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದು ನಿವೃತ್ತ ಗ್ರಂಥಪಾಲಕ, ಲೇಖಕ ಮಹಾಂತೇಶ ರೇವಡಿ ತಿಳಿಸಿದರು.

ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಹಾಗೂ ವಿವೇಕ ಸೌಹಾರ್ದ ಸಹಕಾರಿ ಬೇಲೆಕೇರಿಯ ಸಮುದ್ರ ತಟದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಏರ್ಪಡಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿ, ಪ್ರಕೃತಿ ಮಾನವನ ಎಲ್ಲ ಅವಶ್ಯಕತೆಗಳನ್ನು ಪೂರೈಸಬಲ್ಲದೇ ಹೊರತು ದುರಾಸೆಗಳನ್ನಲ್ಲ. ಮಾನವನ ಅತಿ ಆಸೆ, ಹಸ್ತಕ್ಷೇಪದಿಂದ ಭೂಮಿ ಬದುಕಲು ಅನರ್ಹವಾಗುತ್ತಿದ್ದು, ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದರು.

ಲಯನ್ಸ್‌ನ ಅಧ್ಯಕ್ಷ ಮಂಜುನಾಥ ನಾಯಕ ಮಾತನಾಡಿ, ಗಿಡ ನೆಡುವ ಶ್ರದ್ಧೆ ಅದನ್ನು ಬೆಳೆಸುವಲ್ಲಿ ಕೂಡ ಇರಬೇಕು ಎಂದರು.

ಲಯನ್ಸ್ ಹಿರಿಯ ಸದಸ್ಯ ದೇವಾನಂದ ಗಾಂವಕರ, ವಿವೇಕ ಸೌಹಾರ್ದದ ಮುಖ್ಯಸ್ಥ ಕೇಶವಾನಂದ ನಾಯಕ ಮಾತನಾಡಿದರು.

ಪ್ರಮುಖರಾದ ಆರ್.ಟಿ. ನಾಯಕ, ವಿನಾಯಕ ಶೆಟ್ಟಿ, ತಿಮ್ಮಪ್ಪ ನಾಯಕ, ಲಯನ್ಸ್ ಸದಸ್ಯರಾದ ಎಸ್.ಆರ್. ಉಡುಪಿ, ಮಂಜುನಾಥ ಹರಿಕಂತ್ರ, ಗಣಪತಿ ನಾಯಕ, ಸದಾನಂದ ಶೆಟ್ಟಿ, ಶಂಕರ ಹುಲಸ್ವಾರ ಉಪಸ್ಥಿತರಿದ್ದರು.

ಹಿರಿಯರ ನೆನಪಲ್ಲಿ ಗಿಡ ನೆಡುವ ಸಂಪ್ರದಾಯ

ಅಗಲಿದ ಹಿರಿಯರ ನೆನಪಿನಲ್ಲಿ ಗಿಡ ನೆಡುವ ಸಂಪ್ರದಾಯವನ್ನು ಅಂಕೋಲೆಯ ಲಯನ್ಸ್ ಕ್ಲಬ್ ಹಾಗೂ ವಿವೇಕ ಸೌಹಾರ್ದ ಸಹಕಾರಿ ಅನೇಕ ವರ್ಷಗಳಿಂದ ಮಾಡುತ್ತ ಬಂದಿದೆ. ಈಗಾಗಲೇ ನೆಟ್ಟ ಗಿಡಗಳು ಮುಗಿಲೆತ್ತರಕ್ಕೆ ಬೆಳೆದಿವೆ. ಹಿರಿಯ ಚೇತನಗಳಾದ ಬಿ.ಎಂ. ಸನದಿ, ವಿ.ಜೇ. ನಾಯಕ, ಬಿ.ಆರ್. ನಾಯಕ, ಅವಿನಾಶ ತಿನೇಕರ, ವಿಷ್ಣು ನಾಯ್ಕ ಮುಂತಾದವರ ನೆನಪಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಬೇಲೆಕೇರಿಯ ಹಿರಿಯ ಸಹಕಾರಿ ಧುರೀಣ ವಿ.ಆರ್. ನಾಯಕರ ಪತ್ನಿ ನಾಗಮ್ಮ ನಾಯಕರ ಸ್ಮರಣಾರ್ಥ ಅವರ ಮಗ ರಾಮದಾಸ್ ನಾಯಕರ ಹಸ್ತದಿಂದ ಹಣ್ಣಿನ ಗಿಡವನ್ನು ನೆಡಲಾಯಿತು.